ADVERTISEMENT

ಸಾಹಿತಿ ಅಮಿತಾವ್‌ ಘೋಷ್‌ಗೆ 54ನೇ ಜ್ಞಾನಪೀಠ ಪುರಸ್ಕಾರ

ಪಿಟಿಐ
Published 14 ಡಿಸೆಂಬರ್ 2018, 13:34 IST
Last Updated 14 ಡಿಸೆಂಬರ್ 2018, 13:34 IST
ಅಮಿತಾವ್ ಘೋಷ್‌. ಚಿತ್ರ: ರಾಯಿಟರ್ಸ್‌
ಅಮಿತಾವ್ ಘೋಷ್‌. ಚಿತ್ರ: ರಾಯಿಟರ್ಸ್‌   

ನವದೆಹಲಿ: ಆಂಗ್ಲಭಾಷೆಯ ಖ್ಯಾತ ಕಾದಂಬರಿಕಾರ ಅಮಿತಾವ್‌ ಘೋಷ್‌ ಅವರು ಈ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಸಾಹಿತ್ಯಕ್ಷೇತ್ರಕ್ಕೆ ಅವರು ನೀಡಿದ ಜೀವಮಾನದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ ಎಂದು ಆಯ್ಕೆಸಮಿತಿ ತಿಳಿಸಿದೆ.‌

‘ಅಮಿತಾವ್‌ ಘೋಷ್‌ ಯುಗಪ್ರವರ್ತಕ ಕಾದಂಬರಿಕಾರ. ಅವರ ಕಾದಂಬರಿಗಳಲ್ಲಿ ಐತಿಹಾಸಿಕ ಸನ್ನಿವೇಶಗಳನ್ನು ಆಧುನಿಕ ಕಾಲಘಟ್ಟಕ್ಕೆ ಹೋಲಿಸಿ ಸನ್ನಿವೇಶಗಳನ್ನು ಸೃಷ್ಟಿಸುತ್ತಿದ್ದರು’ ಎಂದು ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಖ್ಯಾತ ಸಾಹಿತಿ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತೆ ಪ್ರತಿಭಾ ರೇ ನೇತೃತ್ವದಲ್ಲಿ ಆಯ್ಕೆ ಸಮಿತಿ ಶುಕ್ರವಾರ ನಡೆಸಿದ ಸಭೆ ಬಳಿಕ ಈ ನಿರ್ಧಾರ ಪ್ರಕಟಿಸಿದೆ.

ADVERTISEMENT

ಘೋಷ್‌ ಅವರು,‘ಶ್ಯಾಡೋ ಲೈನ್ಸ್‌’, ‘ದಿ ಗ್ಲಾಸ್‌ ಪ್ಯಾಲೇಸ್‌’,‘ದಿ ಹಂಗ್ರಿ ಟೈಡ್‌’, ‘ಸೀ ಆಫ್‌ ಪೊಪ್ಪೀಸ್‌’,‘ರಿವರ್ಸ್‌ ಆಫ್‌ ಸ್ಮೋಕ್‌’,‘ಪ್ಲಡ್‌ ಆಫ್‌ ಫೈರ್‌’ ಮುಂತಾದ ಕಾದಂಬರಿಗಳನ್ನು ರಚಿಸಿದ್ದಾರೆ. ‘ಡಿ ಗ್ರೇಟ್‌ ಡಾಕ್ಯುಮೆಂಟ್‌’, ‘ಇನ್‌ ಆ್ಯನ್‌ ಆಂಟಿಕ್‌ ಲ್ಯಾಂಡ್‌’ ಹೆಸರಿನಲ್ಲಿ ಕೃತಿಗಳನ್ನು ರಚಿಸಿದ್ದಾರೆ.

‘ಇಂದು ನನಗೆ ಅದ್ಭುತ ದಿನ. ಈ ಪಟ್ಟಿಯಲ್ಲಿ ನನ್ನ ಹೆಸರು ಸೇರ್ಪಡೆಗೊಳ್ಳಬಹುದು ಎಂದು ಊಹಿಸಿರಲಿಲ್ಲ. ಈ ಗೌರವಕ್ಕೆ ನಾನು ವಿನೀತನಾಗಿದ್ದೇನೆ’ ಎಂದು ಟ್ವಿಟರ್‌ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

1956ರಲ್ಲಿ ಕೋಲ್ಕತ್ತದ ಬೆಂಗಾಳಿ ಹಿಂದೂ ಕುಟುಂಬದಲ್ಲಿ ಜನಿಸಿದ ಘೋಷ್‌ ಅವರು, ಸದ್ಯ ನ್ಯೂಯಾರ್ಕ್‌ನಲ್ಲಿ ಪತ್ನಿ ದೇಬೊರಾ ಬಕೆರ್‌ ಜೊತೆ ನೆಲೆಸಿದ್ದಾರೆ. ದೆಹಲಿ,ಆಕ್ಸ್‌ಫರ್ಡ್‌, ಅಲೆಕ್ಸಾಂಡ್ರಿಯಾದಲ್ಲಿ ಶಿಕ್ಷಣ ಪಡೆದಿರುವ ಘೋಷ್‌, ಬಾಂಗ್ಲಾದೇಶ, ಶ್ರೀಲಂಕಾದಲ್ಲೂ ಕೆಲಕಾಲ ನೆಲೆಸಿದ್ದರು.

‘ದಿ ಗ್ರೇಟ್‌ ಡಿರೆಂಜ್‌ಮೆಂಟ್‌; ಕ್ಲೈಮೆಟ್‌ ಚೇಂಜ್‌ ಆ್ಯಂಡ್‌ ಅನ್‌ಥಿಂಕೆಬಲ್‌, ಎ ವರ್ಕ್‌ ಆಫ್‌ ನಾನ್‌ ಫಿಕ್ಷನ್‌’ ಕೃತಿಯೂ 2016ರಲ್ಲಿ ಬಿಡುಗಡೆಗೊಂಡಿತ್ತು.

ಘೋಷ್‌ ಅವರಿಗೆ ಪದ್ಮಶ್ರೀ ಹಾಗೂ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.