ADVERTISEMENT

ಅಪಹರಣ ಪ್ರಕರಣ: ಅತೀಕ್ ಅಹ್ಮದ್‌ ಸೇರಿದಂತೆ ಮೂವರಿಗೆ ಜೀವಾವಧಿ ಶಿಕ್ಷೆ

ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ತಪ್ಪಿತಸ್ಥರೆಂದು ಸಾಬೀತು

ಪಿಟಿಐ
Published 28 ಮಾರ್ಚ್ 2023, 11:50 IST
Last Updated 28 ಮಾರ್ಚ್ 2023, 11:50 IST
   

ಪ್ರಯಾಗ್‌ರಾಜ್ (ಉತ್ತರಪ್ರದೇಶ): 2006ರಲ್ಲಿ ನಡೆದ ಉಮೇಶ್ ಪಾಲ್ ಅಪಹರಣ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್, ರಾಜಕಾರಣಿ ಅತೀಕ್ ಅಹ್ಮದ್ ಸೇರಿದಂತೆ ಇತರ ಇಬ್ಬರಿಗೆ ಇಲ್ಲಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಂಗಳವಾರ ಜೀವಾವಧಿ ಶಿಕ್ಷೆಯನ್ನು ಪ್ರಕಟಿಸಿದೆ.

ಪ್ರಕರಣದಲ್ಲಿ ಅಹ್ಮದ್ ಅವರ ಸಹೋದರ ಖಾಲಿದ್ ಅಜೀಂ ಅಲಿಯಾಸ್ ಅಶ್ರಫ್ ಮತ್ತು ಇತರ ಆರು ಮಂದಿಯನ್ನು ನ್ಯಾಯಾಲಯವು ಖುಲಾಸೆಗೊಳಿಸಿದೆ.

‘ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ದಿನೇಶ್ ಚಂದ್ರ ಶುಕ್ಲಾ ಅವರು, ಉಮೇಶ್ ಪಾಲ್ ಪ್ರಕರಣದಲ್ಲಿ ಅತೀಕ್ ಅಹ್ಮದ್, ವಕೀಲ ಸೌಲತ್ ಹನೀಫ್ ಹಾಗೂ ದಿನೇಶ್ ಪಾಸಿ ಅವರು ತಪ್ಪಿತಸ್ಥರಾಗಿದ್ದಾರೆ. ಭಾರತೀಯ ದಂಡ ಸಂಹಿತೆ ಸೆಕ್ಷನ್ 364–ಎ (ಅಪಹರಣ ಅಥವಾ ಕೊಲೆಯ ಉದ್ದೇಶಕ್ಕಾಗಿ ಅಪಹರಿಸುವುದು) ಅಡಿಯಲ್ಲಿ ಮೂವರನ್ನೂ ತಪ್ಪಿತಸ್ಥರೆಂದು ಘೋಷಿಸಲಾಗಿದೆ’ ಎಂದು ಸರ್ಕಾರಿ ವಕೀಲ ಗುಲಾಬ್ ಚಂದ್ರ ಅಗ್ರಹರಿ ತಿಳಿಸಿದ್ದಾರೆ.

ADVERTISEMENT

ಈ ಸೆಕ್ಷನ್ ಅಡಿಯಲ್ಲಿ ಗರಿಷ್ಠ ಶಿಕ್ಷೆ ಮರಣದಂಡನೆಯಾಗಿದೆ.

‘ನಾನು ನ್ಯಾಯಾಲಯದ ಮೊರೆ ಹೋಗುವುದಿಲ್ಲ. ಆದರೆ, ನನ್ನ ಪತಿಯನ್ನು ಕೊಂದ ಅತೀಕ್ ಅಹ್ಮದ್‌ಗೆ ಮರಣದಂಡನೆ ವಿಧಿಸಬೇಕೆಂದು ಪ್ರಾರ್ಥಿಸುತ್ತೇನೆ’ ಎಂದು ಉಮೇಶ್ ಪಾಲ್ ಅವರ ಪತ್ನಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

2005ರ ಜನವರಿ 25ರಂದು ಬಿಎಸ್‌ಪಿ ಶಾಸಕ ರಾಜು ಪಾಲ್ ಅವರನ್ನು ಹತ್ಯೆ ಮಾಡಲಾಗಿತ್ತು. ಈ ಹತ್ಯೆಗೆ ತಾವು ಸಾಕ್ಷಿಯಾಗಿರುವುದಾಗಿ ಜಿಲ್ಲಾ ಪಂಚಾಯ್ತಿ ಸದಸ್ಯ ಉಮೇಶ್ ಪಾಲ್ ಅವರು ಪೊಲೀಸರಿಗೆ ತಿಳಿಸಿದ್ದರು. ಈ ಪ್ರಕರಣವನ್ನು ಹಿಂತೆಗೆದುಕೊಳ್ಳಲು ಉಮೇಶ್ ಪಾಲ್ ಮೇಲೆ ಅತೀಕ್ ಅಹ್ಮದ್ ಒತ್ತಡ ಹೇರಿದ್ದರು. ಅದಕ್ಕೆ ನಿರಾಕರಿಸಿದಾಗ ಬಂದೂಕು ತೋರಿಸಿ ಉಮೇಶ್ ಅವರನ್ನು 2006ರ ಫೆ. 28ರಂದು ಅಪಹರಿಸಲಾಗಿತ್ತು.

ಈ ಸಂಬಂಧ ಅತೀಕ್, ಆತನ ಸಹೋದರ ಮತ್ತು ಇತರರ ವಿರುದ್ಧ 2007ರ ಜುಲೈ 5ರಂದು ಎಫ್‌ಐಆರ್ ದಾಖಲಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು 11 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕೆಲ ದಿನಗಳ ಬಳಿಕ ಇವರಲ್ಲಿ ಒಬ್ಬ ಆರೋಪಿ ಸಾವಿಗೀಡಾಗಿದ್ದ.

ಅಹ್ಮದ್ ಮತ್ತು ಅಶ್ರಫ್ ಇಬ್ಬರೂ ಜೈಲಿನಲ್ಲಿದ್ದಾಗ ಉಮೇಶ್ ಪಾಲ್ ಅವರನ್ನು ಕೊಲ್ಲುವ ಸಂಚಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. 2023ರ ಫೆಬ್ರವರಿ 24ರಂದು ಉಮೇಶ್ ಪಾಲ್ ಅವರನ್ನು ಪ್ರಯಾಗರಾಜ್‌ನ ಅವರ ನಿವಾಸದ ಹೊರಗೆ ಗುಂಡೇಟಿನಿಂದ ಹತ್ಯೆ ಮಾಡಲಾಗಿತ್ತು. ಉಮೇಶ್ ಪಾಲ್ ಕೊಲೆ ಪ್ರಕರಣ ಸೇರಿದಂತೆ 100ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಅತೀಕ್ ಹೆಸರಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಸಮಾಜವಾದಿ ಪಕ್ಷವು ಅತೀಕ್ ಅಹ್ಮದ್ ಅವರಂಥ ಮಾಫಿಯಾ ವ್ಯಕ್ತಿಗಳನ್ನು ಸ್ವಾಗತಿಸುತ್ತದೆ ’ ಎಂದು ಕಳೆದ ತಿಂಗಳು ಆರೋಪಿಸಿದ್ದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ‘ಈ ಮಾಫಿಯಾಗಳನ್ನು ಮಣ್ಣಿನಲ್ಲಿ ಹೂತುಬಿಡುತ್ತೇವೆ’ (ಮಾಫಿಯಾ ಕೋ ಮಿಟ್ಟಿ ಮೇ ಮಿಲಾ ದೇಂಗೆ) ಎಂದೂ ವಿಧಾನಸಭೆಯಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.