ಗುವಾಹಟಿ: ಗಾಯಕ ಜುಬಿನ್ ಗರ್ಗ್ ಅವರ ಸಾವಿಗೆ ಸಂಬಂಧಿಸಿದಂತೆ ಜುಬಿನ್ ಅವರ ಸೋದರ ಸಂಬಂಧಿ, ಅಸ್ಸಾಂ ಪೊಲೀಸ್ ಡಿಎಸ್‌ಪಿಯೂ ಆಗಿರುವ ಸಂದೀಪನ್ ಗರ್ಗ್ ಅವರನ್ನು ಬಂಧಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
‘ಜುಬಿನ್ ಗರ್ಗ್ ಮೃತಪಟ್ಟ ಸಂದರ್ಭದಲ್ಲಿ ಸಂದೀಪನ್ ಕೂಡ ಅವರೊಂದಿಗೆ ಇದ್ದರು. ಸಿಐಡಿ ಅಧಿಕಾರಿಗಳ ವಿಶೇಷ ತನಿಖಾ ತಂಡವು ಸಂದೀಪನ್ ಅವರನ್ನು ಈ ಹಿಂದೆಯೂ ವಿಚಾರಣೆ ನಡೆಸಿತ್ತು. ಅವರ ಹೇಳಿಕೆಗಳಲ್ಲಿ ಸ್ಥಿರತೆ ಇಲ್ಲದಿರುವುದನ್ನು ಅಧಿಕಾರಿಗಳು ಗಮನಿಸಿದ್ದರು’ ಎಂದು ಮೂಲಗಳು ತಿಳಿಸಿವೆ.
ಅಲ್ಲದೇ, ಸಿಂಗಾಪುರದ ಅನಿವಾಸಿ ಭಾರತೀಯರಾಗಿರುವ ರೂಪ್ ಕಮಲ್ ಕಲಿತಾ ಅವರು ಎಸ್‌ಐಟಿ ಮುಂದೆ ಹಾಜರಾಗಿ ಜುಬಿನ್ ಅವರ ಸಾವಿಗೆ ಸಂಬಂಧಿಸಿದಂತೆ ತಮಗೆ ತಿಳಿದಿರುವ ವಿಚಾರಗಳ ಬಗ್ಗೆ ಮಂಗಳವಾರವಷ್ಟೇ ಮಾಹಿತಿ ನೀಡಿದ್ದರು. ಬೆನ್ನಲ್ಲೇ ಸಂದೀಪನ್ ಅವರ ಬಂಧನದ ಈ ಬೆಳವಣಿಗೆ ನಡೆದಿದೆ.
ಸಂದೀಪನ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್ಎಸ್) ವಿವಿಧ ಸೆಕ್ಷನ್‌ಗಳ ಅನ್ವಯ ದೂರು ದಾಖಲಿಸಿ, ಅವರನ್ನು ಬಂಧಿಸಿ, ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಅನುಸರಿಸಲಾಗುತ್ತಿದೆ. ಅವರನ್ನು ನ್ಯಾಯಾಲಯದ ಎದುರು ಹಾಜರುಪಡಿಸಿ, ಪೊಲೀಸ್ ವಶಕ್ಕೆ ನೀಡಲು ಕೇಳಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.