ADVERTISEMENT

ಅಸಾದುದ್ದೀನ್ ಒವೈಸಿ ಮುಹಮ್ಮದ್ ಅಲಿ ಜಿನ್ನಾರ ಹೊಸ ಅವತಾರ: ತೇಜಸ್ವಿ ಸೂರ್ಯ

ಏಜೆನ್ಸೀಸ್
Published 24 ನವೆಂಬರ್ 2020, 6:16 IST
Last Updated 24 ನವೆಂಬರ್ 2020, 6:16 IST
ಸಂಸದ ತೇಜಸ್ವಿ ಸೂರ್ಯ
ಸಂಸದ ತೇಜಸ್ವಿ ಸೂರ್ಯ   

ಹೈದರಾಬಾದ್: ಬಿಜೆಪಿಯ ರಾಷ್ಟ್ರೀಯ ಯುವ ಮೋರ್ಚಾ (ಬಿಜೆವೈಎಂ) ಅಧ್ಯಕ್ಷ ಮತ್ತು ಲೋಕಸಭಾ ಸಂಸದ ತೇಜಸ್ವಿ ಸೂರ್ಯ ಅವರು ಸೋಮವಾರ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ ಅವರನ್ನು ಪಾಕಿಸ್ತಾನದ ಖೈದ್-ಎ-ಅಜಮ್ ಮುಹಮ್ಮದ್ ಅಲಿ ಜಿನ್ನಾ ಅವರ ಹೊಸ 'ಅವತಾರ' ಎಂದು ಕರೆದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣದ ಜನರು ಅಭಿವೃದ್ಧಿಗೆ ಮತ ಹಾಕಬೇಕು, ರಾಜವಂಶದ ರಾಜಕೀಯದ ವಿರುದ್ಧ ಮತ ಚಲಾಯಿಸಬೇಕು. ನಾವು ದೇಶದಲ್ಲಿ ಕುಟುಂಬ ರಾಜಕೀಯವನ್ನು ತೆಗೆದುಹಾಕಿದ್ದೇವೆ. ಕಾಶ್ಮೀರದಲ್ಲಿ ಒಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರನ್ನು ಜನರು ಶಾಶ್ವತ ಕ್ವಾರಂಟೈನ್‌ಗೆ ಕಳುಹಿಸಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ 100 ಸ್ಮಾರ್ಟ್ ಸಿಟಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ತೆಲಂಗಾಣಕ್ಕೆ ಮೀಸಲಿಟ್ಟ ಹಣ ಏನಾಗಿದೆ? ... ಒವೈಸಿ ಮುಹಮ್ಮದ್ ಅಲಿ ಜಿನ್ನಾ ಅವರ ಹೊಸ ಅವತಾರ. ಟಿಆರ್‌ಎಸ್ ಮತ್ತು ಎಂಐಎಂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಹೈದರಾಬಾದ್ ಅನ್ನು ಇಸ್ತಾಂಬುಲ್ ಆಗಿ ಪರಿವರ್ತಿಸಲು ಕೆಸಿಆರ್ ಬಯಸಿದ್ದಾರೆ. ಟರ್ಕಿಯು ಶೇ 100 ರಷ್ಟು ಮುಸ್ಲಿಂ ದೇಶ. ಟರ್ಕಿಯ ಅಧ್ಯಕ್ಷರು ನಮ್ಮ ದೇಶದ ವಿರುದ್ಧ ಮಾತನಾಡುತ್ತಾರೆ. ಭಾರತದ ಹೈದರಾಬಾದ್ ಪಾಕಿಸ್ತಾನದ ಹೈದರಾಬಾದ್‌ನಂತೆ ಕಾಣಬೇಕೆಂದು ಎಂಐಎಂ ಬಯಸಿದೆ. ನಾವು ಹೈದರಾಬಾದ್ ಅನ್ನು ಭಾಗ್ಯನಗರವನ್ನಾಗಿ ಮಾಡುತ್ತೇವೆ ಆದರೆ ಇಸ್ತಾಂಬುಲ್ ಆಗಿ ಅಲ್ಲ ಎಂದು ಹೇಳಿದರು.

ADVERTISEMENT

ಒವೈಸಿ ಅವರು 'ಉನ್ಮತ್ತ ಇಸ್ಲಾಮಿಸಂ, ಪ್ರತ್ಯೇಕತಾವಾದ ಮತ್ತು ಉಗ್ರವಾದ' ದ ಭಾಷೆಯನ್ನು ಮಾತನಾಡುತ್ತಿದ್ದಾರೆ. ಇದನ್ನು ಜಿನ್ನಾ ಕೂಡ ಬಳಸಿದ್ದಾರೆ. ಅಕ್ಬರುದ್ದೀನ್ ಮತ್ತು ಅಸಾದುದ್ದೀನ್ ಒವೈಸಿ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಅವರು ಹಳೆ ಹೈದರಾಬಾದ್‌ನಲ್ಲಿ ಅಭಿವೃದ್ಧಿಗೆ ಅವಕಾಶ ನೀಡಿಲ್ಲ, ಅವರು ಒತ್ತು ನೀಡಿದ ಏಕೈಕ ವಿಷಯವೆಂದರೆ ರೋಹಿಂಗ್ಯಾ ಮುಸ್ಲಿಮರು. ಒವೈಸಿಗೆ ನೀಡುವ ಪ್ರತಿ ಮತಗಳು ಭಾರತದ ವಿರುದ್ಧದ ಮತವಾಗಿರುತ್ತವೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ವ್ಯವಹಾರಗಳ ಸಚಿವಾಲಯದ ಜಿ ಕಿಶನ್ ರೆಡ್ಡಿ, ಹೈದರಾಬಾದ್ ಜನರು ಬದಲಾವಣೆ ಬಯಸುತ್ತಾರೆ ಮತ್ತು ಬಿಜೆಪಿ ಮಾತ್ರ ಇದನ್ನು ಸಾಧ್ಯವಾಗಿಸುತ್ತದೆ ಎಂದು ಹೇಳಿದರು.

ಈ ರಾಜವಂಶದ ರಾಜಕೀಯದಿಂದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ. ₹ 67,000 ಕೋಟಿ ಹಣವನ್ನು ಮುಖ್ಯಮಂತ್ರಿ ಎಲ್ಲಿ ಖರ್ಚು ಮಾಡಿದ್ದಾರೆ? ಹೈದರಾಬಾದ್ ನಗರವನ್ನು ಅಂತರರಾಷ್ಟ್ರೀಯ ವೇದಿಕೆಗೆ ತರಲು ಬಿಜೆಪಿ ಕೆಲಸ ಮಾಡುತ್ತದೆ. ನಮ್ಮದು ಶಾಂತಿಯುತ ಪಕ್ಷ. ನಾವು ಅಭಿವೃದ್ಧಿಗಾಗಿ ಕೆಲಸ ಮಾಡುತ್ತೇವೆ. ಈ ಜಿಎಚ್‌ಎಂಸಿ (ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಶನ್) ಚುನಾವಣೆಯಲ್ಲಿ ಹೈದರಾಬಾದ್ ಜನರು ಮುಂದೆ ಬಂದು ಬಿಜೆಪಿಗೆ ಮತ ಚಲಾಯಿಸುವಂತೆ ನಾನು ಕೋರುತ್ತೇನೆ. ನಾಳೆ ತೆಲಂಗಾಣವನ್ನು ಬದಲಾಯಿಸಲು ಹೈದರಾಬಾದ್ ಅನ್ನು ಇಂದು ಬದಲಾಯಿಸಿ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.