ನವದೆಹಲಿ: ಭ್ರಷ್ಟರನ್ನು ಪಕ್ಷಕ್ಕೆ ಸೇರಿಸಿ ಅವರಿಗೆ ಸ್ಥಾನಮಾನವನ್ನು ದಯಪಾಲಿಸುವವರೂ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಹೇಳಿದ್ದಾರೆ.
ಪ್ರಧಾನಮಂತ್ರಿ, ಮುಖ್ಯಮಂತ್ರಿ ಹಾಗೂ ಸಚಿವರು 30 ದಿನಕ್ಕಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾದರೆ ಅವರು ತಮ್ಮ ಸ್ಥಾನವನ್ನು ಸ್ವಯಂ ಕಳೆದುಕೊಳ್ಳುವ ಮಸೂದೆಯ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಕಚೇರಿ ಮಾಡಿದ ಪೋಸ್ಟ್‌ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಐದು ವರ್ಷಗಳಿಗಿಂತ ಹೆಚ್ಚು ಜೈಲು ಶಿಕ್ಷೆಗೆ ಗುರಿಯಾಗುವ ಅಪರಾಧಗಳಲ್ಲಿ ಆರೋಪಿಗಳಾಗುವ ಸಚಿವರು, ಮುಖ್ಯಮಂತ್ರಿಗಳು ಅಥವಾ ಪ್ರಧಾನ ಮಂತ್ರಿಗಳು ಜೈಲಿನಿಂದ ಸರ್ಕಾರವನ್ನು ನಡೆಸುವುದರ ಔಚಿತ್ಯವನ್ನು ಶಾ ತಮ್ಮ ಹೇಳಿಕೆಯಲ್ಲಿ ಪ್ರಶ್ನಿಸಿದ್ದರು.
ಇದಕ್ಕೆ ಎಕ್ಸ್ ಪೋಸ್ಟ್‌ನಲ್ಲಿ ಉತ್ತರಿಸಿರುವ ಕೇಜ್ರಿವಾಲ್, ‘ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಿಯಾದವರನ್ನು ಒಬ್ಬ ವ್ಯಕ್ತಿಯು ತನ್ನ ರಾಜಕೀಯ ಪಕ್ಷಕ್ಕೆ ಸೇರಿಸಿಕೊಂಡು, ಅವರ ಮೇಲಿನ ಎಲ್ಲಾ ಪ್ರಕರಣಗಳನ್ನು ತೆರವುಗೊಳಿಸಿ, ಮಂತ್ರಿ, ಉಪಮುಖ್ಯಮಂತ್ರಿ ಅಥವಾ ಮುಖ್ಯಮಂತ್ರಿಯಾಗಿ ಮಾಡಿದರೆ - ಅಂತಹ ಸಚಿವರು ಅಥವಾ ಪ್ರಧಾನಿ ಕೂಡ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೇ?’ ಎಂದು ಪ್ರಶ್ನಿಸಿದ್ದಾರೆ.
‘ಆ ವ್ಯಕ್ತಿಗೆ ಎಷ್ಟು ವರ್ಷಗಳ ಶಿಕ್ಷೆಯಾಗಬೇಕು? ಒಬ್ಬನ್ನು ಸುಳ್ಳು ಪ್ರಕರಣದಲ್ಲಿ ಜೈಲಿಗೆ ಕಳುಹಿಸಿ, ಬಳಿಕ ಆತ ನಿರಪರಾಧಿ ಎಂದು ಸಾಬೀತಾದರೆ, ಸುಳ್ಳು ಪ್ರಕರಣ ಹೆಣೆದ ಸಚಿವರಿಗೆ ಎಷ್ಟು ವರ್ಷ ಜೈಲು ಶಿಕ್ಷೆ?’ ಎಂದು ಪ್ರಶ್ನಿಸಿದ್ದಾರೆ.
ಗಂಭೀರ ಅಪರಾಧಗಳ ಆರೋಪ ಹೊತ್ತಿರುವ ಕಳಂಕಿತ ನಾಯಕರನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದೆಎಂದು ಎಎಪಿ ಆರೋಪಿಸುತ್ತಾ ಬಂದಿದೆ. ಇದೇ ಕಾರಣಕ್ಕಾಗಿ ಬಿಜೆಪಿಯನ್ನು ವಾಷಿಂಗ್ ಮಷೀನ್ ಎಂದು ಟೀಕೆ ಮಾಡಿದೆ. ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಕೇಂದ್ರ ತನಿಖಾ ಸಂಸ್ಥೆಗಳು ಕೇಜ್ರಿವಾಲ್ ಹಾಗೂ ಇತರ ನಾಯಕರನ್ನು ಸುಳ್ಳು ಪ್ರಕರಣಗಳಲ್ಲಿ ಬಂಧಿಸಿವೆ ಎಂದು ಎಎಪಿ ಆರೋಪಿಸಿದೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಹಾಲಿ ಮುಖ್ಯಮಂತ್ರಿಯೊಬ್ಬರು ಬಂಧನಕ್ಕೆ ಒಳಗಾದ ನಿದರ್ಶನ ಅದೇ ಮೊದಲು.
‘ಕೇಂದ್ರವು ರಾಜಕೀಯ ಪಿತೂರಿಯಡಿಯಲ್ಲಿ, ನನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸಿದಾಗ, ನಾನು ಸರ್ಕಾರವನ್ನು 160 ದಿನಗಳವರೆಗೆ ಜೈಲಿನಿಂದಲೇ ನಡೆಸಿದೆ’ ಎಂದು ಕೇಜ್ರಿವಾಲ್ ಮತ್ತೊಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಕಳೆದ ಏಳು ತಿಂಗಳುಗಳಲ್ಲಿ ದೆಹಲಿಯ ಬಿಜೆಪಿ ಸರ್ಕಾರ ನಗರವನ್ನು ಎಂತಹ ಸ್ಥಿತಿಗೆ ತಂದಿದೆ ಎಂದರೆ, ದೆಹಲಿಯ ಜನರು ನಾನು ಜೈಲಿನಿಂದ ಕಾರ್ಯನಿರ್ವಹಿಸಿದ ಸರ್ಕಾರವನ್ನು ಈಗ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೈಲಿನಿಂದ ಆಡಳಿತದ ಸರ್ಕಾರದ ಸಮಯದಲ್ಲಿ ವಿದ್ಯುತ್ ಕಡಿತವಿರಲಿಲ್ಲ, ನೀರು ಲಭ್ಯವಿತ್ತು, ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್‌ಗಳಲ್ಲಿ ಉಚಿತ ಔಷಧಿಗಳನ್ನು ನೀಡಲಾಗುತ್ತಿತ್ತು, ಉಚಿತ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು, ದೆಹಲಿಯಲ್ಲಿ ಒಂದೇ ಒಂದು ಮಳೆಯೂ ಇಷ್ಟೊಂದು ಹಾನಿಯನ್ನುಂಟುಮಾಡಲಿಲ್ಲ. ಖಾಸಗಿ ಶಾಲೆಗಳು ನಿರಂಕುಶವಾಗಿ ವರ್ತಿಸಲು ಅಥವಾ ಗೂಂಡಾಗಿರಿಯಲ್ಲಿ ತೊಡಗಲು ಅವಕಾಶವಿರಲಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.