ADVERTISEMENT

ಕಾಂಡೋಮ್ ಹೆಸರಲ್ಲಿ TDP, YSRCP ಕೆಸರೆರಚಾಟ; ಆಂಧ್ರ ಚುನಾವಣಾ ಕಣದಲ್ಲಿ ಏರಿದ ಕಾವು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಫೆಬ್ರುವರಿ 2024, 10:24 IST
Last Updated 22 ಫೆಬ್ರುವರಿ 2024, 10:24 IST
   

ಹೈದರಾಬಾದ್‌: ಆಂಧ್ರಪ್ರದೇಶದಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಕಾವು ಏರತೊಡಗಿದೆ. ಆಡಳಿತಾರೂಢ ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ (ವೈಎಸ್‌ಆರ್‌ಸಿಪಿ) ಮತ್ತು ತೆಲುಗು ದೇಶಂ ಪಕ್ಷ (ಟಿಡಿಪಿ), ಚುನಾವಣಾ ಪ್ರಚಾರ ಆರಂಭಿಸಿದ್ದು, ಪರಸ್ಪರ ಕೆಸರೆರಚಾಟ ನಡೆಸುತ್ತಿವೆ.

ಇದರ ನಡುವೆ ಕಾಂಡೋಮ್‌ ಪ್ಯಾಕೆಟ್‌ಗಳ ಮೇಲೆ ಎರಡೂ ಪಕ್ಷಗಳ ಹೆಸರು ಮತ್ತು ಲೋಗೊ ಇರುವ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದು ರಾಜಕೀಯ ಪರಿಸ್ಥಿತಿಯನ್ನು ಇನ್ನಷ್ಟು ತೀವ್ರಗೊಳಿಸಿದೆ.

ಇಬ್ಬರು ವ್ಯಕ್ತಿಗಳು ಟಿಡಿಪಿ ಹೆಸರು ಮತ್ತು ಲೋಗೊ ಇರುವ ಕಾಂಡೋಮ್‌ ಪ್ಯಾಕೆಟ್‌ ಹಿಡಿದು ಚರ್ಚಿಸುತ್ತಿರುವ ವಿಡಿಯೊವನ್ನು 'Deccan 24x7' ವಾಹಿನಿಯು ತನ್ನ ಟ್ವಿಟರ್/ಎಕ್ಸ್‌ ಖಾತೆಯಲ್ಲಿ ಬುಧವಾರ (ಫೆ.21) ಹಂಚಿಕೊಂಡಿತ್ತು. 'ಟಿಡಿಪಿ ಕನಿಷ್ಠ ಮಟ್ಟಕ್ಕೆ ಇಳಿದಿದೆ! ಕಾಂಡೋಮ್‌ ಪ್ಯಾಕೆಟ್‌ ಮೂಲಕ ಪ್ರಚಾರ ಪಡೆಯುತ್ತಿದೆ' ಎಂದು ಅಡಿಬರಹ ನೀಡಿತ್ತು.

ADVERTISEMENT

ಆ ‍ಪೋಸ್ಟ್‌ ಅನ್ನು ಹಂಚಿಕೊಂಡಿರುವ ವೈಎಸ್‌ಆರ್‌ಸಿಪಿ, ಇದು 'ಪ್ರಚಾರದ ಹುಚ್ಚು' ಎಂದು ಟೀಕಿಸಿದೆ.

'ಅಂತಿಮವಾಗಿ ಟಿಡಿಪಿಯು ಪ್ರಚಾರಕ್ಕಾಗಿ ಕಾಂಡೋಮ್‌ಗಳನ್ನು ಹಂಚಲು ಆರಂಭಿಸಿದೆ. ಪ್ರಚಾರಕ್ಕಾಗಿ ಇದೆಂಥ ಹುಚ್ಚಾಟ? ಹಾಗಾದರೆ ಮುಂದೇನು? ವಯಾಗ್ರಾ ನೀಡಲಿದೆಯೇ? ಇಷ್ಟಕ್ಕೇ ನಿಲ್ಲಿಸುವುದೇ ಅಥವಾ ಇನ್ನೂ ಕೆಳಮಟ್ಟಕ್ಕೆ ಇಳಿಯಲಿದೆಯೇ?' ಎಂದು ವೈಎಸ್‌ಆರ್‌ಸಿಪಿ ಪ್ರಶ್ನಿಸಿದೆ.

ಇದರ ಬೆನ್ನಲ್ಲೇ, ವ್ಯಕ್ತಿಯೊಬ್ಬರು ವೈಎಸ್‌ಆರ್‌ಸಿಪಿ ಹೆಸರು ಮತ್ತು ಲೋಗೊ ಇರುವ ಕಾಂಡೋಮ್‌ ಪ್ಯಾಕೆಟ್‌ ಹಿಡಿದಿರುವ ವಿಡಿಯೊ ಸಹ ಹರಿದಾಡುತ್ತಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಟಿಡಿಪಿ, 'ಕೀಳು ಮಟ್ಟದ ಪ್ರಚಾರ' ಎಂದು ಕಿಡಿಕಾರಿದೆ.

ಮುಖ್ಯಮಂತ್ರಿಯೂ ಆಗಿರುವ ವೈಎಸ್‌ಆರ್‌ಸಿಪಿ ನಾಯಕ ಜಗನ್‌ ಮೋಹನ್‌ ರೆಡ್ಡಿ ಅವರ ಪಕ್ಷ ಚುನಾವಣೆ ಹಿನ್ನೆಲೆಯಲ್ಲಿ 'ಸಿದ್ಧಂ' ಅಭಿಯಾನ ಆರಂಭಿಸಿದೆ. ಕಾಂಡೋಮ್‌ ವಿಡಿಯೊವನ್ನು ಹಂಚಿಕೊಂಡಿರುವ ಟಿಡಿಪಿ, 'ನೀವು ಸಿದ್ಧಂ ಎಂದಿರುವುದು ಇದಕ್ಕೇ?!' ಎಂದು ಕೇಳಿದೆ.

ಅನಿಮೇಷನ್‌ ವಿಡಿಯೊ ಸಮರ
ಆಂಧ್ರ ಪ್ರದೇಶದಲ್ಲಿ ಇದೇ ವರ್ಷ ವಿಧಾನಸಭೆ ಚುನಾವಣೆಯೂ ನಡೆಯಲಿದ್ದು, ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ.

ಕಾಂಡೋಮ್‌ ವಿಚಾರವಾಗಿ ನಡೆಯುತ್ತಿರುವ ವಾಗ್ವಾದವಷ್ಟೇ ಅಲ್ಲದೆ, ಈ ಪಕ್ಷಗಳ ನಡುವೆ ಅನಿಮೇಷನ್‌ ವಿಡಿಯೊಗಳ ಸಮರವೂ ನಡೆಯುತ್ತಿದೆ. ಎದುರಾಳಿ ಪಕ್ಷದ ದುರಾಡಳಿತವನ್ನು ನೆನಪಿಸುವ ವಿಡಿಯೊಗಳನ್ನು ಹಂಚಿಕೊಂಡು ಜನರನ್ನು ಸೆಳೆಯುವ ಪ್ರಯತ್ನವನ್ನು ಉಭಯ ಪಕ್ಷಗಳು ಮಾಡುತ್ತಿವೆ.

ಮುಂಬರುವ ವಿಧಾನಸಭೆ ಚುನಾವಣೆ ಕುರಿತು ಕಳೆದ ವಾರ ಮಾತನಾಡಿದ್ದ ಜಗನ್‌, ವೈಎಸ್‌ಆರ್‌ಸಿಪಿ, ಟಿಡಿಪಿ ಮತ್ತು ಜನಸೇನಾ ಪಕ್ಷಗಳ ಚಿಹ್ನೆಗಳನ್ನು ಉಲ್ಲೇಖಿಸಿ ಜನರು ಹೇಗೆ ಮತ ನೀಡಬೇಕು ಎಂದು ಹೇಳಿದ್ದರು.

ತಮ್ಮ ಪಕ್ಷ ವೈಎಸ್‌ಆರ್‌ಸಿಪಿ ಚಿಹ್ನೆಯಾದ ಫ್ಯಾನ್‌ ಅನ್ನು ಮನೆಗಳಲ್ಲಿ ಇಟ್ಟುಕೊಳ್ಳಿ. ಟಿಡಿಪಿಯ ಸೈಕಲ್‌ ಅನ್ನು ಬೀದಿಯಲ್ಲಿ ಬಿಟ್ಟು ಹಾಗೂ ಜನಸೇನಾ ಪಕ್ಷದ ಟೀ ಲೋಟವನ್ನು ಅಡುಗೆ ಮನೆಯ ಸಿಂಕ್‌ನಲ್ಲಿ ಇಡಿ ಎಂದು ಜನರಿಗೆ ಎಂದು ಕರೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.