ADVERTISEMENT

ಲೋಕಸಭೆ ಚುನಾವಣೆಯ ನಂತರವೇ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆ: ಕಾರಣವೇನು?

ಪಿಟಿಐ
Published 16 ಮಾರ್ಚ್ 2024, 13:16 IST
Last Updated 16 ಮಾರ್ಚ್ 2024, 13:16 IST
<div class="paragraphs"><p>ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್</p></div>

ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್

   

ಪಿಟಿಐ

ನವದೆಹಲಿ: ಲೋಕಸಭೆ ಚುನಾವಣೆಯ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಭದ್ರತಾ ದೃಷ್ಟಿಯಿಂದ ಏಕಕಾಲದಲ್ಲಿ ಚುನಾವಣೆ ನಡೆಸುತ್ತಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ತಿಳಿಸಿದರು.

ADVERTISEMENT

ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಲೋಕಸಭೆ ಚುನಾವಣೆ ಮತ್ತು ನಾಲ್ಕು ರಾಜ್ಯಗಳ ವಿಧಾನಸಭಾ ಚುನಾವಣೆಗೆ ವೇಳಾಪಟ್ಟಿ ಪ್ರಕಟಿಸಿದರು.

ಲೋಕಸಭೆ ಚುನಾವಣೆಯ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆಯನ್ನು ಏಕೆ ನಡೆಸುತ್ತಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಹೆಚ್ಚಿನ ಭದ್ರತೆಯನ್ನು ಒದಗಿಸಬೇಕಿದೆ. ದೇಶದಾದ್ಯಂತ ಚುನಾವಣೆಗಳು ನಡೆಯುತ್ತಿರುವ ಸಮಯದಲ್ಲಿ ಇದು ಕಾರ್ಯಸಾಧುವಲ್ಲ’ ಎಂದರು.

‘ಜಮ್ಮು ಮತ್ತು ಕಾಶ್ಮೀರ ಪುನಾರಚನೆ ಕಾಯ್ದೆಯು 2019ರಲ್ಲಿ ಮಂಡನೆಯಾಯಿತು. ಇದರಲ್ಲಿ 107 ಕ್ಷೇತ್ರಗಳಿಗೆ ಅವಕಾಶ ಕಲ್ಪಿಸಲಾಗಿತ್ತು. ಇದರಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ 24 ಕ್ಷೇತ್ರಗಳು ಒಳಗೊಂಡಿವೆ. ಕ್ಷೇತ್ರ ಮರುವಿಂಗಡನೆ ಆಯೋಗದ ಪ್ರವೇಶದಿಂದ ಕೆಲವೊಂದು ಕ್ಷೇತ್ರಗಳು ಬದಲಾದವು. ಆದರೆ ರಾಜ್ಯದ ಪುನಾರಚನೆ ಮತ್ತು ಕ್ಷೇತ್ರ ಮರುವಿಂಗಡನೆ ನಡುವೆ ಹೊಂದಾಣಿಕೆಯಾಗಲಿಲ್ಲ. ಇದು 2023ರ ಡಿಸೆಂಬರ್‌ನಲ್ಲಿ ನಡೆಯಿತು. ಹೀಗಾಗಿ ನಮ್ಮ ಕೆಲಸ ಆರಂಭವಾಗಿದ್ದೇ 2023ರ ಡಿಸೆಂಬರ್‌ನಿಂದ’ ಎಂದು ಅವರು ತಿಳಿಸಿದರು.

‘ಲೋಕಸಭಾ ಚುನಾವಣೆಯ ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆ ನಡೆಸುವಂತೆ ಅಲ್ಲಿನ ಎಲ್ಲ ರಾಜಕೀಯ ಪಕ್ಷಗಳು ಒತ್ತಾಯಿಸಿವೆ. ಆದರೆ ಹಾಗೆ ಚುನಾವಣೆ ನಡೆಸಲು ಸಾಧ್ಯವಿಲ್ಲ. ಪ್ರತಿ ವಿಧಾನಸಭಾ ಕ್ಷೇತ್ರವು 10ರಿಂದ 12 ಅಭ್ಯರ್ಥಿಗಳನ್ನು ಹೊಂದಿರುತ್ತದೆ. ಅಂದರೆ ಚುನಾವಣಾ ಕಣದಲ್ಲಿ ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಇರುತ್ತಾರೆ. ಪ್ರತಿ ಅಭ್ಯರ್ಥಿಗೂ ಭದ್ರತೆ ಕೊಡಬೇಕಾಗುವುದು ನಮ್ಮ ಕರ್ತವ್ಯ. ಲೋಕಸಭಾ ಚುನಾವಣೆ ನಂತರವೇ ಇದು ಸಾಧ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.