ಹಿಮಂತ ಬಿಸ್ವಾ ಶರ್ಮಾ, ಅಸ್ಸಾಂ ಮುಖ್ಯಮಂತ್ರಿ
– ಪಿಟಿಐ ಚಿತ್ರ
ಗುವಾಹಟಿ: ವಿಶೇಷ ಸಮಗ್ರ ಪರಿಷ್ಕರಣೆಯು (ಎಸ್‌ಐಆರ್) ಅಕ್ರಮ ಮತದಾರರನ್ನು ರಾಜ್ಯದ ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲು ಸಹಕಾರಿ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಹೇಳಿದ್ದಾರೆ.
ಅಸ್ಸಾಂನಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ಚುನಾವಣಾ ಆಯೋಗವು ಸೋಮವಾರ ಆದೇಶಿಸಿದೆ.
ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಈ ಕುರಿತು ಮಾತನಾಡಿರುವ ಹಿಮಂತ, 'ಬೇರೆ ಬೇರೆ ಕಾರಣಗಳಿಂದಾಗಿ ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಸಾಧ್ಯವಾಗಿಲ್ಲ. ಹಾಗಾಗಿ, ಎಸ್‌ಐಆರ್ ಅನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ' ಎಂದಿದ್ದಾರೆ. ಮುಂದುವುರಿದು, 'ಆದಾಗ್ಯೂ, ಚುನಾವಣಾ ಆಯೋಗವು ಎಸ್‌ಐಆರ್‌ಗೆ ಆದೇಶಿಸಿದೆ' ಎಂದು ತಿಳಿಸಿದ್ದಾರೆ.
'ಇದು (ಎಸ್‌ಐಆರ್) ಅಕ್ರಮ ಮತದಾರರನ್ನು ಚುನಾವಣಾ ಪ್ರಕ್ರಿಯೆಯಿಂದ ಹೊರಗಿಡಲು ನೆರವಾಗಲಿದೆ' ಎನ್ನುತ್ತಲೇ, ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಚುನಾವಣಾ ಆಯೋಗವು, ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ನೀಡಿರುವ ನಿರ್ದೇಶನದ ಪ್ರಕಾರ, 2026ರ ಜನವರಿ 1ರಂದು ಎಸ್‌ಐಆರ್ ಆರಂಭಿಸಬೇಕಿದೆ.
ಮುಂದಿನ ವರ್ಷ ಚುನಾವಣೆ ನಡೆಯಲಿರುವ ನಾಲ್ಕು ರಾಜ್ಯಗಳೂ ಸೇರಿದಂತೆ ಒಟ್ಟು 12 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್ ನಡೆಸಲು ಚುನಾವಣಾ ಆಯೋಗವು ಕಳೆದ ತಿಂಗಳು ಆದೇಶಿಸಿತ್ತು.
ಅಸ್ಸಾಂನಲ್ಲಿ ಪೌರತ್ವ ಪರಿಶೀಲನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರಕ್ರಿಯೆಗಳು ಶೀಘ್ರವೇ ಮುಕ್ತಾಯಗೊಳ್ಳಲಿವೆ. ಹಾಗೆಯೇ, ರಾಜ್ಯವು ಪೌರತ್ವ ಕಾಯ್ದೆ ಅಡಿಯಲ್ಲಿ ಪ್ರತ್ಯೇಕ ನಿಬಂಧನೆಗಳನ್ನು ಹೊಂದಿರುವುದರಿಂದ, ಮತದಾರರ ಪಟ್ಟಿಯ ಪರಿಷ್ಕರಣೆ ಕುರಿತು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಸಿಇಸಿ ಜ್ಞಾನೇಶ್ ಕುಮಾರ್ ಅವರು ಅಕ್ಟೋಬರ್ 27ರಂದು ತಿಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.