ADVERTISEMENT

ಸಿಬಿಐ ವಶಕ್ಕೆ ಮೈಕೆಲ್ ಜೇಮ್ಸ್, ಏನಿದು ಅಗಸ್ಟಾ ಹಗರಣ?

ಅಗಸ್ಟಾ ಹಗರಣದಲ್ಲಿ ವಾಯುಪಡೆ ಮಾಜಿ ಮುಖ್ಯಸ್ಥರೂ ಆರೋಪಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 11:59 IST
Last Updated 5 ಡಿಸೆಂಬರ್ 2018, 11:59 IST
ಅಗಸ್ಟ ವೆಸ್ಟ್‌ಲೆಂಡ್ ಪ್ರಕರಣದ ಆರೋಪಿ ಜೇಮ್ಸ್ ಕ್ರಿಶ್ಚಿಯನ್ ಮೈಕೆಲ್
ಅಗಸ್ಟ ವೆಸ್ಟ್‌ಲೆಂಡ್ ಪ್ರಕರಣದ ಆರೋಪಿ ಜೇಮ್ಸ್ ಕ್ರಿಶ್ಚಿಯನ್ ಮೈಕೆಲ್   

ನವದೆಹಲಿ: ಗಣ್ಯವ್ಯಕ್ತಿಗಳ ಹಾರಾಟಕ್ಕೆಂದು ₹3600 ಕೋಟಿ ವೆಚ್ಚದಲ್ಲಿ ಭಾರತ 2010ರಲ್ಲಿ 12 ಆಗಸ್ಟಾ ವೆಸ್ಟ್‌ಲೆಂಡ್ ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿತ್ತು. ಈ ಖರೀದಿ ವ್ಯವಹಾರದಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಕೂಗು ಬಹುಕಾಲದಿಂದ ಕೇಳಿಬರುತ್ತಿತ್ತು.ವಾಯುಪಡೆಯ ಮಾಜಿ ಮುಖ್ಯಸ್ಥರು ಸೇರಿ ಹಲವು ಪ್ರಭಾವಿಗಳು ಆರೋಪಿಗಳಾಗಿರುವಈ ಹಗರಣದ ಸೂತ್ರಧಾರ ಬ್ರಿಟಿಷ್ ಪ್ರಜೆ ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್. ಸೌದಿ ಅರೇಬಿಯಾ ಸರ್ಕಾರವು ಈತನನ್ನು ಮಂಗಳವಾರ ತಡರಾತ್ರಿ ಭಾರತಕ್ಕೆ ಹಸ್ತಾಂತರಿಸಿದೆ.

ಮಂಗಳವಾರ ರಾತ್ರಿಯಿಡಿ ಜೇಮ್ಸ್‌ನನ್ನು ವಿಚಾರಣೆ ನಡೆಸಿದ ಸಿಬಿಐ ಅಧಿಕಾರಿಗಳು ಬುಧವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಯನ್ನು ಐದು ದಿನಗಳ ಅವಧಿಗೆ ಸಿಬಿಐ ವಶಕ್ಕೆ ಒಪ್ಪಿಸಿದೆ.

ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿಯಂಥ ಅತಿಗಣ್ಯರನ್ನು ಹೊತ್ತೊಯ್ಯಲು ಬಳಸುತ್ತಿದ್ದ ‘ಎಂಐ–8’ ಹೆಲಿಕಾಪ್ಟರ್‌ಗಳನ್ನು ಬದಲಿಸಬೇಕು ಎಂದು ನಿರ್ಧರಿಸಿದ್ದ ಯುಪಿಎಸರ್ಕಾರ, ವಾಯುಪಡೆಯ ‘ಕಮ್ಯುನಿಕೇಷನ್‌ ಸ್ಕ್ವಾರ್ಡನ್‌’ಗೆ 12 ಹೆಲಿಕಾಪ್ಟರ್‌ಗಳನ್ನು ಖರೀದಿಸಲು ಅನುಮತಿ ನೀಡಿತು. ಖರೀದಿಗಾಗಿ ಟೆಂಡರ್ ನಿಯಮಾವಳಿ ರೂಪಿಸುವಾಗ ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡುವಂತೆ ಷರತ್ತುಗಳನ್ನು ವಿಧಿಸಲಾಯಿತು. ಮತ್ತೊಂದು ಕಂಪನಿ ಸಲ್ಲಿಸಿದ್ದ ಸ್ಪರ್ಧಾತ್ಮಕ ಬಿಡ್‌ ದಾಖಲೆಗಳನ್ನು ಪರಿಗಣಿಸದೆ ನಿರ್ದಿಷ್ಟ ಕಂಪನಿಗೆ ಅನುಕೂಲ ಮಾಡಿಕೊಡಲಾಯಿತು. ಈ ಎಲ್ಲ ಅವ್ಯವಹಾರಗಳ ಹಿಂದಿನ ಚಾಲಕ ಶಕ್ತಿ ಮೈಕೆಲ್ ಜೇಮ್ಸ್‌ ಎಂಬುದು ಸಿಬಿಐ ಆರೋಪ.

ADVERTISEMENT

ರಾಜಕೀಯ ಇದೆಯೇ?

ಚುನಾವಣೆಯ ಹೊಸಿಲಲ್ಲಿ ನಡೆಯುವ ಯಾವುದೇ ಬೆಳವಣಿಗೆಯನ್ನು ರಾಜಕಾರಣದ ಕನ್ನಡಿಯಲ್ಲಿನೋಡುವುದು ವಾಡಿಕೆ. ಅಗಸ್ಟಾವೆಸ್ಟ್‌ಲೆಂಡ್ ಕೂಡ ಇದಕ್ಕೆ ಹೊರತಲ್ಲ. ಸೌದಿ ಅರೇಬಿಯಾದಿಂದ ಆರೋಪಿಯನ್ನು ಸುಪರ್ದಿಗೆ ಪಡೆದುಕೊಂಡಿರುವುದುನರೇಂದ್ರ ಮೋದಿ ಸರ್ಕಾರಕ್ಕೆ ಸಿಕ್ಕ ಗೆಲುವು ಎಂದೇ ವ್ಯಾಖ್ಯಾನಿಸಲಾಗುತ್ತಿದೆ. ರಫೇಲ್ ಯುದ್ಧವಿಮಾನ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬ ಕಾಂಗ್ರೆಸ್ ಆರೋಪಪದ ವಿರುದ್ಧ ಅಗಸ್ಟ ವೆಸ್ಟ್‌ಲೆಂಡ್‌ ಹಗರಣವನ್ನು ಬಿಜೆಪಿ ಬಳಸಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಮೈಕೆಲ್ ಬಂಧನದ ನಂತರ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಸಿಬಿಐ, ‘ಕಾರ್ಯಾಚರಣೆಯು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೋವಲ್ ಮಾರ್ಗದರ್ಶನದಲ್ಲಿ ನಡೆಯಿತು. ಸಿಬಿಐನ ಮಧ್ಯಂತರ ನಿರ್ದೇಶಕ ಎಂ.ನಾಗೇಶ್ವರ ರಾವ್ ಸಮನ್ವಯದ ಹೊಣೆ ಹೊತ್ತುಕೊಂಡಿದ್ದರು.ಇದು ಅತಿಸೂಕ್ಷ್ಮ ಪ್ರಕರಣವಾಗಿರುವುದರಿಂದ ಜೇಮ್ಸ್‌ನನ್ನು ಕೆಲ ಸಮಯ ಸಿಬಿಐ ಮುಖ್ಯಕಚೇರಿಯಲ್ಲಿಯೇ ಇರಿಸಲಾಗುತ್ತದೆ. ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಿಲ್ಲ’ ಎಂದು ಹೇಳಿದೆ.

ಆರೋಪಿಯನ್ನು ಭಾರತಕ್ಕೆ ಕರೆತಂದಿದ್ದು ತಾನು ಸಾಧಿಸಿದ ಯಶಸ್ಸು ಎಂದು ಸಿಬಿಐ ಬಣ್ಣಿಸಿಕೊಂಡಿದೆ. ಆದರೆ ಜೇಮ್ಸ್ ಮಾತ್ರ, ‘ತನ್ನನ್ನು ಭಾರತಕ್ಕೆ ಕರೆದೊಯ್ಯುವ ಕಾರ್ಯಾಚರಣೆಯ ಹಿಂದೆ ರಾಜಕೀಯ ಉದ್ದೇಶಗಳು ಇವೆ. ಲೋಕಸಭೆ ಚುನಾವಣೆಗೆ ಮೊದಲು ಮೋದಿ ಸರ್ಕಾರ ನನ್ನನ್ನು ಹರಕೆಯಕುರಿಯನ್ನಾಗಿಸಲು ಸಂಚು ರೂಪಿಸಿದೆ’ ಎಂದು ಈ ಹಿಂದೆಯೇ ಆರೋಪಿಸಿದ್ದ.

ಯಾರಿವನು ಕ್ರಿಶ್ಚಿಯನ್ ಮೈಕೆಲ್ ಜೇಮ್ಸ್?

ಬ್ರಿಟನ್‌ನ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಸಂಸ್ಥೆಯಲ್ಲಿ ಜೇಮ್ಸ್ ಸಲಹೆಗಾರನಾಗಿದ್ದ. ವಿಮಾನ, ವೈಮಾನಿಕ ಉಪಕರಣಗಳು ಮತ್ತು ಮಿಲಿಟರಿ ನೆಲೆಗಳ ಬಗ್ಗೆ ತನಗಿದ್ದ ತಾಂತ್ರಿಕ ಜ್ಞಾನದಿಂದ ಹಲವು ಕಂಪನಿಗಳು ಮತ್ತು ವಿವಿಧ ದೇಶಗಳ ಸರ್ಕಾರಿ ಅಧಿಕಾರಿಗಳಿಗೆ ಪ್ರೀತಿಪಾತ್ರ ವ್ಯಕ್ತಿಯಾಗಿದ್ದ. 1980ರ ದಶಕದಲ್ಲಿ ಮೊದಲ ಬಾರಿಗೆ ಬ್ರಿಟನ್‌ನ ವೆಸ್ಟ್‌ಲ್ಯಾಂಡ್ ಹೆಲಿಕಾಪ್ಟರ್ಸ್‌ ಲಿಮಿಟೆಡ್‌ (ಡಬ್ಲ್ಯುಎಚ್‌ಎಲ್) ಕಂಪನಿಗೆ ಕೆಲಸಕ್ಕೆ ಸೇರಿದ.

ಭಾರತದ ಅತಿಗಣ್ಯ ವ್ಯಕ್ತಿಗಳ ಸಂಚಾರಕ್ಕಾಗಿ 12 ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಅಗಸ್ಟ ವೆಸ್ಟ್‌ಲೆಂಡ್ ಒಪ್ಪಂದಕ್ಕೆ 2010ರಲ್ಲಿ ಸಹಿ ಹಾಕಲಾಗಿತ್ತು.ಕಂಪನಿಯ ಮಧ್ಯವರ್ತಿ ಮೈಕೆಲ್ ಜೊತೆಗೆ ಶಾಮೀಲಾಗಿದ್ದ ವಾಯುಪಡೆ ಮತ್ತು ರಕ್ಷಣಾ ಇಲಾಖೆಯ ಅಧಿಕಾರಿಗಳು ಸಂಚು ಮಾಡಿ ಟೆಂಡರ್‌ನ ನಿಯಮಗಳನ್ನು ಅಗಸ್ಟಾ ಕಂಪನಿಗೆ ಅನುಕೂಲವಾಗುವಂತೆ ರೂಪಿಸಿದ್ದರು. ಹೀಗಾಗಿಯೇ ಟೆಂಡರ್‌ ಅಗಸ್ಟಾ ಕಂಪನಿಗೆ ಸುಲಭವಾಗಿ ಒಲಿಯುವಂತಾಯಿತು ಎಂಬ ಆರೋಪಗಳು ಕೇಳಿ ಬಂದಿದ್ದವು.

ವಾಯುಪಡೆ, ರಕ್ಷಣಾ ಇಲಾಖೆ ಮತ್ತು ಕೇಂದ್ರ ಸರ್ಕಾರದ ವಿವಿಧ ಹಂತಗಳಲ್ಲಿ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದ ಜೇಮ್ಸ್‌, ಎಲ್ಲೆಡೆ ತನ್ನ ಪರವಾಗಿ ಕೆಲಸ ಮಾಡಬಲ್ಲವರನ್ನು ಹೊಂದಿದ್ದ. ಕೆಲ ನಿವೃತ್ತ ಅಧಿಕಾರಿಗಳ ಜೊತೆಗೂ ಅವನಿಗೆ ಒಡನಾಟವಿತ್ತು. ಟೆಂಡರ್ ಮತ್ತು ಖರೀದಿ ಪ್ರಕ್ರಿಯೆಯ ಕಡತಗಳ ಓಡಾಟದ ಮೇಲೆ ಜೇಮ್ಸ್ ನಿಗಾ ಇರಿಸಿದ್ದ. ತನ್ನ ಮರ್ಜಿಯಲ್ಲಿದ್ದ ವಾಯುಪಡೆ ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳಿಂದ ಗೌಪ್ಯ ಮಾಹಿತಿಗಳನ್ನು ಸಂಗ್ರಹಿಸಿ, ಇಟಲಿ ಮತ್ತು ಸ್ವಿಜ್ಟರ್‌ಲೆಂಡ್‌ನಲ್ಲಿದ್ದ ಮೆಲಧಿಕಾರಿಗಳಿಗೆ ನಿಯಮಿತವಾಗಿ ವರದಿ ಮಾಡುತ್ತಿದ್ದ.

ಮೈಕೆಲ್ ವಿರುದ್ಧ ಸಿದ್ಧಪಡಿಸಿರುವ ಚಾರ್ಜ್‌ಶೀಟ್ ಸುಮಾರು 30 ಸಾವಿರ ಪುಟಗಳಷ್ಟಿದೆ. ‘ಹಗರಣದಿಂದ ಭಾರತ ಸರ್ಕಾರಕ್ಕೆ ಸುಮಾರು 40 ಕೋಟಿ ಯೂರೊ ನಷ್ಟವಾಗಿದೆ (₹3200 ಕೋಟಿ). ಹಗರಣದಲ್ಲಿ ಬಳಕೆಯಾಗಿರುವ 6.2 ಕೋಟಿ ಯೂರೊ (₹495 ಕೋಟಿ) ವಹಿವಾಟಿನ ಇತ್ಯೋಪರಿ ಪತ್ತೆ ಮಾಡಲಾಗಿದೆ’ ಎಂದು ಸಿಬಿಐ ಹೇಳಿದೆ.

ಜೇಮ್ಸ್‌ನ ಜೊತೆಗೆ ವಾಯುಸೇನೆಯ ಮಾಜಿ ಮುಖ್ಯಸ್ಥ ಎಸ್‌.ಪಿ.ತ್ಯಾಗಿ, ಏರ್ ಮಾರ್ಷಲ್ ಜೆ.ಎಸ್.ಗುಜ್ರಲ್, ತ್ಯಾಗಿ ಸಂಬಂಧಿ ಸಂಜೀವ್ ತ್ಯಾಗಿ ಮತ್ತು ವಕೀಲ ಗೌತಮ್ ಖೇತನ್ ಅವರನ್ನೂ ಸಿಬಿಐ ಆರೋಪಪಟ್ಟಿಯಲ್ಲಿ ಹೆಸರಿಸಿದೆ.ವಿದೇಶಿಯರಾದ ಗ್ಯುಸೆಪ್ಪೆ ಒರ್ಸಿ (ಫಿನ್‌ಮೆಕ್ಕನಿಕಾದ ಮಾಜಿ ಅಧ್ಯಕ್ಷ), ಅಗಸ್ಟ ವೆಸ್ಟ್‌ಲ್ಯಾಂಡ್‌ನ ಮಾಜಿ ಸಿಇಒ ಬ್ರೂನೊ ಸ್ಪಾಗ್ನೊಲಿಲಿ, ಗಿಡೊ ರಾಲ್ಫ್‌ ಹಾಸ್ಚ್‌ಕೆ ಮತ್ತು ಕಾರ್ಲೊ ಗೆರೆಸಾ ಸೇರಿದ್ದಾರೆ.

‘ಅತಿಗಣ್ಯ ವ್ಯಕ್ತಿಗಳು ಸಂಚರಿಸುವ ಹೆಲಿಕಾಪ್ಟರ್‌ಗಳ ಹಾರಾಟ ಸಾಮರ್ಥ್ಯ 6000 ಮೀಟರ್‌ ಇರಬೇಕು ಎಂಬ ನಿಯಮವನ್ನು 4500 ಮೀಟರ್‌ಗೆ ಬದಲಿಸಿದ ಸಂಚಿನಲ್ಲಿ ವೈಮಾನಿಕ ಎಂಜಿನಿಯರಿಂಗ್‌ನಲ್ಲಿ ಹಿಡಿತ ಹೊಂದಿದ್ದ ಜೇಮ್ಸ್‌ನ ಪಾತ್ರ ದೊಡ್ಡದು ಎನ್ನುತ್ತದೆ ಸಿಬಿಐ. ಹಾರಾಟ ಸಾಮರ್ಥ್ಯವನ್ನು ಕಡಿಮೆ ಮಾಡುವ ನಿರ್ಧಾರ ತೆಗೆದುಕೊಂಡ ನಂತರವೇ ಅಗಸ್ಟ ವೆಸ್ಟ್‌ಲ್ಯಾಂಡ್‌ ಕಂಪನಿ ಟೆಂಡರ್‌ಗೆ ಅರ್ಜಿ ಸಲ್ಲಿಸಲು ಸಾಧ್ಯವಾಗಿದ್ದು. ಇಷ್ಟೆಲ್ಲಾ ಭಾನಾಗಡಿಯ ನಂತರ ಅಗಸ್ಟ ವೆಸ್ಟ್‌ಲ್ಯಾಂಡ್ ಫೆಬ್ರುವರಿ 8, 2010ರಂದು 55 ಕೋಟಿ ಯೂರೊ (₹3966 ಕೋಟಿ) ಮೊತ್ತದ ಟೆಂಡರ್‌ ತನ್ನದಾಗಿಸಿಕೊಂಡಿತು. ರಷ್ಯಾ ಮತ್ತು ಅಮೆರಿಕದ ಹೆಲಿಕಾಪ್ಟರ್ ಕಂಪನಿಗಳು ಸಲ್ಲಿಸಿದ್ದ ಬಿಡ್ ತಿರಸ್ಕರಿಸಲು ಭಾರತದ ಪ್ರಭಾವಿ ವ್ಯಕ್ತಿಗಳಿಗೆ ಮೈಕೆಲ್ ಸಾಕಷ್ಟು ಲಂಚ ನೀಡಿದ್ದರು ಎನ್ನುವ ಆರೋಪ ಬಹುಕಾಲದಿಂದ ಕೇಳಿಬರುತ್ತಿತ್ತು.

ಅದರಲ್ಲೂ ಅಮೆರಿಕದ ಸಿಕೊರ್‌ಸ್ಕೈ ₹2228 ಕೋಟಿಗೆ 12 ಹೆಲಿಕಾಪ್ಟರ್‌ ಮಾರುವುದಾಗಿ ಬಿಡ್‌ನಲ್ಲಿ ಹೇಳಿತ್ತು. ಈ ಕಂಪನಿಯ ಹೆಲಿಕಾಪ್ಟರ್‌ಗಳ ಗುಣಮಟ್ಟ ಸರಿಯಿಲ್ಲ ಎಂದು ಪ್ರಾಯೋಗಿಕ ಪರೀಕ್ಷೆ ವೇಳೆಯಲ್ಲಿ ಅಮಾನ್ಯಗೊಳಿಸುವಲ್ಲಿ ಮೈಕೆಲ್ ಹೂಡಿದ ನಂಚು ಯಶಸ್ವಿಯಾಯಿತು. ಈ ಕಂಪನಿಯ ಬಿಡ್‌ ದಾಖಲೆಗಳನ್ನು ಟೆಂಡರ್‌ ಪರಿಶೀಲನೆ ವೇಳೆ ಅಧಿಕಾರಿಗಳು ಪರಿಗಣಿಸಲೇ ಇಲ್ಲ.

ಇಂಟರ್‌ಪೋಲ್ ನೋಟಿಸ್

ಅಗಸ್ಟಾ ವೆಸ್ಟ್‌ಲೆಂಡ್ ಹೆಲಿಕಾಪ್ಟರ್ ಖರೀದಿ ಒಪ್ಪಂದದಲ್ಲಿ ಜೇಮ್ಸ್ ಮೈಕೆಲ್ ಪಾತ್ರ ಬೆಳಕಿಗೆ ಬಂದಿದ್ದು 2012ರಲ್ಲಿ.ಭಾರತದ ಅಧಿಕಾರಿಗಳಿಗೆ ಕಿಕ್‌ಬ್ಯಾಕ್ ಕೊಡುವ ಮೂಲಕ ಅಗಸ್ಟ ಕಂಪನಿಗೆ ಹೆಲಿಕಾಪ್ಟರ್ ಟೆಂಡರ್ ದೊರಕಿಸಿಕೊಡಲು ಮೈಕೆಲ್ ಜೇಮ್ಸ್ ಯತ್ನಿಸುತ್ತಿದ್ದಾನೆ ಎನ್ನುವುದನ್ನು ಇಟಲಿ ಅಧಿಕಾರಿಗಳು ನಡೆಸಿದ ತನಿಖೆ ಎತ್ತಿತೋರಿಸಿತು.

ಡೀಲ್ ಕುದುರಿಸಲು ಲಂಚ ಕೊಟ್ಟ ಆರೋಪದ ಮೇಲೆ ಅಗಸ್ಟ ವೆಸ್ಟ್‌ಲೆಂಡ್‌ನ ಸಿಇಒ ಬ್ರುನೊ ಸ್ಪಾಗ್ನೊಲಿನಿ, ಅಗಸ್ಟ ವೆಸ್ಟ್‌ಲೆಂಡ್‌ನ ಮಾತೃಸಂಸ್ಥೆ ಫಿನ್‌ಮೆಕಾನಿಕಾದ ಅಧ್ಯಕ್ಷಗೆಸೆಪ್ಪೆ ಒರ್ಸಿ ಅವರನ್ನು ಇಟಲಿ ಪೊಲೀಸರು ಫೆಬ್ರುವರಿ 2013ರಲ್ಲಿ ಬಂಧಿಸಿದ್ದರು. ವಿಷಯ ಬೆಳಕಿಗೆ ಬಂದ ನಂತರ ಅಂದಿನ ಯುಪಿಎ ಸರ್ಕಾರ ಒಪ್ಪಂದ ರದ್ದಪಡಿಸಿ ಬ್ಯಾಂಕ್ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಂಡು, ತನಿಖೆಗೆ ಆದೇಶಿಸಿತು. ಇಷ್ಟು ಹೊತ್ತಿಗೆ ಒಪ್ಪಂದದಂತೆ ನೀಡಬೇಕಿದ್ದ 12 ಹೆಲಿಕಾಪ್ಟರ್‌ಗಳ ಪೈಕಿ 3 ಹೆಲಿಕಾಪ್ಟರ್‌ಗಳನ್ನು ಅಗಸ್ಟಾ ವಾಯುಪಡೆಗೆ ಹಸ್ತಾಂತರಿಸಿತ್ತು. ತನ್ನನ್ನು ಬಂಧಿಸಬಹುದು ಎಂಬ ಅನುಮಾನ ಬಂದ ತಕ್ಷಣ ಮೈಕೆಲ್ ಭಾರತದಿಂದ ಪರಾರಿಯಾದ.

ವಿಚಾರಣೆ ಎದುರಿಸುವಂತೆ ಸೂಚಿಸಿ ಹಲವು ಸಮನ್ಸ್‌ ಹೊರಡಿಸಲಾಯಿತು. ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 2015ರಂದು ಜಾಮೀನು ರಹಿತ ಅರೆಸ್ಟ್ ವಾರಂಟ್ ಹೊರಡಿಸಲಾಯಿತು. ಈ ವಾರಂಟ್ ಆಧರಿಸಿ ಇಂಟರ್‌ಪೋಲ್ ಸಹ ಮೈಕೆಲ್ ವಿರುದ್ಧ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿತು.

ಸೌದಿ ಅರೇಬಿಯಾದಲ್ಲಿ ಬಂಧನ ಮತ್ತು ಹಸ್ತಾಂತರ

ಸೌದಿ ಅರೇಬಿಯಾ ಮೂಲಕ ಪ್ರಯಾಣಿಸುತ್ತಿದ್ದ ಜೇಮ್ಸ್‌ ಮೈಕೆಲ್‌ನಲ್ಲಿ ಫೆಬ್ರುವರಿ 2017ರಂದು ಇಂಟರ್‌ಪೋಲ್‌ನ ರೆಡ್‌ಕಾರ್ನರ್ ನೋಟಿಸ್ ಆಧಾರದ ಮೇಲೆ ಬಂಧಿಸಲಾಯಿತು.ಸೆಪ್ಟೆಂಬರ್ 2017ರಲ್ಲಿ ಸಿಬಿಐ ಜೇಮ್ಸ್‌ ಮೈಕೆಲ್ ಮತ್ತು ಇತರ 11 ಮಂದಿಯ ವಿರುದ್ಧ ಸಿಬಿಐ ಆರೋಪಪಟ್ಟಿ ಸಲ್ಲಿಸಿತು. ಮಾರ್ಚ್ 19, 2018ರಂದು ರಾಜತಾಂತ್ರಿಕ ಮಾರ್ಗಗಳ ಮೂಲಕ ಆರೋಪಿಯನ್ನು ಹಸ್ತಾಂತರಿಸುವಂತೆ ಕೋರಿ ಸೌದಿ ಅರೇಬಿಯಾಕ್ಕೆ ಮನವಿ ಸಲ್ಲಿಸಲಾಯಿತು.

ಭಾರತದ ಕೋರಿಕೆ ಆಧರಿಸಿ ಜೇಮ್ಸ್ ವಿರುದ್ಧ ಸೌದಿ ಅರೇಬಿಯಾದ ನ್ಯಾಯಾಲಯದಲ್ಲಿ ವಿಚಾರಣೆಗಳು ನಡೆದವು. ನವೆಂಬರ್ 11, 2018ರಂದು ದುಬೈ ನ್ಯಾಯಾಲಯವು ವಿಚಾರಣೆಗಾಗಿ ಆರೋಪಿಯನ್ನು ಭಾರತಕ್ಕೆ ಹಸ್ತಾಂತರಿಸಲು ಸಮ್ಮತಿಸಿತು. ಇದೀಗ ಮೈಕೆಲ್ ಜೇಮ್ಸ್ ಭಾರತದಲ್ಲಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.