ಜುಬೀನ್ ಗರ್ಗ್
ಗುವಾಹಟಿ: ಗಾಯಕ ಜುಬೀನ್ ಗರ್ಗ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಗೆ ಏಕವ್ಯಕ್ತಿ ನ್ಯಾಯಾಂಗ ಆಯೋಗವನ್ನು ಅಸ್ಸಾಂ ಸರ್ಕಾರ ರಚಿಸಿದೆ.
ಗುವಾಹಟಿ ಹೈಕೋರ್ಟ್‌ನ ನ್ಯಾಯಮೂರ್ತಿ ಸೌಮಿತ್ರ ಸೈಕಿಯಾ ಅವರ ನೇತೃತ್ವದ ಆಯೋಗವು ಆರು ತಿಂಗಳ ಒಳಗಾಗಿ ವರದಿ ಸಲ್ಲಿಸಲಿದೆ ಎಂದು ಸರ್ಕಾರ ಅಧಿಕೃತ ಆದೇಶದಲ್ಲಿ ತಿಳಿಸಿದೆ.
ಯಾವುದೇ ರೀತಿಯ ಕರ್ತವ್ಯ ಲೋಪ, ವ್ಯಕ್ತಿ, ಅಧಿಕಾರಿಗಳು ಅಥವಾ ಸಂಸ್ಥೆಯ ನಿರ್ಲಕ್ಷ್ಯದ ಕುರಿತಾಗಿಯೂ ಆಯೋಗವು ತನಿಖೆ ನಡೆಸಲಿದೆ ಎಂದು ಸರ್ಕಾರ ತಿಳಿಸಿದೆ. ಸಾವಿನ ಹಿಂದೆ ಪಿತೂರಿ, ಕಾನೂನು ಬಾಹಿರ ಚಟುವಟಕೆ ಸೇರಿದಂತೆ ಇತರ ಬಾಹ್ಯ ಅಂಶಗಳಿವೆಯೇ ಎಂಬ ಆಯಾಮದಲ್ಲಿಯೂ ತನಿಖೆ ಮಾಡಲಿದೆ ಎಂದು ತಿಳಿಸಿದೆ.
ಸಿಂಗಪುರದಲ್ಲಿ ಅಯೋಜಿಸಲಾಗಿದ್ದ ಈಶಾನ್ಯ ಭಾರತ ಉತ್ಸವದಲ್ಲಿ ಪಾಲ್ಗೊಳ್ಳಲು ಜುಬೀನ್ ತೆರಳಿದ್ದರು. ಅಲ್ಲಿ ಸ್ಕೂಬಾ ಡೈವಿಂಗ್ ನಡೆಸುತ್ತಿದ್ದ ವೇಳೆ ಜುಬೀನ್ ಉಸಿರುಗಟ್ಟಿ ಮೃತಪಟ್ಟಿದ್ದರು. ಉತ್ಸವದ ಆಯೋಜಕರ ವಿರುದ್ಧ ಅಸ್ಸಾಂನಲ್ಲಿ 60ಕ್ಕೂ ಅಧಿಕ ಎಫ್‌ಐಆರ್ ದಾಖಲಾಗಿದ್ದು, ಸಿಐಡಿ ಪ್ರಕರಣದ ತನಿಖೆ ನಡೆಸುತ್ತಿದೆ.
ಜುಬೀನ್ ಗರ್ಗ್ ಅವರ ಎರಡನೇ ಮರಣೋತ್ತರ ಪರೀಕ್ಷೆಯ ವರದಿಯನ್ನು ಜುಬೀನ್ ಅವರ ಪತ್ನಿ ಗರಿಮಾ ಸೈಕಿಯಾ ಗರ್ಗ್ ಅವರಿಗೆ ಅಸ್ಸಾಂ ಪೊಲೀಸರು ಶುಕ್ರವಾರ ಹಸ್ತಾಂತರಿಸಿದರು ಎಂದು ಮೂಲಗಳು ತಿಳಿಸಿವೆ. ಸಿಂಗಪುರದಲ್ಲಿ ನಡೆದಿದ್ದ ಮೊದಲ ಮರಣೋತ್ತರ ಪರೀಕ್ಷಾ ವರದಿಯನ್ನು ಗುರುವಾರ ನೀಡಲಾಗಿತ್ತು. ‘ಎಸ್‌ಐಟಿ ಅಧಿಕಾರಿಯೊಬ್ಬರು ಗರಿಮಾ ಅವರ ನಿವಾಸಕ್ಕೆ ತೆರಳಿ ಎರಡನೇ ವರದಿಯನ್ನು ಸಲ್ಲಿಸಿದರು’ ಎಂದು ಸಿಐಡಿ ಮೂಲಗಳು ತಿಳಿಸಿವೆ. ಆದರೆ ಗರ್ಗ್ ಅವರ ಪತ್ನಿ ಮರಣೋತ್ತರ ವರದಿಯನ್ನು ಪೊಲೀಸರಿಗೆ ಪುನಃ ಮರಳಿಸಿದ್ದಾರೆ. ‘ಇದು ನನ್ನ ಖಾಸಗಿ ದಾಖಲೆ ಅಲ್ಲ. ವರದಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಬೇಕೇ ಅಥವಾ ಬೇಡವೇ ಎಂದು ತನಿಖಾಧಿಕಾರಿಗಳು ನಿರ್ಧರಿಸಲಿ’ ಎಂದು ಅವರು ಹೇಳಿದ್ದಾರೆ.
ಜುಬೀನ್ ಗರ್ಗ್ ಅವರಿಗೆ ಸಿಂಗಪುರದಲ್ಲಿ ವಿಷ ನೀಡಿ ಸಾಯಿಸಲಾಗಿದೆ ಎಂದು ಅವರ ಜತೆಗಿದ್ದ ಬ್ಯಾಂಡ್‌ಮೇಟ್ ಶೇಖರ್ ಜ್ಯೋತಿ ಗೋಸ್ವಾಮಿ ಅವರು ಆರೋಪಿಸಿದ್ದಾರೆ. ಗರ್ಗ್ ಅವರ ಮ್ಯಾನೇಜರ್ ಸಿದ್ಧಾರ್ಥ್ ಶರ್ಮಾ ಮತ್ತು ಉತ್ಸವದ ಸಂಘಟಕ ಶ್ಯಾಮಕಾನು ಮಹಾಂತ ಅವರು ವಿಷ ನೀಡಿದ್ದರು ಎಂದು ಆರೋಪಿಸಿದ್ದಾರೆ. ಉತ್ಸವ ಆಯೋಜನರು ಗರ್ಗ್ ಅವರ ಮ್ಯಾನೇಜರ್ ಗೋಸ್ವಾಮಿ ಅಮೃತಪ್ರಭ ಮಹಾಂತ್ ಅವರನ್ನು ಬಂಧಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.