ADVERTISEMENT

ಔರಂಗಜೇಬ್‌ ಸಮಾಧಿ ವಿವಾದ ಅನಗತ್ಯ: ಆರ್‌ಎಸ್‌ಎಸ್‌

ಪಿಟಿಐ
Published 31 ಮಾರ್ಚ್ 2025, 9:53 IST
Last Updated 31 ಮಾರ್ಚ್ 2025, 9:53 IST
<div class="paragraphs"><p>ಆರ್‌ಎಸ್‌ಎಸ್‌ ನಾಯಕ ಸುರೇಶ್‌ ಜೋಶಿ</p></div>

ಆರ್‌ಎಸ್‌ಎಸ್‌ ನಾಯಕ ಸುರೇಶ್‌ ಜೋಶಿ

   

ನಾಗ್ಪುರ: ಮೊಘಲ್ ದೊರೆ ಔರಂಗಜೇಬ್‌ ಸಮಾಧಿಯನ್ನು ತೆರವುಗೊಳಿಸಬೇಕೆಂದು ಕೆಲ ಬಲಪಂಥೀಯ ಸಂಘಟನೆಗಳು ಆಗ್ರಹಿಸಿರುವ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿದ ಆರ್‌ಎಸ್‌ಎಸ್‌ನ ಹಿರಿಯ ನಾಯಕ ಸುರೇಶ್‌ ಬಯ್ಯಾಜಿ ಜೋಷಿ, ‘ಅನಗತ್ಯವಾಗಿ ಈ ವಿಚಾರವನ್ನು ಮುನ್ನಲೆಗೆ ತರಲಾಗಿದೆ’ ಎಂದು ಹೇಳಿದ್ದಾರೆ.

‘ಔರಂಗಜೇಬ್‌ ಅವರು ಭಾರತದಲ್ಲಿ ಮರಣ ಹೊಂದಿದ್ದರು. ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ಅವರ ಸಮಾಧಿ ನಿರ್ಮಿಸಲಾಗಿದೆ. ಸಮಾಧಿ ಸ್ಥಳಕ್ಕೆ ಅವರ ಬಗ್ಗೆ ನಂಬಿಕೆ ಇರುವವರು ಹೋಗುತ್ತಾರೆ’ ಎಂದು ಜೋಷಿ ಸುದ್ದಿಗಾರರಿಗೆ ತಿಳಿಸಿದರು.

ADVERTISEMENT

‘ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಆದರ್ಶಪ್ರಾಯರಾಗಿದ್ದಾರೆ. ಅವರು ಅಫ್ಜಲ್‌ ಖಾನ್‌ ಅವರ ಸಮಾಧಿ ನಿರ್ಮಿಸಿದ್ದರು. ಇದು ಭಾರತೀಯರ ಉದಾರತೆ ಮತ್ತು ಭಾವೈಕ್ಯ ಮನೋಭಾವದ ಸಂಕೇತವಾಗಿದೆ’ ಎಂದರು.

ಔರಂಗಜೇಬ್‌ ಸಮಾಧಿ ವಿಚಾರದಲ್ಲಿ ಕೋಮು ದ್ವೇಷ ಹಬ್ಬಿಸಲು ಯತ್ನಿಸುತ್ತಿರುವವರ ಬಗ್ಗೆ ಭಾನುವಾರ ಕಿಡಿಕಾರಿದ್ದ ಮಹಾರಾಷ್ಟ್ರ ನವನಿರ್ಮಾಣ ಸೇನಾ ಮುಖ್ಯಸ್ಥ ರಾಜ್‌ ಠಾಕ್ರೆ ಅವರು, ‘ಜಾತಿ ಮತ್ತು ಧರ್ಮದ ಆಧಾರದಲ್ಲಿ ಇತಿಹಾಸವನ್ನು ನೋಡಬಾರದು. ಇತಿಹಾಸದ ಬಗ್ಗೆ ವಾಟ್ಸ್ಆ್ಯಪ್‌ನಲ್ಲಿ ಬರುವ ಮಾಹಿತಿಗಳನ್ನು ಜನರು ನಂಬಬಾರದು’ ಎಂದರು.

ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ತೆರವು ಮಾಡುವಂತೆ ಕೋರಿ ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ವೇಳೆ ಪವಿತ್ರ ಬರಹಗಳು ಇರುವ ‘ಚಾದರ್’ ಸುಟ್ಟುಹಾಕಲಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಮಾರ್ಚ್ 17ರಂದು ನಾಗ್ಪುರದ ಹಲವಾರು ಭಾಗಗಳಲ್ಲಿ ದೊಡ್ಡ ಪ್ರಮಾಣದ ಕಲ್ಲು ತೂರಾಟ ನಡೆದಿತ್ತು. ಕೆಲವು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.