ಪ್ರಿಯಾಂಕಾ ಗಾಂಧಿ ವಾದ್ರಾ
ಪಿಟಿಐ ಚಿತ್ರ
ನವದೆಹಲಿ: ಪಶ್ಚಿಮ ಬಂಗಾಳ, ಉತ್ತರಾಖಂಡ, ಬಿಹಾರ ಹಾಗೂ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ ದೇಶವನ್ನು ಅಲುಗಾಡಿಸಿದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
ಅಲ್ಲದೆ ಪ್ರಕರಣಗಳಲ್ಲಿ ಸಡಿಲತೆ, ಆರೋಪಿಗಳಿಗೆ ರಾಜಕೀಯ ರಕ್ಷಣೆ, ಬೇಲ್ ಹಾಗೂ ಪೆರೋಲ್ ನೀಡುವುದು ಮುಂತಾದವುಗಳಿಂದ ಮಹಿಳೆಯನ್ನು ಕುಗ್ಗಿಸುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಪ್ರತಿದಿನ 86 ಅತ್ಯಾಚಾರಗಳು ನಡೆಯುತ್ತವೆ ಎಂದು ಸರ್ಕಾರದ ದತ್ತಾಂಶಗಳೇ ತೋರಿಸುತ್ತಿರುವಾಗ, ಮಹಿಳೆಯರು ಯಾರಿಂದ ರಕ್ಷಣೆ ಬಯಸಬೇಕು?’ ಎಂದು ಪ್ರಶ್ನಿಸಿದ್ದಾರೆ.
‘ಕೋಲ್ಕತ್ತ, ಬಿಹಾರ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯವು ಇಡೀ ದೇಶವನ್ನು ಅಲುಗಾಡಿಸಿದೆ. ಈ ಸಮಯದಲ್ಲಿ ಇಡೀ ದೇಶದ ಮಹಿಳೆಯರು ದುಃಖ ಹಾಗೂ ಆಕ್ರೋಶದಲ್ಲಿ ಇದ್ದಾರೆ’ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
‘ಘಟನೆ ಎಲ್ಲಿಯಾದರೂ ನಡೆಯಲಿ, ಸರ್ಕಾರ ಏನು ಮಾಡುತ್ತಿದೆ ಎನ್ನುವುದನ್ನು ಜನ ನೋಡುತ್ತಾರೆ. ಸರ್ಕಾರ ಮಾತುಗಳು ಹಾಗೂ ನಿಲುವುಗಳು ಎಷ್ಟು ಗಂಭೀರವಾಗಿವೆ ಎಂದು ಗಮನಿಸುತ್ತಾರೆ. ಎಲ್ಲೆಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಟ್ಟಿ ಸಂದೇಶ ರವಾನಿಸುವ ಅವಶ್ಯಕತೆ ಇತ್ತೋ, ಅಲ್ಲೆಲ್ಲಾ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಲಾಯಿತು’ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.
‘ಮಹಿಳೆಯರ ಮೇಲಿನ ಘೋರ ದೌರ್ಜನ್ಯ ಪ್ರಕರಣಗಳಲ್ಲಿ ಪದೇ ಪದೇ ಮೃದು ನಿಲುವು, ಆರೋಪಿಗಳಿಗೆ ರಾಜಕೀಯ ರಕ್ಷಣೆ ಮತ್ತು ಶಿಕ್ಷೆಗೊಳಗಾದ ಕೈದಿಗಳಿಗೆ ಜಾಮೀನು / ಪೆರೋಲ್ ನೀಡುವಂತಹ ಕ್ರಮಗಳು ಮಹಿಳೆಯರನ್ನು ನಿರಾಸೆಗೊಳಿಸುತ್ತವೆ. ಇದು ದೇಶದ ಮಹಿಳೆಯರಿಗೆ ಯಾವ ಸಂದೇಶವನ್ನು ನೀಡುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.