ADVERTISEMENT

ಅಖಿಲೇಶ್ ನೇತೃತ್ವದ ಎಸ್‌ಪಿ ಭಯೋತ್ಪಾದಕರು, ಮಾಫಿಯಾಗಳಿಗೆ ರಕ್ಷಣೆ ನೀಡಿದೆ: ನಡ್ಡಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಫೆಬ್ರುವರಿ 2022, 2:17 IST
Last Updated 6 ಫೆಬ್ರುವರಿ 2022, 2:17 IST
ಜೆ.ಪಿ ನಡ್ಡಾ
ಜೆ.ಪಿ ನಡ್ಡಾ    

ಲಖನೌ: ‘ಅಖಿಲೇಶ್‌ ಯಾದವ್‌ ನೇತೃತ್ವದ ಸಮಾಜವಾದಿ ಪಕ್ಷ (ಎಸ್‌ಪಿ) ತನ್ನ ಅಧಿಕಾರಾವಧಿಯಲ್ಲಿ ಭಯೋತ್ಪಾದಕರು ಮತ್ತು ಮಾಫಿಯಾಗಳಿಗೆ ರಕ್ಷಣೆ ನೀಡಿದೆ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಆರೋಪಿಸಿದ್ದಾರೆ.

ನೋಯ್ಡಾದ ಸೆಕ್ಟರ್ 12ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಥಿಸಿರುವ ಬಿಜೆಪಿ ಅಭ್ಯರ್ಥಿ ಪಂಕಜ್‌ ಸಿಂಗ್‌ ಅವರ ಪರ ನಡ್ಡಾ ಶನಿವಾರ ರ‍್ಯಾಲಿ ನಡೆಸಿದ್ದಾರೆ.

ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ನಡ್ಡಾ, ‘ಸಮಾಜವಾದಿ ಪಕ್ಷದವರು ಅಧಿಕಾರದಲ್ಲಿದಾಗ ಭಯೋತ್ಪಾದಕರು ಮತ್ತು ಮಾಫಿಯಾಗಳಿಗೆ ರಕ್ಷಣೆ ನೀಡಿದ್ದರು. 2007ರಲ್ಲಿ ಗೋರಖ್‌ಪುರದ ಗೋಲ್ ಘರ್‌ನಲ್ಲಿ ಮೂರು ಬಾಂಬ್ ಸ್ಫೋಟಗಳು ನಡೆದಿದ್ದವು. ಆ ಪ್ರಕರಣಗಳಿಗೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಇಬ್ಬರು ಶಂಕಿತರನ್ನು ಬಂಧಿಸಿತ್ತು. ಆಗಿನ ಸಿ.ಎಂ ಅಖಿಲೇಶ್ ಯಾದವ್ ಅವರು ಸ್ಫೋಟದ ಶಂಕಿತರ ವಿರುದ್ಧದ ಪ್ರಕರಣವನ್ನು ಹಿಂಪಡೆಯಲು ಪ್ರಯತ್ನಿಸಿದ್ದರು. ಕೋಮು ಸೌಹಾರ್ದತೆಯನ್ನು ಕಾಪಾಡುವ ಸಲುವಾಗಿ ಪ್ರಕರಣವನ್ನು ಹಿಂಪಡೆಯುತ್ತಿರುವುದಾಗಿಯೂ ಯಾದವ್ ಹೇಳಿಕೊಂಡರೂ ಅಲಹಾಬಾದ್ ಹೈಕೋರ್ಟ್ ಅದನ್ನು ನಿರಾಕರಿಸಿತ್ತು’ ಎಂದು ಹೇಳಿದ್ದಾರೆ.

ADVERTISEMENT

ಇಂದು ಆ ಇಬ್ಬರು ಶಂಕಿತ ಅಪರಾಧಿಗಳು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದು, ಜೈಲು ಸೇರಿದ್ದಾರೆ ಎಂದು ನಡ್ಡಾ ತಿಳಿಸಿದ್ದಾರೆ.

ಅಖಿಲೇಶ್ ಯಾದವ್‌ ಅವರಿಗೆ ಜೈಲಿನಲ್ಲಿರುವ ಮಾಫಿಯಾಗಳ ಮೇಲೆ ಏಕೆ ಅಷ್ಟೊಂದು ಪ್ರೀತಿ ಎಂದು ಪ್ರಶ್ನಿಸಿರುವ ನಡ್ಡಾ, ಜೈಲಿನಲ್ಲಿರುವ ಮಾಫಿಯಾಗಳಿಗೆ ಅಖಿಲೇಶ್‌ ಬೆಂಬಲವಿದೆ ಎಂದು ಟೀಕಿಸಿದ್ದಾರೆ.

ಎಸ್‌ಪಿ ಸರ್ಕಾರದ ಪರಿಹಾರ ಯೋಜನೆಗಳು ಒಂದು ನಿರ್ದಿಷ್ಟ ಧಾರ್ಮಿಕ ಗುಂಪಿಗೆ ಮಾತ್ರ ಸೀಮಿತವಾಗಿತ್ತು. ಈ ಕುರಿತು ಸುಪ್ರೀಂ ಕೋರ್ಟ್‌ ತೀರ್ಪನ್ನು ನಾವು ನೆನಪು ಮಾಡಿಕೊಳ್ಳಬಹುದು ಎಂದರು.

ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್‌ 7ರವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್‌ 10ರಂದು ಫಲಿತಾಂಶ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.