ADVERTISEMENT

ಅಗಸ್ಟಾ: ಕಾಂಗ್ರೆಸ್–ಬಿಜೆಪಿ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 20:13 IST
Last Updated 31 ಡಿಸೆಂಬರ್ 2018, 20:13 IST

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್‌ ಗಣ್ಯರ ಹೆಲಿಕಾಪ್ಟರ್‌ ಖರೀದಿ ಒಪ್ಪಂದ ಪ್ರಕರಣದ ಬಂಧಿತ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ವಿಚಾರಣೆಯಿಂದ ಬಹಿರಂಗವಾಗಿರುವ ವಿಷಯಗಳು ರಾಜಕೀಯ ಕೆಸೆರೆರಚಾಟಕ್ಕೆ ನಾಂದಿ ಹಾಡಿವೆ.

ಮಿಷೆಲ್‌ ವಿಚಾರಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹೆಸರು ಪ್ರಸ್ತಾಪಿಸಿದ್ದಾನೆ ಎಂದು ಜಾರಿ ನಿರ್ದೇಶನಾಲಯ ದೆಹಲಿ ನ್ಯಾಲಯಾಲಯಕ್ಕೆ ತಿಳಿಸಿದ ನಂತರ ಆರೋಪ, ಪ್ರತ್ಯಾರೋಪ ತೀವ್ರಗೊಂಡಿದೆ.

ಕೇಸರಿ ಪಡೆಯು ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಆರಂಭಿಸಿದೆ. ಇದನ್ನು ತಡೆಯಲು ಮಾಜಿ ರಕ್ಷಣಾ ಸಚಿವ ಮತ್ತು ಕಾಂಗ್ರೆಸ್‌ ಎ.ಕೆ. ಆಂಟನಿ ಅಂಗಳಕ್ಕೆ ಇಳಿದಿದ್ದಾರೆ. ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸುಳ್ಳುಗಳನ್ನು ಸೃಷ್ಟಿಸಲು ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

ADVERTISEMENT

ರಕ್ಷಣಾ ಒಪ್ಪಂದ: ಸೋನಿಯಾ, ರಾಹುಲ್‌ ಹಸ್ತಕ್ಷೇಪ ಮಾಡಿಲ್ಲ

ಎ.ಕೆ. ಆಂಟನಿ,ಮಾಜಿ ರಕ್ಷಣಾ ಸಚಿವ

* ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್ ಖರೀದಿ ಪ್ರಕ್ರಿಯೆ ಸೇರಿದಂತೆ ಯುಪಿಎ ಅವಧಿಯಲ್ಲಿ ನಡೆದ ಯಾವ ರಕ್ಷಣಾ ಒಪ್ಪಂದಗಳಲ್ಲೂ ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಹಸ್ತಕ್ಷೇಪ ಮಾಡಿಲ್ಲ

* ಬಿಜೆಪಿ ಮತ್ತು ಕೇಂದ್ರ ಸರ್ಕಾರವು ಸುಳ್ಳುಗಳನ್ನು ಹುಟ್ಟು ಹಾಕಲು ಜಾರಿ ನಿರ್ದೇಶನಾಲಯದಂತಹ (ಇ.ಡಿ) ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ

* ಯಾವುದೇ ಸೂಕ್ತ ದಾಖಲೆಗಳಿಲ್ಲದೆ ಬಿಜೆಪಿ ರಕ್ಷಣಾ ವಿಷಯಗಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ

* ಕಾಂಗ್ರೆಸ್‌ ಹೊರಗೆಳೆದ ರಫೇಲ್‌ ಯುದ್ಧ ವಿಮಾನ ಹಗರಣಕ್ಕೆ ಪ್ರತಿಯಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆಗಸ್ಟ್‌ ವೆಸ್ಟ್‌ಲ್ಯಾಂಡ್‌ ಒಪ್ಪಂದವನ್ನು ಹೆಣೆದಿದೆ. ಜನರ ಗಮನ ಬೇರೆಡೆ ಸೆಳೆಯಲು ನಿರಾಧಾರ ಆರೋಪಗಳನ್ನು ಮಾಡುತ್ತಿದೆ

* ರಕ್ಷಣಾ ಸಾಮಗ್ರಿಗಳನ್ನು ಪೂರೈಸುವ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸುವ ಯುಪಿಎ ಸರ್ಕಾರದ ಶಿಫಾರಸು ಕಡೆಗಣಿಸಿ ಮೋದಿ ಸರ್ಕಾರ ಕಂಪನಿಗೆ ಕ್ಲೀನ್‌ಚಿಟ್‌ ನೀಡಿದೆ.

ಗಾಂಧಿ ಕುಟುಂಬಕ್ಕೆ ಮಿಷೆಲ್‌ ಹಳೆಯ ಸ್ನೇಹಿತ

ಅಮಿತ್‌ ಶಾ, ರಾಷ್ಟ್ರೀಯ ಅಧ್ಯಕ್ಷ

* ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಒಪ್ಪಂದ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್, ಗಾಂಧಿ ಕುಟುಂಬದ ಹಳೆಯ ಸ್ನೇಹಿತ

* ಕಾಂಗ್ರೆಸ್‌ ನಾಯಕರ ಕುಟುಂಬ ಮತ್ತು ಮಿಷೆಲ್‌ ನಡುವಿನ ಸ್ನೇಹ ಮತ್ತು ಸಂಬಂಧ ನಿನ್ನೆ, ಮೊನ್ನೆಯದಲ್ಲ. ಹಲವಾರು ವರ್ಷಗಳಷ್ಟು ಹಳೆಯದ್ದು

* ಅಗಸ್ಟಾ ವೆಸ್ಟ್‌ಲ್ಯಾಂಡ್‌ ಒಪ್ಪಂದ ಕುರಿತು ಜಾರಿ ನಿರ್ದೇಶನಾಲಯ ನಡೆಸಿದ ವಿಚಾರಣೆಯ ವಿವರಗಳನ್ನು ಮಿಷೆಲ್‌ ಏಕೆ ಸೋನಿಯಾ ಗಾಂಧಿ ಅವರಿಗೆ ತಲುಪಿಸಲು ಬಯಸಿದ್ದ?

* ವಿಚಾರಣೆ ವೇಳೆ ಸೋನಿಯಾ ಗಾಂಧಿ ಅವರ ಪಾತ್ರದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಸಂಬಂಧಿಸಿದ ಚೀಟಿಯನ್ನು ಏಕೆ ಮಿಷೆಲ್‌ ತಮ್ಮ ವಕೀಲರಿಗೆ ನೀಡಿದ್ದರು? ಅದನ್ನು ಸೋನಿಯಾ ಗಾಂಧಿ ಅವರಿಗೆ ತಲುಪಿಸುವುದು ಅವರ ಉದ್ದೇಶವಾಗಿತ್ತೇ?

* ಮಿಷೆಲ್‌ ತಮಗೆ ಚೀಟಿ ನೀಡಿದ್ದನ್ನು ಸ್ವತಃ ಆತನ ವಕೀಲರು ಒಪ್ಪಿಕೊಂಡಿದ್ದಾರೆ. ಆತ ನೀಡಿದ್ದು ಔಷಧಿ ಚೀಟಿಯಾಗಿರಬಹುದು ಎಂದು ಭಾವಿಸಿದ್ದಾಗಿ ವಕೀಲರು ಸಮಜಾಯಿಷಿ ನೀಡಿದ್ದಾರೆ

ಗಾಂಧಿ ಕುಟುಂಬ ಶಾಮೀಲು

ಯೋಗಿ ಆದಿತ್ಯನಾಥ್‌, ಉತ್ತರ ಪ್ರದೇಶದ ಮುಖ್ಯಮಂತ್ರಿ

* ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದಲ್ಲಿ ಗಾಂಧಿ ಕುಟುಂಬ ಶಾಮೀಲಾಗಿದೆ

* ಜಾರಿ ನಿರ್ದೇಶನಾಲಯದ ಬಂಧನದಲ್ಲಿರುವ ಶಂಕಿತ ಮಧ್ಯವರ್ತಿ ಕ್ರಿಶ್ಚಿಯನ್‌ ಮಿಷೆಲ್‌ ಬಾಯ್ಬಿಟ್ಟರೆ ತಮ್ಮ ಬಂಡವಾಳ ಬಯಲಾಗುತ್ತದೆ ಎಂದು ಕಾಂಗ್ರೆಸ್‌ಗೆ ನಡುಕ ಶುರುವಾಗಿದೆ

* ಸತ್ಯ ಬಹಿರಂಗವಾಗುವ ಭಯ ಕಾಂಗ್ರೆಸ್‌ ಪಕ್ಷವನ್ನು ಕಾಡುತ್ತಿದೆ. ಗಾಂಧಿ ಕುಟುಂಬದ ಪ್ರತಿಷ್ಠೆ ಉಳಿಸಲು ಕಾಂಗ್ರೆಸ್‌ ನಾಯಕರು ಕಣಕ್ಕೆ ಇಳಿದಿದ್ದಾರೆ

* ರಕ್ಷಣಾ ಒಪ್ಪಂದಗಳಲ್ಲಿ ಕಾಂಗ್ರೆಸ್‌ ಹಸ್ತಕ್ಷೇಪ ಮಾಡದಿದ್ದರೆ ದೇಶದ ರಕ್ಷಣಾ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗಿರುತ್ತಿತ್ತು. ಆದರೆ, ಕಾಂಗ್ರೆಸ್‌ ಪಕ್ಷ ದೇಶದ ಭದ್ರತೆ ಜತೆ ಚೆಲ್ಲಾಟವಾಡಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.