ADVERTISEMENT

ಹಲ್ಲೆಗಳಿಂದಲೇ ನಾಯಕಿಯಾಗಿ ಬೆಳೆದ ದೀದಿ...

ಪಿಟಿಐ
Published 12 ಮಾರ್ಚ್ 2021, 21:07 IST
Last Updated 12 ಮಾರ್ಚ್ 2021, 21:07 IST
ಮಮತಾ ಬ್ಯಾನರ್ಜಿ (ಎಎಫ್‌ಪಿ ಚಿತ್ರ)
ಮಮತಾ ಬ್ಯಾನರ್ಜಿ (ಎಎಫ್‌ಪಿ ಚಿತ್ರ)    

ಕೋಲ್ಕತ್ತ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (ದೀದಿ) ಅವರು, ‘ಧೈರ್ಯಶಾಲಿ ಮಹಿಳೆ’ ಎಂದೇ ಗುರುತಿಸಿಕೊಂಡಿದ್ದಾರೆ. ರಾಜಕೀಯದಲ್ಲಿ ಈ ಮಟ್ಟಕ್ಕೆ ಬೆಳೆದು ಬರಬೇಕಾದರೆ ಅವರು ಹಲವು ಬಾರಿ ದೈಹಿಕ ಹಲ್ಲೆಗಳನ್ನು ಸಹ ಅನುಭವಿಸಿದ್ದಾರೆ.

ಸಿಪಿಎಂ ಯುವ ಘಟಕದ ಮುಖಂಡನೊಬ್ಬ 1990ರಲ್ಲಿ ಮಮತಾ ಅವರ ತಲೆಗೆ ಹೊಡೆದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಅವರು, ಆಸ್ಪತ್ರೆಗೆ ದಾಖಲಾಗಿಒಂದು ತಿಂಗಳು ಚಿಕಿತ್ಸೆ ಪಡೆದಿದ್ದರು. ಈ ಘಟನೆಯ ಬಳಿಕ ‘ನಿರ್ಭೀತ ಹೋರಾಟಗಾರ್ತಿ’ ಎಂಬ ಹೆಸರು ಅವರಿಗೆ ಅಂಟಿಕೊಂಡಿತು.

1993ರಲ್ಲಿ ಅವರು ಯುವ‌ ಕಾಂಗ್ರೆಸ್‌ನ ಕಾರ್ಯಕರ್ತೆಯಾಗಿದ್ದಾಗ, ಭಾವಚಿತ್ರಸಹಿತ ಮತದಾರರ ಗುರುತಿನ ಚೀಟಿಗಳನ್ನು ನೀಡಬೇಕು ಎಂದು ಒತ್ತಾಯಿಸಿ ನಡೆಸಿದ ರ್‍ಯಾಲಿಯ ಸಂದರ್ಭದಲ್ಲಿ ಪೊಲೀಸರು ಅವರನ್ನು ಥಳಿಸಿದ್ದರು. ಆಗಲೂ ಕೆಲವು ವಾರಗಳ ಕಾಲ ಆಸ್ಪತ್ರೆಗೆ ದಾಖಲಾಗಬೇಕಾಗಿ ಬಂದಿತ್ತು.

ADVERTISEMENT

ಈ ಬಾರಿ ಮಮತಾ ಅವರು ತಮ್ಮ ರಾಜಕೀಯ ಜೀವನದ ಅತ್ಯಂತ ಕಠಿಣ ಎನ್ನಬಹುದಾದ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕಾಲಿಗೆ ಗಾಯವಾಗಿ ಪುನಃ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

‘ಚುನಾವಣಾ ಪ್ರಚಾರದಿಂದ ನನ್ನನ್ನು ದೂರವಿರಿಸಲು ಬಿಜೆಪಿ ನನ್ನ ಮೇಲೆ ಹಲ್ಲೆ ನಡೆಸಿದೆ’ ಎಂದು ಮಮತಾ ಆರೋಪಿಸಿದ್ದಾರೆ. ಇದನ್ನು ನಿರಾಕರಿಸಿರುವ ಬಿಜೆಪಿ, ‘ಅನುಕಂಪ ಸೃಷ್ಟಿಸಲು ಮಮತಾ ಈ ನಾಟಕವಾಡಿದ್ದಾರೆ. ಬಂಗಾಳದ ಜನರು ಈ ಹಿಂದೆಯೂ ಇಂಥ ನಾಟಕವನ್ನು ನೋಡಿದ್ದಾರೆ’ ಎಂದಿದೆ. ಹಿಂದೆ ಸಿಪಿಎಂ ಸಹ ಮಮತಾ ವಿರುದ್ಧ ಇಂಥ ಆರೋಪ ಮಾಡಿತ್ತು.

‘ನಂದಿಗ್ರಾಮದಲ್ಲಿ ಚುನಾವಣೆಯ ಬಿಸಿ ಮಮತಾ ಅವರಿಗೆ ಜೋರಾಗಿ ತಟ್ಟಿದೆ. ಅದಕ್ಕಾಗಿ ಜನರ ಅನುಕಂಪ ಪಡೆಯಲು ನಾಟಕ ಮಾಡುತ್ತಿದ್ದಾರೆ’ ಎಂದು ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕ ಅಧಿರ್‌ರಂಜನ್‌ ಚೌಧರಿ ಅವರೂ ಆರೋಪಿಸಿದ್ದಾರೆ.

ಹಲ್ಲೆಯ ಘಟನೆಗಳು...

*1990ರ ಆಗಸ್ಟ್‌ 16ರಂದು ಡಿವೈಎಫ್‌ಐ ಮುಖಂಡ ಲಾಲು ಆಲಂ ಎಂಬಾತ, ಮಮತಾ ಅವರ ತಲೆಗೆ ಲಾಠಿಯಿಂದ ಬಲವಾಗಿ ಹೊಡೆದು ಅವರ ತಲೆಬುರುಡೆಗೆ ಗಾಯ ಮಾಡಿದ್ದ. ಈ ಘಟನೆಯ ನಂತರ ಮಮತಾ ಅವರು ಪಶ್ಚಿಮ ಬಂಗಾಳದಲ್ಲಿ ಮನೆಮಾತಾದರು.

* 1993ರ ಜನವರಿ ತಿಂಗಳಲ್ಲಿ ಅಂದಿನ ಮುಖ್ಯಮಂತ್ರಿ ಜ್ಯೋತಿ ಬಸು ಅವರ ಮನೆಯ ಮುಂದೆ ಮಮತಾ ಧರಣಿ ನಡೆಸಿದ್ದರು. ವಾಕ್‌ ಮತ್ತು ಶ್ರವಣ ದೋಷವುಳ್ಳ, ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ಸಿಪಿಎಂ ಕಾರ್ಯಕರ್ತನನ್ನು ಬಂಧಿಸಬೇಕು ಎಂದು ಆಗ್ರಹಿಸಿ ಹೋರಾಟ ಆಯೋಜಿಸಿದ್ದರು. ಸಂತ್ರಸ್ತೆಯ ಜತೆಗೆ ಬಂದಿದ್ದ ಮಮತಾ, ಮುಖ್ಯಮಂತ್ರಿ ಕಚೇರಿಯ ಮುಂದೆ ನೆಲದಲ್ಲಿ ಕುಳಿತು ಧರಣಿ ನಡೆಸಿದರು. ಅವರ ಮನವೊಲಿಕೆಯ ಪ್ರಯತ್ನಗಳು ಫಲನೀಡದಿದ್ದಾಗ, ಪೊಲೀಸರು ಅವರ ಕೂದಲು ಹಿಡಿದೆಳೆದು ವಾಹನದಲ್ಲಿ ಕೂರಿಸಿ ಠಾಣೆಗೆ ಕರೆದೊಯ್ದಿದ್ದರು.

*ಕಾಂಗ್ರೆಸ್‌ ತ್ಯಜಿಸಿದ ಬಳಿಕ, 2000–01ರಲ್ಲಿ ಟಿಎಂಸಿ ಹಾಗೂ ಸಿಪಿಎಂ ಕಾರ್ಯಕರ್ತರ ಮಧ್ಯೆ ಹಲವು ಘರ್ಷಣೆಗಳು ನಡೆದಿದ್ದವು. ಉತ್ತರ ಮೇದಿನಿಪುರ ಜಿಲ್ಲೆಯಲ್ಲಿ ಅನೇಕ ಬಾರಿ ಮಮತಾ ಅವರ ವಾಹನದ ಮೇಲೆ ದಾಳಿ ನಡೆದಿತ್ತು. 2001ರಲ್ಲಿ ಅವರ ಮೇಲೆ ಕಚ್ಚಾ ಬಾಂಬ್‌ ಎಸೆಯಲಾಗಿತ್ತು.

* 2006–07ರಲ್ಲೂ ಅವರ ಮೇಲೆ ಹಲವು ಬಾರಿ ದಾಳಿಗಳಾಗಿದ್ದವು. ಅವರು ನಂದಿಗ್ರಾಮವನ್ನು ಪ್ರವೇಶಿಸುವುದನ್ನು ತಡೆಯಲು ಅವರ ಮೇಲೆ ಕಚ್ಚಾ ಬಾಂಬ್‌ ಎಸೆಯಲಾಗಿತ್ತು, ಅವರ ಕಾರಿಗೆ ಬೆಂಕಿ ಹಚ್ಚಿದ ಘಟನೆಯೂ ನಡೆದಿತ್ತು.

* 2006ರಲ್ಲಿ ಸಿಂಗೂರ್‌ನಲ್ಲಿ ವಲಯ ಅಭಿವೃದ್ಧಿ ಅಧಿಕಾರಿಯ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಅವರನ್ನು ಪ್ರತಿಭಟನಾ ಸ್ಥಳದಿಂದ ಎಳೆದೊಯ್ದಿದ್ದರು.

* 2010ರಲ್ಲಿ ಕೇಂದ್ರದ ರೈಲ್ವೆ ಸಚಿವೆಯಾಗಿದ್ದ ಸಂದರ್ಭದಲ್ಲಿ, ಆ ಕಾಲದಲ್ಲಿ ಮಾವೊವಾದಿಗಳ ಹಿಡಿತದಲ್ಲಿದ್ದ ಪ್ರದೇಶ ಎಂದು ಗುರುತಿಸಲಾಗಿದ್ದ ಲಾಲ್‌ಘರ್‌ನಲ್ಲಿ ರ್‍ಯಾಲಿಯೊಂದರಲ್ಲಿ ಪಾಲ್ಗೊಂಡು ಮರಳುತ್ತಿದ್ದಾಗ ಅವರ ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ ಹೊಡೆದಿತ್ತು. ಅದು ಮಮತಾ ಅವರ ಹತ್ಯೆಗೆ ನಡೆದ ಪ್ರಯತ್ನ ಎಂದು ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.