ADVERTISEMENT

ಅಕ್ರಮ ಗುಡಿಸಲುಗಳ ತೆರವು ನಿಲ್ಲದು: ಅಸ್ಸಾಂ ಮುಖ್ಯಮಂತ್ರಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2021, 15:27 IST
Last Updated 25 ಸೆಪ್ಟೆಂಬರ್ 2021, 15:27 IST
ಹಿಮಂತ ಬಿಸ್ವಾ ಶರ್ಮಾ
ಹಿಮಂತ ಬಿಸ್ವಾ ಶರ್ಮಾ   

ಗುವಾಹಟಿ: ಸರ್ಕಾರಿ ಜಾಗವನ್ನು ಅತಿಕ್ರಮಿಸಿಕೊಂಡು ತಲೆ ಎತ್ತಿರುವ ಅಕ್ರಮ ಗುಡಿಸಲುಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ತಿಳಿಸಿದ್ದಾರೆ.

ಅಸ್ಸಾಂನ ದರಾಂಗ್ ಜಿಲ್ಲೆಯಲ್ಲಿ ಗುರುವಾರ ಒತ್ತುವರಿ ತೆರವುಗೊಳಿಸುವ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ನಿಂದ ಇಬ್ಬರು ಮೃತಪಟ್ಟಿದ್ದು, ತೆರವು ಕಾರ್ಯಾಚರಣೆಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಹಿಮಂತ ಬಿಸ್ವಾ ಶರ್ಮಾ ತಮ್ಮ ಸರ್ಕಾರದ ನಿಲುವನ್ನು ಪ್ರಕಟಿಸಿದ್ದಾರೆ.

‘ಈ ಕಾರ್ಯಾಚರಣೆ ಮುಂದುವರಿಯುತ್ತದೆ. ಸರ್ಕಾರವು ಬಡ ಮತ್ತು ಭೂಹೀನ ಜನರ ಸಮಸ್ಯೆಗಳನ್ನು ಆಲಿಸಲಿದೆ. ಆದರೆ, ನಾವು ಒಬ್ಬ ವ್ಯಕ್ತಿ 100 ಬಿಘಾ, 200 ಬಿಘಾ ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ನಮ್ಮ ಭೂ ಬಳಕೆಯ ನೀತಿಯ ಮಾನದಂಡದ ಪ್ರಕಾರ 6 ಬಿಘಾ ಭೂಮಿಯನ್ನು ನಿಜವಾದ ಭೂ ರಹಿತ ಜನರಿಗೆ ನೀಡುತ್ತೇವೆ. ಆದರೆ ಜನರು ಸರ್ಕಾರಿ ಭೂಮಿಯನ್ನು ಆಕ್ರಮಿಸಿಕೊಳ್ಳಲು ಅವಕಾಶ ನೀಡುವುದಿಲ್ಲ’ ಎಂದು ಶರ್ಮಾ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

ಪಿತೂರಿ ಸಿದ್ಧಾಂತ:‘ಒಂದು ವರ್ಗದ ಜನರ’ನ್ನು ತೆರವುಗೊಳಿಸುವುದನ್ನು ನಿಲ್ಲಿಸುವಂತೆ ಸರ್ಕಾರಕ್ಕೆ ಮನದಟ್ಟು ಮಾಡುವ ಭರವಸೆ ನೀಡಿ, ಕಳೆದ ಮೂರು ತಿಂಗಳಲ್ಲಿ ಆ ಜನರಿಂದ ₹28 ಲಕ್ಷ ಹಣವನ್ನು ಕೆಲವರು ಸಂಗ್ರಹಿಸಿರುವುದು ಸರ್ಕಾರಕ್ಕೆ ಗುಪ್ತಚರ ಇಲಾಖೆಯ ಮಾಹಿತಿಯಿಂದ ತಿಳಿದುಬಂದಿದೆ. ತೆರವು ಕಾರ್ಯಾಚರಣೆ ತಡೆಯಲು ಸಾಧ್ಯವಾಗದಿದ್ದಾಗ ಅವರು ಆ ಜನರನ್ನು ಎತ್ತಿಕಟ್ಟಿ ಗುರುವಾರ ವಿನಾಶ ಸೃಷ್ಟಿಸಿದರು. ಇದರಲ್ಲಿ ಪಿತೂರಿ ಸಿದ್ಧಾಂತ ಅಡಗಿದೆ ಎಂದು ಹಿಮಂತ ಬಿಸ್ವಾ ಶರ್ಮಾ ತಿಳಿಸಿದರು.

ಗುರುವಾರ ಕೇವಲ 60 ಕುಟುಂಬಗಳನ್ನು ತೆರವುಗೊಳಿಸಲಾಗಿತ್ತು. ಆದರೆ, ತೆರವು ಕಾರ್ಯಾಚರಣೆ ವಿರೋಧಿಸಲು10,000 ಜನರು ಜಮಾಯಿಸಿದರು. ತೆರವುಗೊಳಿಸಲಾಗಿದ್ದ ಜನರಿಗೆ ಆಹಾರ ನೀಡುವ ನೆಪದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ, ಇಸ್ಲಾಮಿಕ್ ಸಂಘಟನೆಗೆ ಸೇರಿದವರು ಈ ಪ್ರದೇಶಕ್ಕೆ ಭೇಟಿ ನೀಡಿರುವ ಬಗ್ಗೆ ಮಾಹಿತಿಯೂ ಸಿಕ್ಕಿದೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿದೆ. ತನಿಖೆಯಿಂದ ಸ್ಫೋಟಕ ಮಾಹಿತಿಗಳು ಹೊರಬೀಳಲಿವೆ ಎಂದು ಶರ್ಮಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.