ಪಿಟಿಐ ಚಿತ್ರ
ಗುವಾಹಟಿ: 2026ರ ವೇಳೆಗೆ ಬಾಲ್ಯ ವಿವಾಹ ಮುಕ್ತ ರಾಜ್ಯವನ್ನಾಗಿ ಮಾಡಲು ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಶುಕ್ರವಾರ ತಿಳಿಸಿದ್ದಾರೆ.
ಗುವಾಹಟಿಯಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಬಾಲ್ಯ ವಿವಾಹದ ವಿರುದ್ದ ಸರ್ಕಾರವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಳೆದ ವರ್ಷ 6,500 ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಶೇ. 95 ಪ್ರಕರಣಗಳಲ್ಲಿ ಆರೋಪ ಪಟ್ಟಿ ದಾಖಲಿಸಲಾಗಿದೆ. 2026ರ ವೇಳೆಗೆ ಅಸ್ಸಾಂ ರಾಜ್ಯವನ್ನು ಬಾಲ್ಯ ವಿವಾಹ ಮುಕ್ತ ರಾಜ್ಯ ಎಂದು ಘೋಷಿಸಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ. 2020ರಲ್ಲಿ 1.21 ಲಕ್ಷ ಎಫ್‌ಐಆರ್ ದಾಖಲಾಗಿದ್ದವು, 2024ರಲ್ಲಿ ಅದು 50 ಸಾವಿರಕ್ಕೆ ಇಳಿದಿದೆ. ಕಳೆದ ಕೆಲವು ವರ್ಷಗಳಿಂದ ಅಪರಾಧಗಳ ಪ್ರಮಾಣ ಕೂಡ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.
‘ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯು ಭ್ರಷ್ಟಾಚಾರದಿಂದ ತುಂಬಿತ್ತು. ಯುವಕರಿಗೆ ಸರಿಯಾದ ಉದ್ಯೋಗಗಳು ಕೂಡ ಸೃಷ್ಠಿಯಾಗಿರಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ನಾವು 1,21,240 ಯುವಕರಿಗೆ ಸರ್ಕಾರಿ ಉದ್ಯೋಗ ನೀಡಿದ್ದೇವೆ. ರಾಜ್ಯದಲ್ಲಿ 4 ಲಕ್ಷ ಜನ ಸರ್ಕಾರಿ ನೌಕರರಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.