ADVERTISEMENT

ಸುಧಾಮೂರ್ತಿಯವರ 70ನೇ ಜನ್ಮದಿನಕ್ಕೆ ಪೆಂಗ್ವಿನ್‌ನಿಂದ ಸಣ್ಣಕಥೆಗಳ ಸಂಕಲನ ಪ್ರಕಟ

ನವೆಂಬರ್‌ ತಿಂಗಳಲ್ಲಿ ಬಿಡುಗಡೆ

ಪಿಟಿಐ
Published 19 ಆಗಸ್ಟ್ 2020, 9:51 IST
Last Updated 19 ಆಗಸ್ಟ್ 2020, 9:51 IST
ಸುಧಾಮೂರ್ತಿ
ಸುಧಾಮೂರ್ತಿ   

ನವದೆಹಲಿ: ಇನ್ಫೋಸಿಸ್‌ ಫೌಂಡೇಷನ್‌ ಮುಖ್ಯಸ್ಥೆ, ಲೇಖಕಿ ಸುಧಾಮೂರ್ತಿ ಅವರಿಗೆ ಇವತ್ತು 70ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಈ ವಿಶೇಷ ಸಂದರ್ಭದಲ್ಲಿಅವರ ಇತ್ತೀಚಿನ ಸಣ್ಣ ಕಥೆಗಳ ಸಂಗ್ರಹದ 'ಗ್ರಾಂಡ್‌ಪೇರೆಂಟ್ಸ್‌ – ಬ್ಯಾಗ್ ಆಫ್ ಬಿಗ್‌ ಸ್ಟೋರಿಸ್‌’ಎಂಬ ಪುಸ್ತಕವನ್ನು ಪ್ರಕಟಿಸುವುದಾಗಿ ದೆಹಲಿಯ ಪೆಂಗ್ವಿನ್ ರ‍್ಯಾಂಡಮ್ ಹೌಸ್ ಇಂಡಿಯಾ ಸಂಸ್ಥೆ ಬುಧವಾರ ತಿಳಿಸಿದೆ.

ಹೊಸ ಪುಸ್ತಕದ ಮುಖಪುಟವನ್ನೂ ಬಿಡುಗಡೆ ಮಾಡಿದ ಪೆಂಗ್ವಿನ್ ಪ್ರಕಾಶನ ಸಂಸ್ಥೆ, '‌ಇದು ಸುಧಾಮೂರ್ತಿಯವರ’ ಗ್ರ್ಯಾಂಡ್‌ಮಾಸ್ ಬ್ಯಾಗ್ ಆಫ್ ಸ್ಟೋರೀಸ್‌’ ಪುಸ್ತಕ ಸರಣಿಯ ಮುಂದಿನ ಕೃತಿಯಾಗಿದ್ದು, ನವೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ತಿಳಿಸಿದೆ.

ಸುಧಾಮೂರ್ತಿಯವರು ಇಂಗ್ಲಿಷ್ ಮತ್ತು ಕನ್ನಡ ಎರಡೂ ಭಾಷೆಯಲ್ಲೂ ಹಲವು ಕಾದಂಬರಿಗಳು, ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೃತಿಗಳು, ಪ್ರವಾಸಿ ಕಥನಗಳು ಮತ್ತು ಸಣ್ಣ ಕಥೆಗಳನ್ನು ಬರೆದಿದ್ದಾರೆ. ಕೆಲವು ಜನಪ್ರಿಯ ಮಕ್ಕಳ ಕಥೆಗಳನ್ನೊಳಗೊಂಡ ಕೃತಿಗಳನ್ನು ಪ್ರಕಟಿಸಿದ್ದಾರೆ. ಈಗ ಬರಲಿರುವ ಹೊಸ ಪುಸ್ತಕದಲ್ಲೂ ಅವರ ಬಾಲ್ಯದಲ್ಲಿ ಅಜ್ಜನ ಮನೆಯಲ್ಲಿ ಕೇಳಿದ ಕಥೆಗಳ ಸಂಗ್ರಹವಾಗಿದೆ.

ADVERTISEMENT

'ಲಾಕ್‌ಡೌನ್‌ ಅವಧಿಯಲ್ಲಿ ಸುಮ್ಮನೆ ಕುಳಿತಿದ್ದಾಗ, ನಾನು 10 ರಿಂದ 12 ವರ್ಷದ ಬಾಲಕಿಯಾಗಿದ್ದಾಗ ಹೇಗಿದ್ದೆ ಎಂದು ಯೋಚಿಸುತ್ತಿದ್ದೆ. ಆ ವಯಸ್ಸಿನಲ್ಲಿ ನಾನು ಅಜ್ಜಿ ಮನೆಗೆ ಹೋಗುತ್ತಿದ್ದೆ. ಅವರಿಂದ ಕಥೆ ಕೇಳುತ್ತಿದ್ದೆ. ಅವರು ಹೇಳುತ್ತಿದ್ದ ಕಥೆಗಳಿಂದ, ಸಂಕಷ್ಟದಲ್ಲಿರುವವರಿಗೆ ಹೇಗೆ ಸಹಾಯ ಮಾಡಬೇಕೆಂಬುದನ್ನು ಕಲಿತೆ. ನನ್ನ ಬಾಲ್ಯದ ಅನುಭವ ಕಥನಗಳು ಈ ಪುಸ್ತಕದಲ್ಲಿವೆ’ ಎಂದು ಹೊಸ ಪುಸ್ತಕದ ಸಾರವನ್ನು ಸುಧಾಮೂರ್ತಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.