ADVERTISEMENT

ಮಧ್ಯ ಪ್ರದೇಶ, ಮಿಜೋರಾಂ: ಮತದಾನ ಇಂದು

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2018, 19:16 IST
Last Updated 27 ನವೆಂಬರ್ 2018, 19:16 IST

ನವದೆಹಲಿ: ಮಧ್ಯ ಪ್ರದೇಶ ಮತ್ತು ಮಿಜೋರಾಂ ವಿಧಾನಸಭೆಗಳಿಗೆ ಬುಧವಾರ ಮತದಾನ ನಡೆಯಲಿದೆ. ಮಧ್ಯ ಪ್ರದೇಶದಲ್ಲಿ ಸತತ ಮೂರು ಅವಧಿಯಿಂದ ಬಿಜೆಪಿ ಸರ್ಕಾರವಿದೆ. ಮಿಜೋರಾಂನಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳುವ ಹವಣಿಕೆಯಲ್ಲಿದೆ.

ಮಧ್ಯ ಪ್ರದೇಶದಲ್ಲಿ 15 ವರ್ಷಗಳ ಆಡಳಿತ ವಿರೋಧಿ ಅಲೆಯ ಲಾಭ ಪಡೆದು ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಪಕ್ಷವು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಕಾಂಗ್ರೆಸ್‌ ಮುಖಂಡರಾದ ಕಮಲನಾಥ್‌, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ದಿಗ್ವಿಜಯ್‌ ಸಿಂಗ್‌ ಅವರು ತಮ್ಮ ನಡುವಣ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರ ಜನಪ್ರಿಯತೆ, ಅವರು ಜಾರಿಗೆ ತಂದ ಕಾರ್ಯಕ್ರಮಗಳನ್ನು ಬಿಜೆಪಿ ಮುಖ್ಯವಾಗಿ ನೆಚ್ಚಿಕೊಂಡಿದೆ. ತಳಮಟ್ಟದಲ್ಲಿ ಪ್ರಬಲವಾಗಿರುವ ಕಾರ್ಯಕರ್ತರ ಪಡೆ ಮತ್ತು ಆರ್‌ಎಸ್ಎಸ್‌ ಬೆಂಬಲ ಬಿಜೆಪಿಯ ಬಹುದೊಡ್ಡ ಶಕ್ತಿ.

ADVERTISEMENT

ಈಶಾನ್ಯ ಭಾರತದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿರುವ ಏಕೈಕ ರಾಜ್ಯ ಮಿಜೋರಾಂ. ‘ಕಾಂಗ್ರೆಸ್‌ ಮುಕ್ತ ಈಶಾನ್ಯ’ ಎಂಬುದು ಇಲ್ಲಿ ಬಿಜೆಪಿಯ ಘೋಷ ವಾಕ್ಯ. ಕ್ರೈಸ್ತ ಸಮುದಾಯದ ಜನರೇ ಬಹುಸಂಖ್ಯಾತರಾಗಿರುವ ಮಿಜೋರಾಂನಲ್ಲಿ ಈವರೆಗೆ ಬಿಜೆಪಿ ವಿಧಾನಸಭೆಯ ಒಂದು ಕ್ಷೇತ್ರವ‌ನ್ನೂ ಗೆದ್ದಿಲ್ಲ. ಆದರೆ, ಈ ಬಾರಿ ಕಾಂಗ್ರೆಸ್‌ ಪಕ್ಷ ವನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂಬ ಹಟದಲ್ಲಿ ಬಿಜೆಪಿ ಕೆಲಸ ಮಾಡಿದೆ.

ಎರಡೂ ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಪಕ್ಷಗಳು ಆಡಳಿತ ವಿರೋಧಿ ಅಲೆಯ ವಿರುದ್ಧ ಈಜಬೇಕಿದೆ. ಅಲ್ಲದೆ, 2019ರ ಲೋಕಸಭಾ ಚುನಾವಣೆಯ ಮೇಲೆ ಈ ಚುನಾವಣೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಫಲಿತಾಂಶದ ಬಗ್ಗೆ ಕುತೂಹಲವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.