ಹೈದರಾಬಾದ್: ಬಂದರು ನಗರಿ ವಿಶಾಖಪಟ್ಟಣದಿಂದ ಕಾಕಿನಾಡದವರೆಗಿನ ಬಂಗಾಳ ಕೊಲ್ಲಿಯಲ್ಲಿನ 150 ಕಿ.ಮೀ. ದೂರವನ್ನು 52ರ ಹರೆಯದ ಶ್ಯಾಮಲಾ ಐದು ದಿನದಲ್ಲಿ ಈಜಿದ್ದಾರೆ.
ಹೈದರಾಬಾದ್‌ನಲ್ಲಿ ಅನಿಮೇಷನ್ ಸ್ಟುಡಿಯೊ ನಡೆಸುತ್ತಿರುವ ಈಕೆ, ದಿನಕ್ಕೆ ಸರಾಸರಿ 30 ಕಿ.ಮೀ. ಈಜಿದ್ದಾರೆ. ಸ್ಕೂಬಾ ಡೈವರ್‌ಗಳು, ಫಿಜಿಯೋ ಥೆರಪಿಸ್ಟ್, ವೈದ್ಯರು, ಸಹಾಯಕರು ಹಾಗೂ ದೊಡ್ಡ–ಸಣ್ಣ ದೋಣಿಗಳ ತಂಡವು ಇವರ ಹಾದಿಯಲ್ಲಿ ಸಾಥ್ ನೀಡಿದೆ.
ವಿಶಾಖಪಟ್ಟಣದ ಆರ್.ಕೆ. ಬೀಚ್‌ನಿಂದ ಡಿ. 28ರ ಮಧ್ಯಾಹ್ನ ಆರಂಭವಾದ ಇವರ ಈಜಿನ ಸಾಹಸ, ಶುಕ್ರವಾರ ಕಾಕಿನಾಡದ ಎನ್‌ಟಿಆರ್ ಬೀಚ್‌ನಲ್ಲಿ ಅಂತಿಮಗೊಂಡಿತು. ಈ ಅವಧಿಯಲ್ಲಿ ಊಟ–ವಿಶ್ರಾಂತಿ ಹಾಗೂ ರಾತ್ರಿಯ ನಿದ್ದೆ ಮಾಡಲು ದೋಣಿಗಳನ್ನೇ ಬಳಸಿದ್ದಾರೆ.
‘ಈಜಿನ ಸಾಹಸಕ್ಕೂ ಮುನ್ನ ಕಠಿಣ ತರಬೇತಿ ಪಡೆದಿದ್ದೆ. ಯೋಗ–ಧ್ಯಾನವು ಸಹ ಈ ಸಾಧನೆಗೆ ಸಹಾಯವಾಗಿದೆ. 52ನೇ ವಯಸ್ಸಿನಲ್ಲಿ ಈ ಸಾಧನೆ ಮಾಡಿದ್ದಕ್ಕೆ ನನಗೆ ಹೆಮ್ಮೆಯಿದೆ. ಎರಡು ವರ್ಷದ ಪರಿಶ್ರಮವು ನನ್ನ ಕನಸನ್ನು ಸಾಕಾರಗೊಳಿಸಿದೆ’ ಎನ್ನುತ್ತಾರೆ ಶ್ಯಾಮಲಾ.
‘ಪಯಣದ ಉದ್ದಕ್ಕೂ ಆಮೆಗಳನ್ನು ನೋಡಿದೆ. ಅವು ನನ್ನನ್ನು ಸ್ಪರ್ಶಿಸಿದಾಗ ವಿಶೇಷ ಅನುಭವವಾಯಿತು. ತಿಮಿಂಗಿಲವನ್ನೂ ಕಂಡೆ. ಜೆಲ್ಲಿ ಮೀನುಗಳು ಕೊಂಚ ತೊಂದರೆ ನೀಡಿದವು. ನನ್ನ ಸಹಾಯಕ್ಕಿದ್ದವರು ಅನಾರೋಗ್ಯಕ್ಕೀಡಾದ ಒಂದು ದಿನ ಮಾತ್ರ ಕೆಲವು ಸಮಸ್ಯೆ ಎದುರಿಸಿದೆ. ಸಮುದ್ರವೂ ಮಲಿನಗೊಂಡಿದೆ. ಕೆಲವೊಂದು ಸ್ಥಳಗಳಲ್ಲಿ ಈಜಲು ಅಸಹನೀಯವಾಗಿದೆ. ಆಮೆಗಳ ಕಳೇಬರ ಕಂಡಾಗ ನೋವಾಯಿತು’ ಎಂದು ತಮ್ಮ ಈಜಿನ ಅನುಭವ ಹಂಚಿಕೊಂಡರು.
ತಮ್ಮ 40ನೇ ವಯಸ್ಸಿನಲ್ಲಿ ಈಜಲು ಆರಂಭಿಸಿದ ಶ್ಯಾಮಲಾ ಅವರು ಪಾಕ್ ಜಲಸಂಧಿ, ಕ್ಯಾಟಲಿನಾ ಕಾಲುವೆ, ಲಕ್ಷದ್ವೀಪ ಸಮೂಹದಲ್ಲೂ ಈಜಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.