ADVERTISEMENT

Election Results 2022 | ನಾಲ್ಕು ರಾಜ್ಯಗಳಲ್ಲಿ ಬಿಜೆಪಿ, ಪಂಜಾಬ್‌ನಲ್ಲಿ ಎಎಪಿಗೆ ಗೆಲುವು, ಕಾಂಗ್ರೆಸ್‌ಗೆ ಆಘಾತ

2024ರ ಸಾರ್ವತ್ರಿಕ ಚುನಾವಣೆಯ ಸೆಮಿಫೈನಲ್ ಎನ್ನಲಾಗಿರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಗುರುವಾರ ಹೊರಬಿದ್ದಿದ್ದು, ಬಿಜೆಪಿಯು ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಅಧಿಕಾರ ಉಳಿಸಿಕೊಂಡರೆ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು ಭರ್ಜರಿ ಗೆಲುವು ದಾಖಲಿಸಿದೆ. ಕಾಂಗ್ರೆಸ್‌ಗೆ ಆಘಾತಕಾರಿ ಸೋಲು ಎದುರಾಗಿದೆ.

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2022, 16:17 IST
Last Updated 10 ಮಾರ್ಚ್ 2022, 16:17 IST

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಗೆಲುವು

ಉತ್ತರ ಪ್ರದೇಶದಲ್ಲಿ ಕಳೆದ ಬಾರಿಗಿಂತ ಕಡಿಮೆ ಸ್ಥಾನಗಳೊಂದಿಗೆ ಬಿಜೆಪಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಯೋಗಿ ಆದಿತ್ಯನಾಥ್ ಎರಡನೇ ಬಾರಿಗೆ ಸಿಎಂ ಆಗಿ ಪುನರಾಯ್ಕೆಯಾಗಿದ್ದಾರೆ. 

ಉತ್ತರಾಖಂಡದಲ್ಲಿ ಬಿಜೆಪಿಗೆ ಬಹುಮತ

ಉತ್ತರಾಖಂಡದಲ್ಲಿ ಮತ್ತೆ ಕಮಲ ಪತಾಕೆ ಹಾರಿದೆ.

ಮಣಿಪುರದಲ್ಲೂ ಬಿಜೆಪಿ ಅಧಿಕಾರಕ್ಕೆ

ಈಶಾನ್ಯ ರಾಜ್ಯ ಮಣಿಪುರದಲ್ಲಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 

ADVERTISEMENT

ಪಂಜಾಬ್‌ನಲ್ಲಿ ಎಎಪಿಗೆ ಭರ್ಜರಿ ಗೆಲುವು

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷವು 92 ಸ್ಥಾನಗಳೊಂದಿಗೆ ಭರ್ಜರಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ 18 ಸ್ಥಾನ ಪಡೆದಿದ್ದು, ಬಾರಿ ಹಿನ್ನಡೆ ಅನುಭವಿಸಿದೆ. 

ಗೋವಾದಲ್ಲಿ ಬಿಜೆಪಿಗೆ 20, ಕಾಂಗ್ರೆಸ್‌ಗೆ 11 ಸ್ಥಾನಗಳಲ್ಲಿ ಗೆಲುವು

ಗೋವಾದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಪಕ್ಷೇತರರ ಬೆಂಬಲದೊಂದಿಗೆ ಸರ್ಕಾರ ರಚಿಸುವುದು ಖಚಿತವೆನಿಸಿದೆ. 

ದೇಶದಲ್ಲಿ ವಂಶಪರಂಪರೆಯ ರಾಜಕೀಯದ ಸೂರ್ಯಾಸ್ತ: ಪ್ರಧಾನಿ ಮೋದಿ

ದೇಶದಲ್ಲಿ ವಂಶಪರಂಪರೆಯ ರಾಜಕೀಯದಲ್ಲಿ ಸೂರ್ಯಾಸ್ತದ ದಿನ ಬಂದೇ ಬರುತ್ತದೆ. ಈ ಫಲಿತಾಂಶಗಳಲ್ಲೂ ಜನರು ಇದನ್ನೇ ಸೂಚಿಸಿದ್ದಾರೆ: ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಹೇಳಿಕೆ

2024ರ ಚುನಾವಣೆಯ ಭವಿಷ್ಯ ನಿರ್ಧಾರ

*ಬಿಜೆಪಿಗೆ ಎಲ್ಲ ವಿಭಾಗದ ಜನರಿಂದ ಬೆಂಬಲ ದೊರಕಿದೆ. ಉತ್ತರ ಪ್ರದೇಶದ ಚುನಾವಣೆ ಫಲಿತಾಂಶವು 2024ರ ಲೋಕಸಭಾ ಚುನಾವಣೆಯ ಭವಿಷ್ಯವನ್ನು ನಿರ್ಧರಿಸಿದೆ ಎಂದು ಹೇಳಿದ್ದಾರೆ.  

*ಚುನಾವಣೆ ಫಲಿತಾಂಶವು ಬಿಜೆಪಿ ಬಡವರ ಪರವಾಗಿದೆ ಎಂಬುದನ್ನು ಮುದ್ರೆ ಒತ್ತಿದೆ. ಬಡವರು ತಮ್ಮ ಹಕ್ಕುಗಳನ್ನು ಪಡೆಯುವವರೆಗೂ ನಾವು ವಿಶ್ರಮಿಸುವುದಿಲ್ಲ. ಪ್ರತಿಯೊಬ್ಬ ಬಡವರು ಮತ್ತು ಅರ್ಹರನ್ನು ನಾವು ತಲುಪಲಿದ್ದೇವೆ: ಪ್ರಧಾನಿ ಮೋದಿ

*ಪ್ರತ್ಯೇಕತಾವಾದಿ ರಾಜಕೀಯದಿಂದ ಗಡಿ ರಾಜ್ಯವಾದ ಪಂಜಾಬ್ ಅನ್ನು ರಕ್ಷಿಸಲು ಬಿಜೆಪಿ ಕಾರ್ಯಕರ್ತರು ಶ್ರಮಿಸಲಿದ್ದಾರೆ.: ಮೋದಿ

'ಆಪರೇಷನ್ ಗಂಗಾ' ದುರುಪಯೋಗಪಡಿಸಲು ಪ್ರಯತ್ನ: ಮೋದಿ ಆರೋಪ

ಸಾವಿರಾರು ಭಾರತೀಯ ವಿದ್ಯಾರ್ಥಿಗಳು, ನಾಗರಿಕರು ಉಕ್ರೇನ್‌ನಲ್ಲಿ ಸಿಲುಕಿದ್ದಾರೆ. ಆದರೆ ದೇಶದ ನೈತಿಕ ಸ್ಥೈರ್ಯವನ್ನು ಮುರಿಯುವ ಪ್ರಯತ್ನ ನಡೆಯುತ್ತಿರುವುದು ದುರದೃಷ್ಟಕರ. ಈ ಜನರು ಸಹ 'ಆಪರೇಷನ್ ಗಂಗಾ' ದುರುಪಯೋಗಪಡಿಸಲು ಪ್ರಯತ್ನಿಸಿದರು. ಇದು ಭಾರತದ ಭವಿಷ್ಯಕ್ಕೂ ಎದುರಾಗುತ್ತಿರುವ ದೊಡ್ಡ ಆತಂಕ: ಪ್ರಧಾನಿ ಮೋದಿ 

ಕೆಲವರಿಂದ ರಾಜಕೀಯ ಮಟ್ಟ ಕಡಿಮೆ ಮಾಡುವ ಪ್ರಯತ್ನ: ಮೋದಿ ಆರೋಪ

ನಾನು ಕೆಲವು ಕಾಳಜಿಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ. ಸಾಮಾನ್ಯ ಜನರು ದೇಶದ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಕೆಲವರು ರಾಜಕೀಯದ ಗುಣಮಟ್ಟವನ್ನು ಕುಂಠಿತಗೊಳಿಸುತ್ತಿದ್ದಾರೆ. ನಮ್ಮ ಲಸಿಕಾ ಕಾರ್ಯಕ್ರಮವನ್ನು ಇಡೀ ಜಗತ್ತೇ ಶ್ಲಾಘಿಸಿದರೆ ಕೆಲವರು ಪ್ರಶ್ನಿಸುತ್ತಿದ್ದರು: ಪ್ರಧಾನಿ ಮೋದಿ

2024ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿಗೆ ಗೆಲುವು....

2019ರಲ್ಲಿ ನಾವು ಕೇಂದ್ರದಲ್ಲಿ ಸರ್ಕಾರ ರಚಿಸಿದಾಗ ಅದು 2017ರ ಉತ್ತರ ಪ್ರದೇಶದ ಗೆಲುವಿನ ಪರಿಣಾಮ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದರು. ಈಗ 2022ರ ಚುನಾವಣಾ ಫಲಿತಾಂಶವು 2024ರ ಲೋಕಸಭಾ ಚುನಾವಣೆಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಅದೇ ತಜ್ಞರು ಭವಿಷ್ಯ ನುಡಿಯಲಿದ್ದಾರೆ ಎಂದು ನಾನು ನಂಬುತ್ತೇನೆ: ಪ್ರಧಾನಿ ಮೋದಿ 

ಗೋವಾದಲ್ಲೂ ಜಯಭೇರಿ

ಗೋವಾದಲ್ಲೂ ಚುನಾವಣಾ ಪೂರ್ವ ಸಮೀಕ್ಷಾ ಫಲಿತಾಂಶಗಳು ತಪ್ಪು ಎಂಬುದನ್ನು ಸಾಬೀತು ಮಾಡಿದ್ದೇವೆ. ಸತತ ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬಂದಿದೆ: ನರೇಂದ್ರ ಮೋದಿ

ಜನರಿಗೆ ನೀಡಿದ ಭರವಸೆ ಈಡೇರಿಕೆ: ಪ್ರಧಾನಿ ಮೋದಿ

ಉತ್ತರ ಪ್ರದೇಶವು ದೇಶಕ್ಕೆ ಅನೇಕ ಪ್ರಧಾನ ಮಂತ್ರಿಗಳನ್ನು ನೀಡಿದೆ. ಆದರೆ ಮುಖ್ಯಮಂತ್ರಿಯೊಬ್ಬರು ಪುನರಾಯ್ಕೆಯಾಗುವುದು ಇದೇ ಮೊದಲು. ಅಷ್ಟೇ ಅಲ್ಲದೆ ಬಿಜೆಪಿ ಮತ ಗಳಿಕೆಯಲ್ಲೂ ಹೆಚ್ಚಾಗಿದೆ. ನಾವು ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿದ್ದೇವೆ. ಇದು ಜನರಿಗೆ ನೀಡಿದ ಭರವಸೆಯಾಗಿದೆ: ಪ್ರಧಾನಿ ಮೋದಿ

'ವಿಕ್ಟರಿ 4' - ಮತದಾರರಿಗೆ ಧನ್ಯವಾದ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

ಮಾರ್ಚ್ 10ರಿಂದಲೇ ಹೋಳಿ ಆರಂಭವಾಗಲಿದೆ ಎಂದು ನಾವು ಮೊದಲೇ ಹೇಳಿದ್ದೆವು. ಇದು ನಮ್ಮ ಎನ್‌ಡಿಎ ಬೆಂಬಲಿಗರ 'ವಿಜಯ 4'. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಭಾಗವಹಿಸಿ ಬಿಜೆಪಿ ಗೆಲುವನ್ನು ಖಚಿತಪಡಿಸಿದ್ದಕ್ಕಾಗಿ ನಾನು ಎಲ್ಲ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಎರಡನೇ ಸಲ ಸಿಎಂ ಪುನರಾಯ್ಕೆಯಾಗಿದ್ದಾರೆ: ಪ್ರಧಾನಿ ನರೇಂದ್ರ ಮೋದಿ 

ಪಂಜಾಬ್‌ ಸಿಎಂ ಚನ್ನಿಯನ್ನು ಸೋಲಿಸಿದ ಎಎಪಿ ಹುರಿಯಾಳುಗಳಿವರು...

ಐದು ರಾಜ್ಯಗಳಲ್ಲಿ ಉಂಟಾದ ಹಿನ್ನಡೆ ಕುರಿತು ಆತ್ಮಾವಲೋಕನ: ಸಿದ್ದರಾಮಯ್ಯ

2024ರ ಚುನಾವಣೆಯಲ್ಲೂ ಗೆಲುವಿಗಾಗಿ ಯತ್ನ: ನಡ್ಡಾ

ಹಿಂದುಳಿದವರ ಪರ ಪ್ರಧಾನಿ ಮೋದಿ ಕೆಲಸ ಮಾಡಿದ್ದಾರೆ. ದೇಶದ ರಾಜಕೀಯವನ್ನು ಅಭಿವೃದ್ಧಿಯ ರಾಜಕೀಯವನ್ನಾಗಿ ಬದಲಾಯಿಸಿದ್ದಾರೆ. ಮಣಿಪುರ, ಉತ್ತರಾಖಂಡದಲ್ಲೂ ಗೆಲುವು ಸಾಧಿಸಿದ್ದೇವೆ. ಇದಕ್ಕಾಗಿ ಪಕ್ಷದ ಕಾರ್ಯಕರ್ತರು ಅವಿರತವಾಗಿ ಶ್ರಮಿಸಿದ್ದಾರೆ. 2024ರ ಸಾರ್ವತ್ರಿಕ ಚುನಾವಣೆಯಲ್ಲೂ ಗೆಲುವು ದಾಖಲಿಸಲು ಸರ್ವ ಪ್ರಯತ್ನವನ್ನು ಮಾಡಲಿದ್ದೇವೆ: ಜೆ.ಪಿ. ನಡ್ಡಾ

ಪ್ರಧಾನಿ ಮೋದಿ ನಾಯಕತ್ವವನ್ನು ಹೊಗಳಿದ ಮಣಿಪುರ ಸಿಎಂ

ಧನ್ಯವಾದಗಳು, ಮಣಿಪುರ! ಇಂದು ನಾವು ಸಾಧಿಸಿದ ಐತಿಹಾಸಿಕ ಗೆಲುವು ಪ್ರಧಾನಿ ನರೇಂದ್ರ ಮೋದಿಯವರ ಕ್ರಿಯಾಶೀಲ ನಾಯಕತ್ವ ಮತ್ತು ಜನರನ್ನು ಕೇಂದ್ರಿತ ಆಡಳಿತದಲ್ಲಿ ಜನರು ಇಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿದೆ. ಬಿಜೆಪಿಯ ಎಲ್ಲ ಕಾರ್ಯಕರ್ತರಿಗೂ ನನ್ನ ಅಭಿನಂದನೆಗಳು: ಎನ್. ಬಿರೇನ್ ಸಿಂಗ್, ಮಣಿಪುರ ಸಿಎಂ

ಪ್ರಧಾನಿಯವರ ಜನಪರ ಯೋಜನೆಗಳಿಗೆ ಜನರ ಮುದ್ರೆ: ನಡ್ಡಾ

ಚುನಾವಣಾ ಫಲಿತಾಂಶಗಳು ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳ ಮೇಲೆ ಮತದಾರರು ಮುದ್ರೆ ಒತ್ತಿದ್ದಾರೆ. ಜನರು ಬಿಜೆಪಿಗೆ ಮತ ಚಲಾಯಿಸಿದ್ದಾರೆ. 2014ರಿಂದ ಬಿಜೆಪಿಗೆ ಜನರು ಆಶೀರ್ವಾದ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ ಮುಖ್ಯಮಂತ್ರಿಯೊಬ್ಬರು ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಮರಳಿರುವುದು ಇದೇ ಮೊದಲು. ಗೋವಾದಲ್ಲಿ ಹ್ಯಾಟ್ರಿಕ್ ಸಾದಿಸುತ್ತಿದ್ದೇವೆ: ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ದೆಹಲಿ, ಪಂಜಾಬ್ ಆಯ್ತು, ಎಎಪಿ ಮುಂದಿನ ಗುರಿ ಹಿಮಾಚಲ ಪ್ರದೇಶ

ಈ ವರ್ಷಾಂತ್ಯದಲ್ಲಿ ನಡೆಯಲಿರುವ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್ ಮಾದರಿಯ ಸಾಧನೆ ಪುನರಾವರ್ತಿಸುವ ಭರವಸೆಯನ್ನು ಎಎಪಿ ವ್ಯಕ್ತಪಡಿಸಿದೆ.  

ಬುಲ್ಡೋಜರ್ ಆಟಿಕೆಯೊಂದಿಗೆ ಬಿಜೆಪಿ ಬೆಂಬಲಿಗರ ಸಂಭ್ರಮ

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ

ದೆಹಲಿ: ಬಿಜೆಪಿ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಮೋದಿ ಮುಂದಾಳತ್ವದಲ್ಲಿ ಗೆಲುವು: ಯೋಗಿ ಆದಿತ್ಯನಾಥ್

ಉತ್ತರ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದಾಳತ್ವದಲ್ಲಿ  ಬಿಜೆಪಿ ಗೆಲುವು ಗಳಿಸಿದೆ. ಇದನ್ನು ಸಾಧ್ಯವಾಗಿಸಿದ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತರನ್ನು ನಾನು ಅಭಿನಂದಿಸುತ್ತೇನೆ. ಉತ್ತರ ಪ್ರದೇಶಕ್ಕಾಗಿ ಸಮಯ ವ್ಯಯಿಸಿ ಎಲ್ಲ ಕಾರ್ಯಗಳಲ್ಲೂ ರಾಜ್ಯವನ್ನು ಬೆಂಬಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. - ಯೋಗಿ ಆದಿತ್ಯನಾಥ್.  

ವಿಜಯೋತ್ಸವ: ಪಕ್ಷದ ಇತರೆ ನಾಯಕರೊಂದಿಗೆ ಹೆಜ್ಜೆ ಹಾಕಿದ ಮಣಿಪುರ ಸಿಎಂ

ಗೋವಾ ಜನತೆಗೆ ಕೃತಜ್ಞತೆ ಸಲ್ಲಿಸಿದ ಅಮಿತ್ ಶಾ

ಕರ್ನಾಟಕದಲ್ಲೂ ಬಿಜೆಪಿ ಅಧಿಕಾರಕ್ಕೆ

ಮುಂಬರುವ ಕರ್ನಾಟಕ ಚುನಾವಣೆಯಲ್ಲೂ ಗೆಲುವು ದಾಖಲಿಸುತ್ತೇವೆ. ನಮ್ಮ ಪಾಲಿಗೆ ಗೆಲುವು ಹೆಚ್ಚಿನ ಜವಾಬ್ದಾರಿಯನ್ನು ನೀಡುತ್ತದೆ: ಮಹಾರಾಷ್ಟ್ರದ ಮಾಜಿ ಸಿಎಂ ಹಾಗೂ ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್
 

ಸೋಲಿನ ಬಳಿಕ ಸಾದುದ್ದೀನ್ ಓವೈಸಿ ಪ್ರತಿಕ್ರಿಯೆ

ಬಿಜೆಪಿಗೆ ಅಧಿಕಾರ ನೀಡಲು ಉತ್ತರ ಪ್ರದೇಶದ ಜನರು ನಿರ್ಧರಿಸಿದ್ದಾರೆ. ಜನರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ನಮಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದ ಹೇಳಲಿಚ್ಛಿಸುತ್ತೇನೆ. ಚುನಾವಣೆಯ ಫಲಿತಾಂಶಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಬರಲಿಲ್ಲ. ಆದರೆ ಪರಿಶ್ರಮ ಮುಂದುವರಿಸಲಿದ್ದೇವೆ: ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ
 

ನವಜೋತ್‌ ಸಿಧು ವಿರುದ್ಧ ಗೆದ್ದ ಎಎಪಿಯ ‘ಪ್ಯಾಡ್‌ ವುಮನ್‌ ಆಫ್‌ ಪಂಜಾಬ್‌’

ಕಾಂಗ್ರೆಸ್‌ ವರಿಷ್ಠರು ಸ್ಪರ್ಧಿಸುವ ಅಮೇಠಿ, ರಾಯಬರೇಲಿಯಲ್ಲಿ ಯಾರಿಗೆ ಗೆಲುವು?

ಐದು ರಾಜ್ಯಗಳ ಚುನಾವಣೆಯ ಮತ ಎಣಿಕೆ ಹಾಗೂ ಫಲಿತಾಂಶದ ಮುಖ್ಯಾಂಶಗಳು ಇಲ್ಲಿವೆ

ದೆಹಲಿ: ಪಕ್ಷದ ಕಚೇರಿಗೆ ಆಗಮಿಸಿದ ಅಮಿತ್ ಶಾ, ರಾಜನಾಥ್ ಸಿಂಗ್

ಗೋವಾದಲ್ಲಿ ಬಿಜೆಪಿಗೆ ಮೂವರು ಪಕ್ಷೇತರರ ಬೆಂಬಲ

ಮೂವರು ಪಕ್ಷೇತರ ಶಾಸಕರು ನಮಗೆ ಪತ್ರದ ಮೂಲಕ ಬೆಂಬಲ ಸೂಚಿಸಿದ್ದು, ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುತ್ತೇವೆ: ಬಿಜೆಪಿ ಗೋವಾ ಘಟಕ ಅಧ್ಯಕ್ಷ ಸದಾನಂದ ಶೇಟ್‌ ತನವಾಡೆ
 

ನಾಲ್ಕು ರಾಜ್ಯಗಳ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ ಅಮಿತ್ ಶಾ

ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ, ಗೋವಾ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದು, ಬಿಜೆಪಿ ಮೇಲೆ ನಂಬಿಕೆಯನ್ನು ಇರಿಸಿದ್ದಕ್ಕಾಗಿ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. 
 

ಕೋವಿಡ್ ವಿರುದ್ಧ ಹೋರಾಡುತ್ತಿದ್ದಾಗ ನಮ್ಮ ವಿರುದ್ಧ ಸಂಚು: ಯೋಗಿ ಆದಿತ್ಯನಾಥ್

ನಾವು ಕೋವಿಡ್ ವಿರುದ್ಧ ಹೋರಾಡುತ್ತಿದ್ದಾಗ, ವಿರೋಧ ಪಕ್ಷಗಳು ನಮ್ಮ ವಿರುದ್ಧ ಸಂಚು ನಡೆಸಿದ್ದರು. ನಮ್ಮನ್ನು ಗೆಲ್ಲಿಸುವ ಮೂಲಕ ಜನರು ಮತ್ತೊಮ್ಮೆ ರಾಷ್ಟ್ರೀಯತೆ, ಉತ್ತಮ ಆಡಳಿತಕ್ಕಾಗಿ ಮತ ಚಲಾಯಿಸಿದ್ದಾರೆ. ಈ ಸಮಸ್ಯೆಗಳ ಬಗ್ಗೆ ಕೆಲಸ ಮುಂದುವರಿಸುವುದು ನಮ್ಮ ಜವಾಬ್ದಾರಿಯಾಗಿದೆ - ಯೋಗಿ ಆದಿತ್ಯನಾಥ್

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ಮೋದಿ

ಸಂಜೆ 7 ಗಂಟೆಗೆ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿರುವ ಪ್ರಧಾನಿ ನರೇಂದ್ರ ಮೋದಿ

ಉತ್ತರ ಪ್ರದೇಶದ ಜನತೆಗೆ ಕೃತಜ್ಞತೆ ಸಲ್ಲಿಸಿದ ಯೋಗಿ ಆದಿತ್ಯನಾಥ್

ಎಲ್ಲರೂ ಉತ್ತರ ಪ್ರದೇಶದ ಚುನಾವಣೆ ಮೇಲೆ ಕಣ್ಣಿಟ್ಟಿದ್ದರು. ನಮ್ಮನ್ನು ಬಹುಮತದೊಂದಿಗೆ ಗೆಲ್ಲಿಸಿರುವ ಜನರಿಗೆ ನಾನು ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ಪ್ರದಾನಿ ಮೋದಿ ನೇತೃತ್ವದಲ್ಲಿ ನಾವು ಉತ್ತರ ಪ್ರದೇಶ, ಗೋವಾ, ಮಣಿಪುರ ಮತ್ತು ಉತ್ತರಾಖಂಡದಲ್ಲಿ ಸರ್ಕಾರವನ್ನು ರಚಿಸುತ್ತೇವೆ: ಯೋಗಿ ಆದಿತ್ಯನಾಥ್. 

ಬಿಜೆಪಿ ಕಾರ್ಯಕರ್ತರ ಸಂಭ್ರಮ ಆಚರಣೆ

ಉತ್ತರ ಪ್ರದೇಶದ ಬಿಜೆಪಿ ಕಚೇರಿಯಲ್ಲಿ ವಿಜಯೋತ್ಸವ, ಸಿಎಂ ಯೋಗಿ ಆದಿತ್ಯನಾಥ್ ಆಗಮನ

ಉತ್ತರಾಖಂಡ: ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು, 27 ಕ್ಷೇತ್ರಗಳಲ್ಲಿ ಮುನ್ನಡೆ

ಉತ್ತರಾಖಂಡದಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, 27 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಆರು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, 13 ಕ್ಷೇತ್ರಗಳಲ್ಲಿ ಮುನ್ನಡೆ ಗಳಿಸಿದೆ. 

ಉತ್ತರ ಪ್ರದೇಶ: ಬಿಜೆಪಿ 30 ಸ್ಥಾನಗಳಲ್ಲಿ ಗೆಲುವು, 220 ಕ್ಷೇತ್ರಗಳಲ್ಲಿ ಮುನ್ನಡೆ

ಉತ್ತರ ಪ್ರದೇಶದಲ್ಲಿ ಬಿಜೆಪಿ 30 ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, 220 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಸಮಾಜವಾದಿ ಪಕ್ಷ ಮೂರು ಸ್ಥಾನಗಳಲ್ಲಿ ಗೆಲುವು ಹಾಗೂ 113 ಸ್ಥಾನಗಳಲ್ಲಿ ಮುನ್ನಡೆ ದಾಖಲಿಸಿದೆ. 

ಮಣಿಪುರ: ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು, 14 ಸ್ಥಾನಗಳಲ್ಲಿ ಮುನ್ನಡೆ

ಮಣಿಪುರದಲ್ಲಿ ಬಿಜೆಪಿ 15 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, 14 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಕಾಂಗ್ರೆಸ್ ಮೂರು ಸ್ಥಾನಗಳಲ್ಲಿ ಗೆಲುವು ದಾಖಲಿಸಿದ್ದು, ಒಂದು ಸ್ಥಾನದಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

ಜನತಾ ದಳ (ಯುನೈಟೆಡ್) ಐದು ಸ್ಥಾನಗಳಲ್ಲಿ ಗೆಲುವು ಸಾದಿಸಿದ್ದು, ಎರಡು ಕ್ಷೇತ್ರಗಳಲ್ಲಿ ಮುನ್ನಡೆ ದಾಖಲಿಸಿದೆ. 

ಗೋವಾ: ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು

ಗೋವಾದಲ್ಲಿ ಬಿಜೆಪಿ 20 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಾಂಗ್ರೆಸ್ ಒಂಬತ್ತು ಕ್ಷೇತ್ರಗಳಲ್ಲಿ ಜಯಭೇರಿ ಮೊಳಗಿಸಿದ್ದು, ಎರಡು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.   

ಪಂಜಾಬ್ ಚುನಾವಣೆ ಫಲಿತಾಂಶ: 79 ಸ್ಥಾನಗಳಲ್ಲಿ ಎಎಪಿ ಗೆಲುವು

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ 79 ಸ್ಥಾನಗಳಲ್ಲಿ ಎಎಪಿ ಗೆಲುವು ಸಾಧಿಸಿದ್ದು, 13 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಭರ್ಜರಿ ಗೆಲುವು

ಪಂಜಾಬ್‌ ಸೋಲಿಗೆ ಅಮರಿಂದರ್‌ರನ್ನು ಹೊಣೆ ಮಾಡಿದ ಕಾಂಗ್ರೆಸ್

ದೆಹಲಿ-ಪಂಜಾಬ್‌ನಲ್ಲಿ ಎಎಪಿ ಆಡಳಿತ; ಕಳವಳ ವ್ಯಕ್ತಪಡಿಸಿದ ಬಿಜೆಪಿ ನಾಯಕ ಖಟ್ಟರ್

ದೆಹಲಿ ಹಾಗೂ ಪಂಜಾಬ್‌ನಲ್ಲಿ ಎಎಪಿ ನಮ್ಮ ನೆರೆಹೊರೆಯಾಗಿರುವುದರಿಂದ ನೀರು ಮತ್ತು ಮಾಲಿನ್ಯ ಸಮಸ್ಯೆಗಳು ಮತ್ತಷ್ಟು ಉದ್ಭವಿಸಲಿವೆ. ನೀರಿಗಾಗಿ ಪಂಜಾಬ್-ಹರಿಯಾಣ ಮತ್ತು ನೀರಿನ ಪೂರೈಕೆಗಾಗಿ ದೆಹಲಿ-ಹರಿಯಾಣ ನಡುವೆ ಸಮಸ್ಯೆಯಿದೆ. ಅವರು ಹೇಗೆ ಆಡಳಿತ ನಡೆಸುತ್ತಾರೆ ಎಂಬುದನ್ನು ನಾವು ಎದುರು ನೋಡುತ್ತೇವೆ: ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ 

ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ: ಪಿ. ಚಿದಂಬರಂ

ಗೋವಾದ ಜನತೆಯ ತೀರ್ಪನ್ನು ಒಪ್ಪಿಕೊಳ್ಳುತ್ತೇವೆ. ನಮ್ಮ ಅಭ್ಯರ್ಥಿಗಳು ಹಲವಾರು ಸವಾಲುಗಳ ನಡುವೆಯೂ ದಿಟ್ಟತನದಿಂದ ಹೋರಾಡಿದರು. ಜನರು ಬಿಜೆಪಿಯನ್ನು ಅಧಿಕಾರಕ್ಕೆ ತಂದಿದ್ದಾರೆ. ಜನಾದೇಶವನ್ನು ನಾವು ಒಪ್ಪಿಕೊಳ್ಳುತ್ತೇವೆ. ಹಲವಾರು ಕ್ಷೇತ್ರಗಳಲ್ಲಿ ನಾವು ಅಲ್ಪ ಅಂತರದಿಂದ ಸೋತಿದ್ದೇವೆ - ಕಾಂಗ್ರೆಸ್ ನಾಯಕ ಪಿ. ಚಿದಂಬರಂ

ಮುಂದಿನ ವರ್ಷ ಕರ್ನಾಟಕದಲ್ಲೂ ಬಿಜೆಪಿ ಸರ್ಕಾರ ಗೆಲ್ಲಲಿದೆ: ಸಿಎಂ ಬೊಮ್ಮಾಯಿ

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. 2024ರಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ ಮತ್ತು ಪ್ರಧಾನಿಯವರ 'ನವ ಭಾರತ' ಕನಸು ನನಸಾಗಲಿದೆ. 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಸರ್ಕಾರ ಅಧಿಕಾರಕ್ಕೇರಲಿದೆ ಎಂಬ ಭರವಸೆಯಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ. 

ಎಎಪಿ ಅಭ್ಯರ್ಥಿ ವಿರುದ್ಧ ಸೋನು ಸೂದ್ ಸಹೋದರಿ ಮಾಳವಿಕಾಗೆ ಸೋಲು

ಫಲಿತಾಂಶ ಅಚ್ಚರಿ ತಂದಿದೆ: ಕಾಂಗ್ರೆಸ್ ನಾಯಕ ಹರೀಶ್ ರಾವತ್

ಚುನಾವಣೆ ಫಲಿತಾಂಶ ನನಗೆ ಅಚ್ಚರಿ ತಂದಿದೆ. ಇಷ್ಟೊಂದು ದೊಡ್ಡ ಮಟ್ಟದ ಹಣದುಬ್ಬರದ ಬಳಿಕವೂ ಇದು ಜನಾದೇಶವಾಗಿದ್ದರೆ ಸಾರ್ವಜನಿಕ ಕಲ್ಯಾಣ ಮತ್ತು ಸಾಮಾಜಿಕ ನ್ಯಾಯದ ವ್ಯಾಖ್ಯಾನ ಏನು? ಜನರು ಜಿಜೆಪಿಗೆ ಜಿಂದಾಬಾದ್ ಹೇಳುವುದನ್ನು ನನ್ನಿಂದ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. - ಕಾಂಗ್ರೆಸ್ ನಾಯಕ ಹರೀಶ್ ರಾವತ್
 

ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನಡೆ; ಕಾಂಗ್ರೆಸ್‌ನಿಂದ ಆತ್ಮಾವಲೋಕನ

ಚುನಾವಣೆ ಫಲಿತಾಂಶದಲ್ಲಿ ಎದುರಾಗಿರುವ ಸೋಲಿನ ಬಗ್ಗೆ ಆತ್ಮಾವಲೋಕನಕ್ಕಾಗಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ಶೀಘ್ರದಲ್ಲೇ ಕರೆಯಲು ಸೋನಿಯಾ ಗಾಂಧಿ ನಿರ್ಧರಿಸಿದ್ದಾರೆ ಎಂದು ಪಕ್ಷದ ನಾಯಕ ರಣದೀಪ್ ಸುರ್ಜೆವಾಲಾ ಹೇಳಿದ್ದಾರೆ. 

ಉತ್ತರಾಖಂಡ: ಸೋಲಿನ ಹೊಣೆ ವಹಿಸಿಕೊಳ್ಳುತ್ತೇನೆ: ಕಾಂಗ್ರೆಸ್ ನಾಯಕ ಹರೀಶ್ ರಾವತ್

ಚುನಾವಣೆ ಫಲಿತಾಂಶ ಪ್ರಧಾನಿ ಮೋದಿ ಜನಪ್ರಿಯತೆಗೆ ಸಾಕ್ಷಿ: ಪಿಯೂಷ್ ಗೋಯಲ್

ಇದು ದೇಶದೆಲ್ಲೆಡೆ ಪ್ರಧಾನಿ ಮೋದಿಯವರ ಜನಪ್ರಿಯತೆಯನ್ನು ತೋರಿಸುತ್ತದೆ. ಇದು ಪ್ರಧಾನಿ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಜನಪರ ಯೋಜನೆಗಳ ಫಲಿತಾಂಶವಾಗಿದೆ. ಉತ್ತರ ಪ್ರದೇಶದಲ್ಲಿ ಅಭಿವೃದ್ಧಿಯ ಬುಲ್ಡೋಜರ್ ಕೆಲಸ ಮುಂದುವರಿಸುತ್ತದೆ. ಗೋವಾ ಮತ್ತು ಮಣಿಪುರದಲ್ಲಿ ಹಿಂದಿಗಿಂತಲೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದ್ದೇವೆ: ಕೇಂದ್ರ ಸಚಿವ ಪಿಯೂಷ್ ಗೋಯಲ್

Prajavani Live: ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪರಿಣಾಮ

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭರ್ಜರಿ ಗೆಲುವು

1955ರ ಬಳಿಕ ಇದೇ ಮೊದಲ ಬಾರಿಗೆ, ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಿದ ಬಳಿಕ ಮತ್ತೆ ಅಧಿಕಾರ ಉಳಿಸಿಕೊಂಡ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥ್ ಗುರುತಿಸಿಕೊಳ್ಳಲಿದ್ದಾರೆ

ಮಣಿಪುರ: ಮುಖ್ಯಮಂತ್ರಿ ಬಿರೇನ್ ಸಿಂಗ್‌ಗೆ ಜಯ, ಬಿಜೆಪಿಗೆ ಮುನ್ನಡೆ

ದೇಶದ ಜನರ ಹಿತಾಸಕ್ತಿಗಾಗಿ ಕೆಲಸ ಮುಂದುವರಿಸುತ್ತೇವೆ - ರಾಹುಲ್ ಗಾಂಧಿ

ಜನಾದೇಶವನ್ನು ಒಪ್ಪಿಕೊಳ್ಳುತ್ತೇವೆ. ಗೆದ್ದವರಿಗೆ ಅಭಿನಂದನೆಗಳು. ಕ್ರಾಂಗ್ರೆಸ್‌ನ ಎಲ್ಲ ಕಾರ್ಯಕರ್ತರಿಗೂ ನನ್ನ ಕೃತಜ್ಞತೆಗಳು. ಇದರಿಂದ ಪಾಠ ಕಲಿಯುತ್ತೇವೆ ಮತ್ತು ದೇಶದ ಜನರ ಹಿತಾಸಕ್ತಿಗಾಗಿ ಕೆಲಸ ಮುಂದುವರಿಸುತ್ತೇವೆ. - ರಾಹುಲ್ ಗಾಂಧಿ. 

ಬಿಜೆಪಿಗೆ ಮೂವರು ಪಕ್ಷೇತರರ ಬೆಂಬಲ: ಗೋವಾ ಸಿಎಂ

ಈ ಗೆಲುವು ಅತ್ಯಂತ ಸವಾಲಿನಿಂದ ಕೂಡಿತ್ತು. ರಾಜ್ಯದೆಲ್ಲೆಡೆ ಪ್ರಚಾರ ನಡೆಸುತ್ತಿದ್ದರಿಂದ ಸ್ವಂತ ಕ್ಷೇತ್ರಕ್ಕೆ ಬರಲು ಸಾಧ್ಯವಾಗಲಿಲ್ಲ. ನನ್ನ ಕಾರ್ಯಕರ್ತರು ನನ್ನ ಪರವಾಗಿ ಪ್ರಚಾರ ಮಾಡಿದರು. ನಾನು ಅಲ್ಪ ಅಂತರದಲ್ಲಿ ಗೆಲುವು ದಾಖಲಿಸಿದ್ದೇನೆ. ಆದರೆ ಬಿಜೆಪಿಗೆ ಬಹುಮತ ಖಚಿತವಾಗಿದೆ. ಮೂವರು ಪಕ್ಷೇತರರು ಬೆಂಬಲ ದೃಢಪಡಿಸಿದ್ದಾರೆ. - ಗೋವಾ ಸಿಎಂ ಪ್ರಮೋದ್ ಸಾವಂತ್

ಜನರ ನಂಬಿಕೆಯನ್ನು ಹುಸಿಗೊಳಿಸುವುದಿಲ್ಲ - ಕೇಜ್ರಿವಾಲ್

'ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ನಾನು ಅಭಿನಂದಿಸಲು ಬಯುಸುತ್ತೇನೆ. ಎಎಪಿ 90ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಫಲಿತಾಂಶಗಳು ಇನ್ನೂ ಬರುತ್ತಿವೆ. ಜನರು ನಮ್ಮ ಮೇಲೆ ಅಪಾರ ನಂಬಿಕೆ ಇರಿಸಿದ್ದಾರೆ. ಅದನ್ನು ಹುಸಿಗೊಳಿಸುವುದಿಲ್ಲ. ನಾವು ಈ ದೇಶದ ರಾಜಕೀಯವನ್ನು ಬದಲಾಯಿಸುತ್ತೇವೆ.' - ಅರವಿಂದ್ ಕೇಜ್ರಿವಾಲ್

ಮಣಿಪುರ ಸಿಎಂಗೆ ಗೆಲುವು

ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರು ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ 18,271 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ

ಫಲಿತಾಂಶಗಳ ಬಗ್ಗೆ ಅಖಿಲೇಶ್ ತಲೆಕೆಡಿಸಿಕೊಳ್ಳಬಾರದು: ಶರದ್ ಪವಾರ್

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ತಮ್ಮ ಸ್ವಂತ ಬಲದಿಂದ ಸ್ಪರ್ಧಿಸಿದ್ದಾರೆ. ಅವರು ಮತದಾನದ ಫಲಿತಾಂಶಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದು. ಅವರು ಹಿಂದಿಗಿಂತಲೂ ಉತ್ತಮವಾಗಿ ಹೋರಾಡಿದ್ದಾರೆ. - ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್

ಪಂಜಾಬ್‌ನಲ್ಲಿ ಎಎಪಿ ಸಿಎಂ ಅಭ್ಯರ್ಥಿ ಭಗವಂತ್ ಮಾನ್‌ಗೆ ಭರ್ಜರಿ ಗೆಲುವು

ಧುರಿಯಲ್ಲಿ ಭಗವಂತ್ ಮಾನ್ 58,206 ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ. 

ಎಎಪಿ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡುತ್ತಿರುವ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್ ಭರವಸೆ

ತಮ್ಮ ಮಕ್ಕಳೂ ಎಂದಿಗೂ ಉಕ್ರೇನ್‌ಗೆ ಹೋಗದಂತಹ ನವ ಭಾರತವನ್ನು ಎಎಪಿ ನಿರ್ಮಿಸಲಿದೆ: ಅರವಿಂದ್ ಕೇಜ್ರಿವಾಲ್

ನವಜೋತಿ ಸಿಂಗ್ ಸಿಧು ಪರಾಭವ

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅಮೃತಸರ ಪೂರ್ವ ಕ್ಷೇತ್ರದಿಂದ 6,750 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ. 
 

ಪಂಜಾಬ್‌: ಸರ್ಕಾರಿ ಕಚೇರಿಗಳಲ್ಲಿ ಭಗತ್ ಸಿಂಗ್‌ ಫೋಟೊ– ಭಗವಂತ್‌ ಮಾನ್‌

ಭಗತ್‌ ಸಿಂಗ್‌ ಅವರ ಹಳ್ಳಿ 'ಖಟಕರಕಲಾನ್‌'ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ, ರಾಜ ಭವನದಲ್ಲಿ ಅಲ್ಲ ಎಂದು ಎಎಪಿ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌ ಹೇಳಿದ್ದಾರೆ.

ಸರ್ಕಾರದ ಯಾವುದೇ ಕಚೇರಿಯಲ್ಲೂ ಮುಖ್ಯಮಂತ್ರಿ ಫೋಟೊಗಳು ಇರುವುದಿಲ್ಲ. ಕಚೇರಿಗಳಲ್ಲಿ ಶಾಹೀದ್‌ ಭಗತ್‌ ಸಿಂಗ್‌ ಹಾಗೂ ಬಾಬಾಸಾಹೇಬ್‌ ಅಂಬೇಡ್ಕರ್‌ ಚಿತ್ರಗಳು ಇರಲಿವೆ.

ಪಂಜಾಬ್‌: ಎಎಪಿ ಅಭ್ಯರ್ಥಿಗಳ ಎದುರು ಪ್ರಮುಖ ನಾಯಕರ ಸೋಲು

ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಎಎಪಿ ಅಭ್ಯರ್ಥಿ ಲಾಭ್ ಸಿಂಗ್‌ ಅವರ ಎದುರು 27,000 ಅಂತರದಲ್ಲಿ ಸೋಲು ಕಂಡಿದ್ದಾರೆ. ಐದು ಬಾರಿ ಮುಖ್ಯಮಂತ್ರಿಯಾಗಿದ್ದ ಪ್ರಕಾಶ್‌ ಸಿಂಗ್‌ ಬಾದಲ್‌ ಅವರು ಎಎಪಿಯ ಗುರ್‌ಮೀತ್‌ ಖುದ್ದಿಯಾನ್‌ ಅವರ ಎದುರು 11,357 ಮತಗಳ ಅಂತರದಿಂದ ಸೋಲು ಅನುಭವಿಸಿದರು.

ಪಂಜಾಬ್‌ ಸಚಿವ ವಿಜಯಿಂದರ್‌ ಸಿಂಗ್ಲಾ ಅವರು ಎಎಪಿ ಅಭ್ಯರ್ಥಿ ನರಿಂದರ್‌ ಕೌರ್‌ ಭರಾಜ್‌ ಎದುರು 35,868 ಮತಗಳ ಅಂತರದಲ್ಲಿ ಸೋತ್ತಿದ್ದಾರೆ.

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ಗೆ ಸೋಲು

ಪಂಜಾಬ್‌ನ ಮಾಜಿ ಮುಖ್ಯಮಂತ್ರಿ, ಪಂಜಾಬ್‌ ಲೋಕ ಕಾಂಗ್ರೆಸ್‌ ಸಂಸ್ಥಾಪಕ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಅವರು ಪಟಿಯಾಲಾ ಕ್ಷೇತ್ರದಲ್ಲಿ ಸೋಲು ಕಂಡಿದ್ದಾರೆ. 19,873 ಮತಗಳ ಅಂತರದಲ್ಲಿ ಸೋತರು.

ಲಖನೌ: ಸಂಜೆ ಬಿಜೆಪಿ ಕಚೇರಿಗೆ ಸಿಎಂ ಯೋಗಿ

ಸಂಜೆ 5:30ಕ್ಕೆ ಲಖನೌದಲ್ಲಿನ ಬಿಜೆಪಿ ಕಚೇರಿಗೆ ಬರಲಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌.

ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಇಂದು ಪ್ರಧಾನಿ ಮೋದಿ ಭಾಷಣ

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ. ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸಂಜೆ 6:30ರ ನಂತರ ಸಭೆ ನಡೆಯಬಹುದು ಎಂದು ವರದಿಯಾಗಿದೆ.

ಎಎಪಿಗೆ ಶುಭಕೋರಿದ ಅಕಾಲಿ ದಳ

'ಪಂಜಾಬಿಗಳು ನೀಡಿರುವ ಆದೇಶವನ್ನು ಅತ್ಯಂತ ವಿನಯಪೂರ್ವಕವಾಗಿ ಸ್ವೀಕರಿಸುತ್ತೇವೆ. ಅಕಾಲಿ ದಳದ ಅಧ್ಯಕ್ಷನಾಗಿ ನಾನು, ಆಮ್‌ ಆದ್ಮಿ ಪಕ್ಷ ಮತ್ತು ಅದರ ಮುಖಂಡರಿಗೆ ಶುಭ ಕೋರುತ್ತೇನೆ' ಎಂದು ಸುಖಬಿರ್‌ ಸಿಂಗ್‌ ಬಾದಲ್‌ ಟ್ವೀಟಿಸಿದ್ದಾರೆ.

ಹನುಮಂತನ ದೇವಸ್ಥಾನದಲ್ಲಿ ಕೇಜ್ರಿವಾಲ್‌ ಪ್ರಾರ್ಥನೆ

ದೆಹಲಿಯ ಹನುಮಾನ್‌ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ದೆಹಲಿ ಮುಖ್ಯಮಂತ್ರಿ, ಎಎಪಿ ಮುಖಂಡ ಅರವಿಂದ್‌ ಕೇಜ್ರಿವಾಲ್‌ ಮತ್ತು ಮನೀಶ್‌ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್‌.

ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ನಿವಾಸದಲ್ಲಿ ಸಂಭ್ರಮಾಚರಣೆ

ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ನಿವಾಸದಲ್ಲಿ ಸಂಭ್ರಮಾಚರಣೆ 

ಲಖನೌದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಲಖನೌದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮಾಚರಣೆ

ಗೋವಾದಲ್ಲಿ ಪ್ರಾಮಾಣಿಕ ರಾಜಕಾರಣದ ಆರಂಭ: ಕೇಜ್ರಿವಾಲ್

ಗೋವಾದಲ್ಲಿ ಎಎಪಿ ಎರಡು ಸ್ಥಾನಗಳನ್ನು ಗೆದ್ದಿದ್ದು, ಪ್ರಾಮಾಣಿಕ ರಾಜಕಾರಣದ ಆರಂಭವಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. 
 

ಜನರ ತೀರ್ಪಿಗೆ ತಲೆ ಬಾಗಿದ ಅಮರಿಂದರ್ ಸಿಂಗ್

'ಜನರ ತೀರ್ಪನ್ನು ಒಪ್ಪಿಕೊಳ್ಳುತ್ತೇನೆ. ಪ್ರಜಾಪ್ರಭುತ್ವಕ್ಕೆ ಸಿಕ್ಕ ಜಯವಾಗಿದೆ. ಪಂಜಾಬಿಗಳು ಜಾತಿ, ಪಂಥ ಮೀರಿ ಮತ ಚಲಾಯಿಸುವ ಮೂಲಕ ಪಂಜಾಬಿನ ನಿಜವಾದ ಮನೋಭಾವವನ್ನು ತೋರಿಸಿದ್ದಾರೆ. ಎಎಪಿ ಹಾಗೂ ಭಗವಂತ್ ಮಾನ್ ಅವರಿಗೆ ಅಭಿನಂದನೆಗಳು' - ಅಮರಿಂದರ್ ಸಿಂಗ್

ಪಂಜಾಬ್‌ನಲ್ಲಿ ಎಎಪಿ ವಿಜಯೋತ್ಸವ

ತಮ್ಮ ನಿವಾಸದ ಹೊರಗಡೆ ಪಕ್ಷದ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತಿರುವ ಎಎಪಿ ನಾಯಕ  ಭಗವಂತ್ ಮಾನ್ 
 

ಪಂಜಾಬ್‌: ಮುಖ್ಯಮಂತ್ರಿ ಸ್ಥಾನಕ್ಕೆ ನಾಳೆ ಚನ್ನಿ ರಾಜೀನಾಮೆ?

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಶುಕ್ರವಾರ ಬೆಳಿಗ್ಗೆ 11:30ಕ್ಕೆ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಸಭೆಯ ಬಳಿಕ ಇತರೆ ಸಚಿವರ ಜೊತೆಗೆ ಚನ್ನಿ ಅವರು ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆ.

ಉತ್ತರಾಖಂಡದ ಹಾಲಿ, ಮಾಜಿ ಮುಖ್ಯಮಂತ್ರಿಗಳಿಗೆ ಹಿನ್ನಡೆ

ಉತ್ತರಾಖಂಡದ ಬಿಜೆಪಿ ಮುಖಂಡ, ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹಾಗೂ ಕಾಂಗ್ರೆಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಹಿನ್ನಡೆ ಅನುಭವಿಸಿದ್ದಾರೆ.

ಪಂಜಾಬ್‌ ಸಿಎಂ ಚನ್ನಿಗೆ ಹಿನ್ನಡೆ; 22,000ಕ್ಕೂ ಹೆಚ್ಚು ಮತಗಳ ಅಂತರ

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಅವರು ಬದೌಡ್‌ ಕ್ಷೇತ್ರದಲ್ಲಿ 22,000ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಹಿನ್ನಡೆಯಲ್ಲಿದ್ದಾರೆ. ಚಾಮ್‌ಕೌರ್‌ ಸಾಹಿಬ್‌ ಕ್ಷೇತ್ರದಲ್ಲಿ 2,671 ಮತಗಳ ಅಂತರದಿಂದ ಹಿಂದುಳಿದಿದ್ದಾರೆ.

ಗೋವಾ: ಸರ್ಕಾರ ರಚನೆಗೆ ಎಂಜಿಪಿ, ಪಕ್ಷೇತರ ಅಭ್ಯರ್ಥಿಗಳ ಸಹಕಾರ– ಪ್ರಮೋದ್‌ ಸಾವಂತ್‌

ಗೋವಾದಲ್ಲಿ ಬಿಜೆಪಿಯು ಸರ್ಕಾರ ರಚಿಸುವುದಾಗಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಹೇಳಿದ್ದಾರೆ. 'ಎಂಜಿಪಿ ಮತ್ತು ಸ್ವತಂತ್ರ ಅಭ್ಯರ್ಥಿಗಳನ್ನು ನಮ್ಮ ಜೊತೆಗೆ ಸೇರಿಸಿಕೊಳ್ಳುತ್ತೇವೆ' ಎಂದಿದ್ದಾರೆ.

ಯುಪಿ+ಯೋಗಿ = ಉಪಯೋಗಿ!

ಯುಪಿ+ಯೋಗಿ = ಉಪಯೋಗಿ!

ಉತ್ತರ ಪ್ರದೇಶವನ್ನು ಉತ್ತಮ ಪ್ರದೇಶವಾಗಿ ಪರಿವರ್ತಿಸುವ ಮೂಲಕ 'ಯುಪಿ+ಯೋಗಿ' ನಿಶ್ಚಯವಾಗಿ 'ಉಪಯೋಗಿ' ಎಂಬುದನ್ನು ಸಾಬೀತು ಪಡಿಸಿದೆ. ಬಿಜೆಪಿಗೆ ಉತ್ತರ ಪ್ರದೇಶದಲ್ಲಿ ಐತಿಹಾಸಿಕ ಮತ್ತು ದೊಡ್ಡ ಗೆಲುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಮೇಲಿನ ಅಚಲ ನಂಬಿಕೆ ಮತ್ತು ಮಹಾಂತ ಯೋಗಿ ಆದಿತ್ಯನಾಥ್‌ ಜೀ ಅವರ ವಿಕಾಸ ಮಂತ್ರದ ಫಲವಿದು ಎಂದು ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್‌ ಮೂಲಕ ಸಂಭ್ರಮ ವ್ಯಕ್ತಪಡಿಸಿದ್ದಾರೆ.

'ಬಿಜೆಪಿ, ಬಿಜೆಪಿ, ಬಿಜೆಪಿ!'

'ಚುನಾವಣೆ ಫಲಿತಾಂಶದ ಸೂಚನೆಗಳು ಬಹಳ ಸ್ಪಷ್ಟವಾಗಿವೆ. ಅದು ಬಿಜೆಪಿ, ಬಿಜೆಪಿ, ಬಿಜೆಪಿ!' ಎಂದು ಸಂಸದ ಪ್ರಕಾಶ್‌ ಜಾವಡೇಕರ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ಪಂಜಾಬ್ ಜನತೆಯ ಆದೇಶಕ್ಕೆ ತಲೆ ಬಾಗಿದ ಸಿಧು, ಎಎಪಿಗೆ ಅಭಿನಂದನೆ!

ಪಂಜಾಬ್‌ ಜನರ ತೀರ್ಪನ್ನು ಸ್ವೀಕರಿಸಿರುವುದಾಗಿ ಟ್ವೀಟಿಸಿರುವ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು, ಗೆಲುವಿನ ನಗೆ ಬೀರಿರುವ ಆಮ್‌ ಆದ್ಮಿ ಪಕ್ಷಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಪಂಜಾಬ್‌ ಮತದಾರರ ತೀರ್ಪನ್ನು ಕ್ರಾಂತಿ ಎಂದ ಕೇಜ್ರಿವಾಲ್‌


'ಈ ಕ್ರಾಂತಿಗೆ ಕಾರಣರಾದ ಪಂಜಾಬ್‌ನ ಜನತೆಗೆ ಅಭಿನಂದನೆಗಳು...'- ಅರವಿಂದ್ ಕೇಜ್ರಿವಾಲ್‌, ಎಎಪಿ ಮುಖಂಡ, ದೆಹಲಿ ಮುಖ್ಯಮಂತ್ರಿ 

ಗೋವಾ: ರಾಜ್ಯಪಾಲರನ್ನು ಭೇಟಿಯಾಗಲಿರುವ ಬಿಜೆಪಿ ನಾಯಕರು

ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆಯ ಕಸರತ್ತಿಗೆ ಮುಂದಾಗಿದ್ದು, ರಾಜ್ಯಪಾಲರಾದ ಪಿ.ಎಸ್‌.ಶ್ರೀಧರನ್‌ ಪಿಳ್ಳೈ ಅವರನ್ನು ಪಕ್ಷದ ನಾಯಕರು ಭೇಟಿಯಾಗಲಿದ್ದಾರೆ. ಕಾಂಗ್ರೆಸ್‌ ಮುಖಂಡರು ಸಹ ರಾಜ್ಯಪಾಲರ ಭೇಟಿಗಾಗಿ ಸಮಯ ಕೋರಿದ್ದಾರೆ.

ವಿಜಯೋತ್ಸವ: ನಿರ್ಬಂಧ ಹಿಂಪಡೆದ ಚುನಾವಣಾ ಆಯೋಗ

ವಿಧಾನಸಭಾ ಚುನಾವಣಾ ಫಲಿತಾಂಶ: ರಾಜಕೀಯ ಪಕ್ಷಗಳಿಗೆ ವಿಜಯೋತ್ಸವ ನಡೆಸಲು ಹೇರಿದ್ದ ನಿರ್ಬಂಧವನ್ನು ಚುನಾವಣಾ ಆಯೋಗವು ಹಿಂಪಡೆದಿದೆ.

ಹಾಲಿ, ಮಾಜಿ ಮುಖ್ಯಮಂತ್ರಿಗಳಿಗೆ ಹಿನ್ನಡೆ

ಉತ್ತರಾಖಂಡದ ಮಾಜಿ ಮುಖ್ಯಮಂತ್ರಿ ಹರೀಶ್‌ ರಾವತ್‌ ಅವರು ಹಿನ್ನಡೆ ಅನುಭವಿಸಿದ್ದಾರೆ. ಪಂಜಾಬ್‌ನ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ, ಎಸ್‌ಎಡಿಯ ಪ್ರಕಾಶ್‌ ಸಿಂಗ್‌ ಬಾದಲ್‌, ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅವರಿಂದರ್‌ ಸಿಂಗ್‌ ಹಾಗೂ ಪಂಜಾಬ್‌ ಕಾಂಗ್ರೆಸ್‌ ಮುಖ್ಯಸ್ಥ ನವಜೋತ್‌ ಸಿಂಗ್‌ ಸಿಧು ಅವರಿಗೆ ಹಿನ್ನಡೆಯಾಗಿದೆ.

ಕೆಲವೊಬ್ಬರು ಸುಧಾರಿಸುವುದೇ ಇಲ್ಲ: ಬಿ.ಎಲ್.ಸಂತೋಷ್

ಉತ್ತರ ಪ್ರದೇಶದಲ್ಲಿ ಬಿಜೆಪಿ ಬೆಂಬಲಿಗರ ಸಂಭ್ರಮ

ಉತ್ತರ ಪ್ರದೇಶದ ಲಖನೌದಲ್ಲಿ ಬಿಜೆಪಿ ಬೆಂಬಲಿಗರ ಸಂಭ್ರಮ.

ಗೋವಾ: ಪರ್‍ರೀಕರ್‌ ಮಗ ಉತ್ಪಲ್‌ಗೆ ಹಿನ್ನಡೆ

ಪಣಜಿ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮುಖ್ಯಮಂತ್ರಿಯಾಗಿದ್ದ ದಿವಂಗತ ಮನೋಹರ್‌ ಪರ್‍ರೀಕರ್‌ ಅವರ ಮಗ ಉತ್ಪಲ್‌ ಅವರು ಹಿನ್ನಡೆ ಕಂಡಿದ್ದಾರೆ. 'ಸ್ವತಂತ್ರ ಅಭ್ಯರ್ಥಿಯಾಗಿಯೂ ಉತ್ತಮ ಸ್ಪರ್ಧಿ ನೀಡಿರುವುದು ಸಮಾಧಾನ ತಂದಿದೆ. ಆದರೆ, ಫಲಿತಾಂಶವು ಬೇಸರ ತಂದಿದೆ' ಎಂದು ಉತ್ಪಲ್‌ ಪ್ರತಿಕ್ರಿಯಿಸಿದರು.

ಬಿಜೆಪಿ ಸೇರಿದ್ದ 10 ಶಾಸಕರ ಅನರ್ಹತೆಗೆ ಸುಪ್ರೀಂ ಮೆಟ್ಟಿಲೇರಿದ ಗೋವಾ ಕಾಂಗ್ರೆಸ್

ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಗೆಲುವು


ಬಿಜೆಪಿ ನಾಯಕ, ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಅವರು ಹಿಗಾಂಗ್‌ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. 

ಇದು ಸಾಮಾನ್ಯ ನಾಗರಿಕನ ಗೆಲುವು: ಮನೀಶ್‌ ಸಿಸೋಡಿಯಾ

ಕೇಜ್ರಿವಾಲ್‌ ಮಾದರಿಯ ಆಡಳಿತಕ್ಕೆ ಪಂಜಾಬ್‌ ಅವಕಾಶ ನೀಡಿದೆ. ಇಂದು ಅವರ ಮಾದರಿಯ ಆಡಳಿತವು ರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸಿದೆ. ಇದು 'ಆಮ್‌ ಆದ್ಮಿಯ' ಗೆಲುವು ಎಂದು ಎಎಪಿ ಮುಖಂಡ ಮನೀಶ್‌ ಸಿಸೋಡಿಯಾ ಹೇಳಿದ್ದಾರೆ.

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ: ಸಿ.ಟಿ.ರವಿ

'ನಾಲ್ಕು ರಾಜ್ಯಗಳಲ್ಲಿ ಜಯಭೇರಿ ಬಾರಿಸುವ ಜೊತೆಗೆ ಸರ್ಕಾರ ರಚನೆಗೆ ಮುಂದಾಗಲಿದೆ ಬಿಜೆಪಿ'– ಸಿ.ಟಿ.ರವಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ 

ವಾರಾಣಸಿಯ 6 ಕ್ಷೇತ್ರಗಳಲ್ಲಿ ಬಿಜೆಪಿ

ಉತ್ತರ ಪ್ರದೇಶದ ವಾರಾಣಸಿಯ 8 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ. ಸಮಾಜವಾದಿ ಪಕ್ಷವು 2 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಐದು ರಾಜ್ಯಗಳ 2017ರ ವಿಧಾನಸಭಾ ಚುನಾವಣೆ ಫಲಿತಾಂಶ

2017ರ ವಿಧಾನಸಭಾ ಚುನಾವಣೆ ಫಲಿತಾಂಶ

ಉತ್ತರ ಪ್ರದೇಶ: 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ 312 ಕ್ಷೇತ್ರಗಳಲ್ಲಿ ಗೆಲುವು

ಬಿಜೆಪಿ–312
ಎಸ್‌ಪಿ– 47
ಬಿಎಸ್‌ಪಿ– 19
ಕಾಂಗ್ರೆಸ್‌– 07

***
ಪಂಜಾಬ್‌: 117 ವಿಧಾನಸಭಾ ಕ್ಷೇತ್ರಗಳ ಪೈಕಿ 77 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

ಕಾಂಗ್ರೆಸ್‌– 77
ಎಎಪಿ– 20
ಲೋಕ ಇನ್‌ಸಾಫ್‌ ಪಾರ್ಟಿ– 02
ಶಿರೋಮಣಿ ಅಕಾಲಿ ದಳ (ಎಸ್‌ಎಡಿ)– 15
ಬಿಜೆಪಿ– 3

***
ಉತ್ತರಾಖಂಡ: 70 ವಿಧಾನಸಭಾ ಕ್ಷೇತ್ರಗಳ ಪೈಕಿ 57 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು

ಬಿಜೆಪಿ– 57
ಕಾಂಗ್ರೆಸ್‌– 11

***
ಗೋವಾ: 40 ವಿಧಾನಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

ಕಾಂಗ್ರೆಸ್‌– 17
ಬಿಜೆಪಿ– 13
ಎಂಎಜಿ– 3
ಜಿಎಫ್‌ಎ– 3
ಪಕ್ಷೇತರರು– 3

***
ಮಣಿಪುರ: 60 ವಿಧಾನಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು

ಕಾಂಗ್ರೆಸ್‌–28
ಬಿಜೆಪಿ– 21
ನಾಗಾ ಪೀಪಲ್ಸ್‌ ಫ್ರಂಟ್‌– 04
ನ್ಯಾಷನಲ್‌ ಪೀಪಲ್ಸ್‌ ಪಾರ್ಟಿ– 04

ಪಕ್ಷದ ಕಚೇರಿಯತ್ತ ಎಸ್‌ಪಿ ಮುಖಂಡ ಅಖಿಲೇಶ್‌ ಯಾದವ್‌

ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಅವರು ಪಕ್ಷದ ಕಚೇರಿ ತಲುಪಿದ್ದಾರೆ. ಪಕ್ಷವು ಉತ್ತರ ಪ್ರದೇಶದಲ್ಲಿ 97 ಸ್ಥಾನಗಳಲ್ಲಿ ಮುಂದಿದೆ. 

ಉತ್ತರ ಪ್ರದೇಶ: ಸಿಎಂ ಯೋಗಿ ಆದಿತ್ಯನಾಥ್‌ಗೆ ಮುನ್ನಡೆ

ಉತ್ತರ ಪ್ರದೇಶದಲ್ಲಿ ಬಿಜೆಪಿ 232 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುವ ಮೂಲಕ ಬಹುಮತದ ಸಂಖ್ಯೆ ದಾಟಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಗೋರಖ್‌ಪುರ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಗೋವಾದಲ್ಲಿ ಬಿಜೆಪಿ 18 ಕ್ಷೇತ್ರಗಳಲ್ಲಿ ಮುನ್ನಡೆ

ಗೋವಾದ 40 ಕ್ಷೇತ್ರಗಳ ಪೈಕಿ ಬಿಜೆಪಿ18 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಸಾಂಕೆಲಿಮ್‌ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಅವರು 300 ಮತಗಳ ಅಂತರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕಾಂಗ್ರೆಸ್‌ 12 ಕ್ಷೇತ್ರಗಳಲ್ಲಿ, ಎಎಪಿ 1 ಕ್ಷೇತ್ರದಲ್ಲಿ ಮುಂದಿದೆ.

ಪುಟಾಣಿ ಕೇಜ್ರಿವಾಲ್‌...

ಪಂಜಾಬ್‌ನಲ್ಲಿ ಆಮ್‌ ಆದ್ಮಿ ಪಾರ್ಟಿ (ಎಎಪಿ) ಗೆಲುವು ಬಹುತೇಕ ಖಚಿತವಾಗಿದ್ದು, ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಸಿಎಂ ಅರವಿಂದ್ ಕೇಜ್ರಿವಾಲ್‌ ಅವರು ಗೆಲುವಿನ ನಗೆ ಬೀರಿದ್ದಾರೆ. ಇದೇ ಸಂದರ್ಭದಲ್ಲಿ ಪುಟ್ಟ ಹುಡುಗನಿಗೆ ಕೇಜ್ರಿವಾಲ್‌ ರೀತಿಯ ಉಡುಗೆ ಧರಿಸಿ ಎಎಪಿಯ ಬೆಂಬಲಿಗರು ಸಂಭ್ರಮಿಸಿದ್ದಾರೆ.

ಉತ್ತರಾಖಂಡದಲ್ಲಿ ಬಿಜೆಪಿಗೆ ಬಹುಮತ

ಉತ್ತರಾಖಂಡದಲ್ಲಿ ಬಿಜೆಪಿಗೆ ಬಹುಮತ ಪಡೆದಿದೆ. 70 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳಲ್ಲಿ ಬಿಜೆಪಿ ಮುಂದಿದೆ. 

ಮಣಿಪುರದಲ್ಲೂ ಬಿಜೆಪಿ ಮುಂದೆ

60 ವಿಧಾನಸಭಾ ಕ್ಷೇತ್ರಗಳ ಮಣಿಪುರದಲ್ಲಿ ಬಿಜೆಪಿ 28 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

ಗೋವಾದಲ್ಲಿ ಬಿಜೆಪಿ; ಪ್ರಮೋದ್‌ಗೆ ಹಿನ್ನಡೆ

ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ಗೆ ಹಿನ್ನಡೆಯಾಗಿದೆ. ರಾಜ್ಯದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮುನ್ನಡೆ

ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ. ಪಂಜಾಬ್‌ನಲ್ಲಿ ಎಎಪಿ ಗೆಲುವಿನತ್ತ ಸಾಗಿದೆ.

ಪಂಜಾಬ್‌: ಎಎಪಿಗೆ ಶೇ 40ರಷ್ಟು ಮತ

ಉತ್ತರ ಪ್ರದೇಶದಲ್ಲಿ ಬಿಜೆಪಿ ಶೇಕಡ 38.9ರಷ್ಟು ಮತ ಪಡೆದಿದ್ದರೆ, ಪಂಜಾಬ್‌ನಲ್ಲಿ ಎಎಪಿ ಒಟ್ಟು ಮತಗಳಲ್ಲಿ ಶೇಕಡ 40.3ರಷ್ಟು ಪಾಲು ಗಳಿಸಿರುವುದಾಗಿ ಚುನಾವಣಾ ಆಯೋಗದ ಪ್ರಕಟಣೆಯಲ್ಲಿ ತಿಳಿಸಿದೆ.

ಉತ್ತರಾಖಂಡ: ಸಿಎಂ ಧಾಮಿಗೆ ಹಿನ್ನಡೆ

ಉತ್ತರಾಖಂಡದಲ್ಲಿ 70 ಕ್ಷೇತ್ರಗಳ ಪೈಕಿ ಬಿಜೆಪಿ 43 ಕ್ಷೇತ್ರಗಳಲ್ಲಿ ಮುಂದಿದೆ. ಆದರೆ, ಮುಖ್ಯಮಂತ್ರಿ ಪುಷ್ಕರ್‌ ಸಿಂಗ್‌ ಧಾಮಿ ಹಿನ್ನಡೆ ಅನುಭವಿಸಿದ್ದಾರೆ.

ಉತ್ತರ ಪ್ರದೇಶ ಚುನಾವಣೆ ಫಲಿತಾಂಶ


* ಕರ್ಹಲ್‌ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್‌ ಯಾದವ್‌ ಮುನ್ನಡೆ; ಬಿಎಸ್‌ಪಿ ಮತ್ತು ಬಿಜೆಪಿಯು ಎರಡು ಹಾಗೂ ಮೂರನೇ ಸ್ಥಾನದಲ್ಲಿವೆ.

* ಬಿಜೆಪಿಯ ಅದಿತಿ ಸಿಂಗ್‌ ರಾಯ್‌ ಬರೇಲಿಯಲ್ಲಿ ಮುನ್ನಡೆ

ಗೋವಾ: ಕಾಂಗ್ರೆಸ್‌ 15 ಕ್ಷೇತ್ರಗಳಲ್ಲಿ ಮುನ್ನಡೆ

ಗೋವಾದಲ್ಲಿ ಕಾಂಗ್ರೆಸ್‌ 15 ಕ್ಷೇತ್ರಗಳಲ್ಲಿ ಮುನ್ನಡೆ...

ಉತ್ತರ ಪ್ರದೇಶ: ಬಿಜೆಪಿ ಮುನ್ನಡೆ

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.

ಪಂಜಾಬ್‌: ಎಎಪಿಯ ಭಗವಂತ್‌ ನಿವಾಸದಲ್ಲಿ ಸಂಭ್ರಮ

ಎಎಪಿಯ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್‌ ಮಾನ್‌ ಅವರ ನಿವಾಸದ ಮುಂದೆ ಸಂಭ್ರಮಾಚರಣೆ ಜೋರಾಗಿದೆ.

ಐದು ರಾಜ್ಯಗಳ ಮತದಾನೋತ್ತರ ಸಮೀಕ್ಷೆ ಹೀಗಿದೆ...

ಐದು ರಾಜ್ಯಗಳ ಮತದಾನೋತ್ತರ ಸಮೀಕ್ಷೆ ಹೀಗಿದೆ...

ಪಂಜಾಬ್‌: ಕ್ಯಾಪ್ಟನ್‌, ಚನ್ನಿ, ಸಿಧುಗೆ ಹಿನ್ನಡೆ

ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಸ್ಪರ್ಧಿಸಿರುವ ಎರಡೂ ಕ್ಷೇತ್ರಗಳಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಹಾಗೂ ಕಾಂಗ್ರೆಸ್ ಮುಖಂಡ ನವಜೋತ್‌ ಸಿಂಗ್‌ ಸಿಧು ಸಹ ಹಿನ್ನಡೆಯಲ್ಲಿದ್ದಾರೆ. ಪಂಜಾಬ್‌ನಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವ ಮ್ಯಾಜಿಕ್‌ ಸಂಖ್ಯೆ 59ಕ್ಕೆ ಎಎಪಿ ಸಮೀಪದಲ್ಲಿದೆ. ಈಗಾಗಲೇ ಎಎಪಿ 54 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್‌ ಅಮರಿಂದರ್‌ ಸಿಂಗ್‌ ಎಎಪಿಯ ಅಜಿತ್‌ ಪಾಲ್‌ ಕೊಹ್ಲಿ ಎದುರು ಹಿನ್ನಡೆ ಅನುಭವಿಸಿದ್ದಾರೆ.

ಷೇರುಪೇಟೆ: ಸೆನ್ಸೆಕ್ಸ್‌ 1,000 ಅಂಶ ಏರಿಕೆ

ರಷ್ಯಾ–ಉಕ್ರೇನ್‌ ಸಂಘರ್ಷದ ಕಾರಣದಿಂದಾಗಿ ಹಾವು ಏಣಿ ಆಟದಂತಾಗಿರುವ ದೇಶದ ಷೇರುಪೇಟೆಗಳಲ್ಲಿ ಇಂದು ಚೇತರಿಕೆ ಕಂಡು ಬಂದಿದೆ. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ 1,000 ಅಂಶ ಏರಿಕೆಯಾಗಿ 55,688 ಅಂಶ ತಲುಪಿದೆ. ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ 302 ಅಂಶ ಏರಿಕೆಯಾಗಿ 16,647.50 ಅಂಶಗಳಲ್ಲಿ ವಹಿವಾಟು ಮುಂದುವರಿದಿದೆ.

ಉತ್ತರ ಪ್ರದೇಶ: ಮತ ಎಣಿಕೆ ಪ್ರಕ್ರಿಯೆಯ ಮೇಲೆ ಕಠಿಣ ಭದ್ರತೆ

'ಉತ್ತರ ಪ್ರದೇಶದಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಿದ್ದು, ಪ್ರಕ್ರಿಯೆಯ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಹಾಗೂ ಸೂಕ್ತ ಭದ್ರತೆ ನೀಡಲಾಗಿದೆ' –ಸುಹಾಸ್‌ ಎಲ್‌.ವೈ, ಗೌತಮ ಬುದ್ಧ ನಗರ ಜಿಲ್ಲಾಧಿಕಾರಿ

ಪಂಜಾಬ್‌ ಸಿಎಂ ಚರಣ್‌ಜಿತ್‌ ಸಿಂಗ್‌ ಚನ್ನಿ ಪ್ರಾರ್ಥನೆ

ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್‌ ಸಿಂಗ್‌ ಚನ್ನಿ ಗುರುದ್ವಾರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಮಣಿಪುರ ಸಿಎಂ ದೇವಾಲಯ ಭೇಟಿ

ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಅವರು ಇಂಫಾಲದ ಶ್ರೀ ಗೋವಿಂದಾಜೆ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಿದರು.

ಉತ್ತರ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ...

‌ಐದೂ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭವಾಗಿದ್ದು, ಉತ್ತರ ಪ್ರದೇಶದಲ್ಲಿ ಬಿಜೆಪಿ 19 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಪಂಜಾಬ್‌ನಲ್ಲಿ ಎಎಪಿ 10 ಸ್ಥಾನ, ಉತ್ತರಾಖಂಡದಲ್ಲಿ ಕಾಂಗ್ರೆಸ್‌ 10 ಸ್ಥಾನ, ಗೋವಾದಲ್ಲಿ ಬಿಜೆಪಿ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ.

ಸಂಭ್ರಮಿಸಲು ಸಿಹಿ...

ಪಂಜಾಬ್‌ನ ಜಲಂಧರ್‌ನಲ್ಲಿ ಬುಧವಾರ ಸಿಹಿ ತಿನಿಸುಗಳ ತಯಾರಿಯಲ್ಲಿ ತೊಡಗಿರುವ ಸಿಬ್ಬಂದಿ

ಐದು ರಾಜ್ಯಗಳಲ್ಲಿ ಮತ ಎಣಿಕೆ ಆರಂಭ

ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಒಟ್ಟು 1,200 ಮತ ಎಣಿಕೆ ಕೇಂದ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಬೆಳಿಗ್ಗೆ 8ರಿಂದ ಆರಂಭವಾಗಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆಯು 690 ಕ್ಷೇತ್ರಗಳ 6,944 ಅಭ್ಯರ್ಥಿಗಳ ಹಣೆಬರಹವನ್ನು ನಿರ್ಧರಿಸಲಿದೆ.

ಮೊದಲಿಗೆ ಅಂಚೆ ಪತ್ರಗಳ ಎಣಿಕೆ ನಡೆಯುತ್ತಿದೆ.

ಉತ್ತರಾಖಂಡ: ಕಾಂಗ್ರೆಸ್‌ಗೆ 48 ಸ್ಥಾನ– ಮಾಜಿ ಸಿಎಂ ಹರೀಶ್‌ ರಾವತ್‌

'ಉತ್ತರಾಖಂಡದಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸುವ ವಿಶ್ವಾಸವಿದೆ. ಮುಂದಿನ 2–3 ಗಂಟೆಗಳಲ್ಲಿ ಎಲ್ಲವೂ ಸ್ಪಷ್ಟವಾಗಲಿವೆ. ರಾಜ್ಯದ ಜನರ ಮೇಲೆ ನನಗೆ ನಂಬಿಕೆ ಇದೆ. ಕಾಂಗ್ರೆಸ್‌ ರಾಜ್ಯದಲ್ಲಿ 48 ಸ್ಥಾನಗಳನ್ನು ಗಳಿಸಲಿದೆ.'- ಹರೀಶ್‌ ರಾವತ್‌, ಮಾಜಿ ಮುಖ್ಯಮಂತ್ರಿ, ಉತ್ತರಾಖಂಡ

ಏನಾಗಲಿದೆ ಕಾಂಗ್ರೆಸ್ ಸ್ಥಿತಿ?

ಮತಗಟ್ಟೆ ಸಮೀಕ್ಷೆಯಂತೆ ಪಂಜಾಬ್‌ನಲ್ಲಿ ಎಎಪಿ ಗೆಲ್ಲಲಿದೆ ಎಂಬುದು ನಿಜವಾಗುವುದಿಲ್ಲ ಎಂಬುದು ಕಾಂಗ್ರೆಸ್ ನಂಬಿಕೆ. ಸಮೀಕ್ಷೆಗಳು ಭವಿಷ್ಯ ನುಡಿದಂತೆ ಪಕ್ಷದ ಸಂಖ್ಯಾಬಲವು 30–40 ಸ್ಥಾನಗಳಿಗೆ ಕುಸಿದರೆ, ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಶಾಸಕರನ್ನು ಸೆಳೆಯಲಿದ್ದಾರೆಯೇ ಎಂಬ ಕುತೂಹಲ ಇದೆ. ಉತ್ತರಾಖಂಡ, ಗೋವಾದ ಮೇಲೆ ಕಾಂಗ್ರೆಸ್ ಹೆಚ್ಚು ಗಮನ ಕೇಂದ್ರೀಕರಿಸಿದೆ. ಹಿರಿಯ ಮುಖಂಡರಾದ ಭೂಪೇಶ್ ಬಘೆಲ್, ಪಿ.ಚಿದಂಬರಂ ಹಾಗೂ ಡಿ.ಕೆ. ಶಿವಕುಮಾರ್ ಅವರನ್ನು ವಿಶೇಷ ವೀಕ್ಷಕರಾಗಿ ಪಕ್ಷ ನಿಯೋಜಿಸಿದ್ದು, ಕಾರ್ಯತಂತ್ರ ರೂಪಿಸುತ್ತಿದೆ.

ಗೋವಾ: ರಾಜ್ಯಪಾಲರ ಭೇಟಿಗೆ ಸಮಯ ಕೋರಿದ ಕಾಂಗ್ರೆಸ್‌

ಮತ ಎಣಿಕೆ ಆರಂಭಕ್ಕೂ ಮುನ್ನವೇ ಗೋವಾ ಕಾಂಗ್ರೆಸ್‌ ಮುಖಂಡರು ರಾಜ್ಯಪಾಲರ ಭೇಟಿಗಾಗಿ ಸಮಯ ಕೋರಿದ್ದಾರೆ. ಇಂದು ಮಧ್ಯಾಹ್ನ 3ಕ್ಕೆ ಕಾಂಗ್ರೆಸ್‌ ನಾಯಕರು ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ. ಪ್ರಸ್ತುತ ಗೋವಾ ಕಾಂಗ್ರೆಸ್‌ ಮುಖಂಡರು ರೆಸಾರ್ಟ್‌ವೊಂದರಲ್ಲಿ ಬೀಡು ಬಿಟ್ಟಿರುವ ಮಾಹಿತಿ ಇದೆ.

ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿ ಕಾಂಗ್ರೆಸ್‌

ಮತದಾನೋತ್ತರ ಸಮೀಕ್ಷೆಗಳಲ್ಲಿ ಸ್ಥಾನ ಪಡೆಯದ ಕಾಂಗ್ರೆಸ್, ಉತ್ತರಾಖಂಡ, ಗೋವಾ, ಪಂಜಾಬ್ ಹಾಗೂ ಮಣಿಪುರದಲ್ಲಿ ಅಚ್ಚರಿಯ ಫಲಿತಾಂಶದ ನಿರೀಕ್ಷೆಯಲ್ಲಿದೆ. ಒಂದೆರಡನ್ನು ಹೊರತುಪಡಿಸಿದರೆ, ಬೇರಾವ ಮತಗಟ್ಟೆ ಸಮೀಕ್ಷೆಗಳು ಕಾಂಗ್ರೆಸ್ ಯಾವ ರಾಜ್ಯದಲ್ಲೂ ಬಹಮತದ ಸನಿಹಕ್ಕೆ ಬರಲಿದೆ ಎಂದು ಹೇಳಿಲ್ಲ.

ಬಿಜೆಪಿಗೆ ಕಠಿಣ ಹಾದಿ...

ಉತ್ತರ ಪ್ರದೇಶದಲ್ಲಿ ಸ್ಪಷ್ಟ ಗೆಲುವು ದಾಖಲಿಸುವುದು ಹಾಗೂ ಗೋವಾ, ಉತ್ತರಾಖಂಡ, ಮಣಿಪುರದಲ್ಲಿ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿನಿಂತು ಅಧಿಕಾರ ಉಳಿಸಿಕೊಳ್ಳುವುದು ಬಿಜೆಪಿಗೆ ಕಠಿಣ ಹಾದಿ ಎಂದು ವಿಶ್ಲೇಷಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಒಂದು ವೇಳೆ ಕಡಿಮೆ ಅಂತರದಲ್ಲಿ ಬಿಜೆಪಿಯು ಗೆದ್ದರೆ, ಯೋಗಿ ಆದಿತ್ಯನಾಥ ಅವರು ಹೊಸ ಮುಖ್ಯಮಂತ್ರಿ ಆಯ್ಕೆಗೆ ದಾರಿ ಮಾಡಿಕೊಡಲಿದ್ದಾರೆಯೇ ಎಂಬುದನ್ನೂ ಈ ಫಲಿತಾಂಶ ನಿರ್ಧರಿಸಲಿದೆ.

ಈ ಬಾರಿ ಸಮಾಜವಾದಿ ಪಕ್ಷವು ಉತ್ತಮ ಸಾಧನೆ ಮಾಡುವ ನಿರೀಕ್ಷೆಯಿದ್ದರೂ, ಆಡಳಿತಾರೂಢ ಬಿಜೆಪಿಯನ್ನು ಅದು ಅಧಿಕಾರದಿಂದ ಕೆಳಗಿಳಿಸುವಲ್ಲಿ ಯಶಸ್ವಿಯಾಗುವುದೇ ಎಂಬುದನ್ನು ಕೊನೆಯ ಹಂತದ ಮತಎಣಿಕೆ ನಿರ್ಧರಿಸಲಿದೆ. ರಾಜ್ಯದಲ್ಲಿ ಹಿಂದೊಮ್ಮೆ ಅಧಿಕಾರ ಹಿಡಿದಿದ್ದ ಎಸ್‌ಪಿ, ಮತ್ತೆ ಗದ್ದುಗೆಗೆ ಏರಲು ಕಾಯುತ್ತಿದೆ.

ಗೆಲುವು ಯಾರಿಗೆ?

ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಎಪಿ ಗೆಲ್ಲಲಿವೆ ಎಂದು ಮತದಾನೋತ್ತರ ಸಮೀಕ್ಷೆಗಳು ಹೇಳಿದ್ದರೂ, ಬಿಜೆಪಿ, ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳಾದ ಎಸ್‌ಪಿ, ಬಿಎಸ್‌ಪಿ, ಟಿಎಂಸಿ, ಅಕಾಲಿದಳಗಳಿಗೆ ಈ ಫಲಿತಾಂಶ ನಿರ್ಣಾಯಕವಾಗಿದೆ. ಇದೇ ಜುಲೈನಲ್ಲಿ ನಡೆಯಲಿರುವ ರಾಷ್ಟ್ರಪತಿ ಚುನಾವಣೆ ಹಾಗೂ ಬಿಜೆಪಿಯೇತರ ಪಕ್ಷಗಳು ಒಂದೇ ವೇದಿಕೆಯಡಿ ಬರುವ ಪ್ರಕ್ರಿಯೆಯನ್ನು ಈ ಫಲಿತಾಂಶ ಪ್ರಭಾವಿಸಲಿದೆ ಎಂದು ವಿಶ್ಲೇಷಿಸಲಾಗಿದೆ. ಪಂಜಾಬ್ ಹೊರತುಪಡಿಸಿ ಉಳಿದ ನಾಲ್ಕು ರಾಜ್ಯಗಳಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು, ಈ ಬಾರಿ ಒಂದು ರಾಜ್ಯವನ್ನು ಕಳೆದುಕೊಂಡರೂ ಅದು ಪಕ್ಷಕ್ಕೆ ದೊಡ್ಡ ನಷ್ಟ.

ಐದು ರಾಜ್ಯಗಳ ಚುನಾವಣಾ ಫಲಿತಾಂಶ ಪರಿಣಾಮ ವಿಶ್ಲೇಷಣೆ-ಪ್ರಜಾವಾಣಿ ಫೇಸ್‌ಬುಕ್‌ನಲ್ಲಿ ಸಂಜೆ 4ರಿಂದ

ಪಂಜಾಬ್‌: ಭಗವಂತ ಮಾನ್‌ ನಿವಾಸದಲ್ಲಿ ಜಿಲೇಬಿ ತಯಾರಿ

ಎಎಪಿಯ ಪಂಜಾಬ್‌ ಸಿಎಂ ಅಭ್ಯರ್ಥಿ ಭಗವಂತ ಮಾನ್‌ ಅವರ ನಿವಾಸದಲ್ಲಿ ಹೂವಿನ ಅಲಂಕರ ಮಾಡಲಾಗಿದೆ ಹಾಗೂ ಸಿಹಿ ತಿನಿಸು ಜಿಲೇಬಿ ತಯಾರಿಸಲಾಗುತ್ತಿದೆ.

ಉತ್ತರ ಪ್ರದೇಶದಲ್ಲಿ 750ಕ್ಕೂ ಹೆಚ್ಚು ಮತ ಎಣಿಕೆ ಕೇಂದ್ರ

ಫೆ. 10ರಿಂದ ಮಾರ್ಚ್ 7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. 403 ಕ್ಷೇತ್ರಗಳನ್ನು ಹೊಂದಿರುವ ಉತ್ತರ ಪ್ರದೇಶದಲ್ಲಿ 750ಕ್ಕೂ ಹೆಚ್ಚು ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದೆ. ಪಂಜಾಬ್‌ನಲ್ಲಿ 200 ಮತ ಎಣಿಕೆ ಕೇಂದ್ರಗಳು ಕಾರ್ಯನಿರ್ವಹಿಸಲಿವೆ.

ಎಲ್ಲ ಮತ ಎಣಿಕೆ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲು ಚುನಾವಣಾ ಆಯೋಗ ಸೂಚಿಸಿದೆ. ಲಸಿಕೆ ಹಾಕಿಸಿಕೊಂಡಿದ್ದರೂ, ಜ್ವರ, ನೆಗಡಿಯ ಲಕ್ಷಣ ಕಂಡುಬಂದವರು ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸುವಂತಿಲ್ಲ.

ಉತ್ತರ ಪ್ರದೇಶ: ಕಸ ಸಾಗಿಸುವ ವಾಹನದಲ್ಲಿ ಮತಯಂತ್ರಗಳು

ಏಳನೇ ಹಂತದಲ್ಲಿ ಮತದಾನ ನಡೆದಿದ್ದ ವಾರಾಣಸಿಯ ಪಹಾಡಿಯಾದ ಸ್ಟ್ರಾಂಗ್‌ರೂಂ ಇದ್ದ ಸ್ಥಳದಿಂದ ಮಂಗಳವಾರ ರಾತ್ರಿ ಮೂರು ಟ್ರಕ್‌ಗಳಲ್ಲಿ ಮತಯಂತ್ರಗಳನ್ನು ಸಾಗಿಸಲಾಗಿತ್ತು. ಅವುಗಳಲ್ಲಿ ಒಂದು ಟ್ರಕ್‌ ಅನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ತಡೆದು ನಿಲ್ಲಿಸಿದ್ದರು. ಆ ಟ್ರಕ್‌ನಲ್ಲಿದ್ದ ಮತಯಂತ್ರಗಳನ್ನು ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲು ಒಯ್ಯಲಾಗುತ್ತಿತ್ತು ಎಂದು ವಾರಾಣಸಿ ಜಿಲ್ಲಾಧಿಕಾರಿ ಕೌಶಲ್ ರಾಜ್‌ ಶರ್ಮಾ ಮಂಗಳವಾರ ಸ್ಪಷ್ಟನೆ ನೀಡಿದ್ದರು. ಆದರೆ, ವಾರಾಣಸಿ ವಿಭಾಗೀಯ ಆಯುಕ್ತ ದೀಪಕ್ ಅಗರ್ವಾಲ್‌ ಅವರು ನೀಡಿರುವ ಹೇಳಿಕೆಯು ಇದಕ್ಕೆ ವ್ಯತಿರಿಕ್ತವಾಗಿದೆ. ಅವರು, ‘ಮತಗಟ್ಟೆಗಳಲ್ಲಿ ಇದ್ದ ಹೆಚ್ಚುವರಿ ಮತ್ತು ಬಳಕೆಯಾಗದೇ ಇದ್ದ ಮತಯಂತ್ರಗಳನ್ನು ಮಾತ್ರ ಸಾಗಿಸಲಾಗಿದೆ. ಮತದಾನದಲ್ಲಿ ಬಳಕೆಯಾಗಿದ್ದ ಮತಯಂತ್ರಗಳು ಸ್ಟ್ರಾಂಗ್‌ರೂಂನಲ್ಲಿ ಭದ್ರವಾಗಿವೆ’ ಎಂದು ಹೇಳಿದ್ದಾರೆ.

ಉತ್ತರಪ್ರದೇಶ: ಇವಿಎಂ ಸಾಗಣೆಯಲ್ಲಿ ಲೋಪ-ಅಧಿಕಾರಿಗಳ ವಿರುದ್ಧ ಕ್ರಮ

ಉತ್ತರ ಪ್ರದೇಶ ಲೋಕಸಭಾ ಚುನಾವಣೆಯ ಏಳನೇ ಹಂತದ ಮತದಾನದಲ್ಲಿ ಬಳಸಲಾಗಿದ್ದ ಮತಯಂತ್ರಗಳ ಸಾಗಣೆ ಮತ್ತು ನಿರ್ವಹಣೆಯಲ್ಲಿ ಲೋಪವಾಗಿರುವ ಕೆಲವು ಘಟನೆಗಳು ವರದಿಯಾಗಿವೆ. ನಿಯಮಗಳನ್ನು ಪಾಲಿಸುವಲ್ಲಿ ಲೋಪವಾಗಿದೆ ಎಂಬುದನ್ನು ವಾರಾಣಸಿ, ಸೋನಭದ್ರಾ ಮತ್ತು ಬರೇಲಿ ಜಿಲ್ಲಾ ಚುನಾವಣಾ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಮೂವರು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ.

ಈ ಸಂಬಂಧ ಸಮಾಜವಾದಿ ಪಕ್ಷವು ರಾಜ್ಯ ಹೆಚ್ಚುವರಿ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ನೀಡಿತ್ತು.

ರಾಜಕೀಯ ಲೆಕ್ಕಾಚಾರ ನಿರ್ಧರಿಸಲಿದೆ ಫಲಿತಾಂಶ

ಇಂದು ಮತ ಎಣಿಕೆ– ಗರಿಗೆದರಿದ ಕುತೂಹಲ

ಮತಎಣಿಕೆ: ಬೆಳಿಗ್ಗೆ 8 ಗಂಟೆಗೆ ಆರಂಭ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತಎಣಿಕೆ ಇಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಮೊದಲಿಗೆ ಅಂಚೆ ಪತ್ರಗಳ ಎಣಿಕೆ ನಡೆಯಲಿದೆ. ‌

ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಹಾಗೂ ಮಣಿಪುರದಲ್ಲಿ ಒಟ್ಟು 1,200 ಮತ ಎಣಿಕೆ ಕೇಂದ್ರಗಳನ್ನು ತೆರೆಯಲಾಗಿದ್ದು, ಸುಮಾರು 50 ಸಾವಿರ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಈ ಎಲ್ಲ ರಾಜ್ಯಗಳಲ್ಲಿ ಒಟ್ಟು 650ಕ್ಕೂ ಹೆಚ್ಚು ವೀಕ್ಷಕರು ಕಾರ್ಯನಿರ್ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.