
ಅವಿಮುಕ್ತೇಶ್ವರಾನಂದ ಸ್ವಾಮೀಜಿ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ
ವಾರಾಣಸಿ: ‘ರಾಜ್ಯದಿಂದ ಗೋಮಾಂಸ ರಫ್ತು ನಿಲ್ಲಿಸಿ ಮತ್ತು ಗೋವನ್ನು ‘ರಾಷ್ಟ್ರ ಮಾತಾ’ ಎಂದು ಘೋಷಿಸಿ. ಈ ಮೂಲಕ ಹಿಂದೂ ಧರ್ಮದ ಕುರಿತ ತಮ್ಮ ಬದ್ಧತೆಯನ್ನು ಸಾಬೀತು ಮಾಡಿ’ ಎಂದು ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸವಾಲೆಸೆದಿದ್ದಾರೆ.
ಪ್ರಯಾಗರಾಜ್‌ನ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನಕ್ಕೆ ಅವಕಾಶ ನೀಡದ ಆಡಳಿತದ ನಡೆಯನ್ನು ಖಂಡಿಸಿ ಅವಿಮುಕ್ತೇಶ್ವರಾನಂದ ಅವರು ಶಂಕರಾಚಾರ್ಯ ಕ್ಯಾಂಪ್‌ನಲ್ಲಿ ಜನವರಿ 18ರಿಂದ ಸತ್ಯಾಗ್ರಹ ನಡೆಸಿದ್ದರು. ಬುಧವಾರ ತಮ್ಮ ಪ್ರತಿಭಟನೆಯನ್ನು ಅಂತ್ಯಗೊಳಿಸಿ ಭಾರವಾದ ಹೃದಯದಿಂದ ಅಲ್ಲಿಂದ ತೆರಳಿದ್ದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ನಾನು 11 ದಿನ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾಗ ಯಾವೊಬ್ಬ ಅಧಿಕಾರಿಯೂ ಪುಣ್ಯಸ್ನಾನ ಮಾಡುವಂತೆ ಹೇಳಲಿಲ್ಲ. ಈಗ ತುಂಬಾ ತಡವಾಗಿದೆ. ಮುಂದಿನ ವರ್ಷ ಮಾಘ ಮೇಳದ ಸಂದರ್ಭದಲ್ಲಿ ಪವಿತ್ರ ಸ್ನಾನ ಮಾಡುತ್ತೇನೆ’ ಎಂದು ಹೇಳಿದರು.
ಇದೇ ವೇಳೆ, ‘ಹಿಂದೂ ಧರ್ಮದ ಕುರಿತ ನಿಮ್ಮ ಬದ್ಧತೆಯನ್ನು ಸಾಬೀತು ಮಾಡಲು 40 ದಿನಗಳ ಒಳಗಾಗಿ ಗೋ ಹತ್ಯೆಯನ್ನು ನಿಲ್ಲಿಸಿ. ಆಗ ನೀವೊಬ್ಬ ಹಿಂದೂ ಅನುಯಾಯಿ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.