ADVERTISEMENT

ಪತ್ನಿ, ಮಗನ ಪಾಲುದಾರ ಕಂಪನಿಗೆ ಪಿಪಿಇ ಕಿಟ್‌ ಗುತ್ತಿಗೆ: ಅಸ್ಸಾಂ ಸಿಎಂ ಮೇಲೆ ಆರೋಪ

ಪಿಟಿಐ
Published 4 ಜೂನ್ 2022, 14:55 IST
Last Updated 4 ಜೂನ್ 2022, 14:55 IST
ಮನೀಶ್‌ ಸಿಸೋಡಿಯಾ
ಮನೀಶ್‌ ಸಿಸೋಡಿಯಾ   

ನವದೆಹಲಿ: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರು ಕೋವಿಡ್‌–19 ಸಂದರ್ಭದಲ್ಲಿ ಪಿಪಿಇ ಕಿಟ್ ಖರೀದಿಸುವ ಗುತ್ತಿಗೆಯನ್ನು ತಮ್ಮ ಸಂಬಂಧಿಗಳಿಗೆ ನೀಡಿದ್ದರು ಎಂದು ದೆಹಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಶನಿವಾರ ಆರೋಪಿಸಿದ್ದಾರೆ.

ಸಿಸೋಡಿಯಾ ಅವರುಪತ್ರಿಕಾಗೋಷ್ಟಿಯಲ್ಲಿ ಶರ್ಮಾ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಅಸ್ಸಾಂ ಆರೋಗ್ಯ ಸಚಿವರಾಗಿದ್ದ ಶರ್ಮಾ, 2020ರಲ್ಲಿ ಪಿಪಿಇ ಕಿಟ್‌ಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಮೊತ್ತಕ್ಕೆ ಸರಬರಾಜು ಮಾಡುವಂತೆ ತಮ್ಮ ಪತ್ನಿ ಹಾಗೂ ಮಗನ ಉದ್ಯಮ ಪಾಲುದಾರರ ಕಂಪೆನಿಗಳಿಗೆ ಗುತ್ತಿಗೆ ನೀಡಿದ್ದರು ಎಂದು ದೂರಿದ್ದಾರೆ.

ಮಾಧ್ಯಮಗಳ ವರದಿಯನ್ನು ಉಲ್ಲೇಖಿಸಿ ಮಾತನಾಡಿರುವ ದೆಹಲಿ ಉಪಮುಖ್ಯಮಂತ್ರಿ, ಅಸ್ಸಾಂ ಸರ್ಕಾರವು ಬೇರೆ ಕಂಪೆನಿಗಳ ಕಿಟ್‌ಗಳಿಗೆ ತಲಾ ₹ 600 ನೀಡಿ ಖರೀದಿಸುತ್ತಿತ್ತು. ಆದರೆ, ಕೋವಿಡ್‌ ತುರ್ತುಪರಿಸ್ಥಿತಿಯ ಲಾಭ ಪಡೆಯುವ ದೃಷ್ಟಿಯಿಂದ ಬಿಸ್ವ ಶರ್ಮಾ ಅವರು ತಮ್ಮ ಮಗ ಮತ್ತು ಹೆಂಡತಿಯ ಉದ್ಯಮ ಪಾಲುದಾರರ ಕಂಪೆನಿಗಳಿಗೆ ಪ್ರತಿ ಕಿಟ್‌ಗೆ ₹ 990 ನೀಡಿತುರ್ತಾಗಿ ಸರಬರಾಜು ಮಾಡುವಂತೆ ಆದೇಶಿಸಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.

ADVERTISEMENT

'ಕಿಟ್‌ ಸರಬರಾಜು ಮಾಡದ ಕಾರಣ ಶರ್ಮಾ ಅವರ ಹೆಂಡತಿ ಪಾಲುದಾರರಾಗಿರುವ ಕಂಪೆನಿಯ ಗುತ್ತಿಗೆ ರದ್ದು ಮಾಡಲಾಗಿತ್ತು. ಆದರೆ, ಅವರ ಮಗನ ಉದ್ಯಮ ಪಾಲುದಾರರ ಕಂಪೆನಿಯ ಪ್ರತಿ ಕಿಟ್‌ಗೆ ₹ 1,680 ರಂತೆ ಗುತ್ತಿಗೆ ನೀಡಲಾಗಿತ್ತು' ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.