ADVERTISEMENT

ದೆಹಲಿಯಲ್ಲಿ ತಗ್ಗಿದ ಮಾಲಿನ್ಯ: ಪಟಾಕಿ ಸುಡಬೇಡಿ– ಸರ್ಕಾರ ಸೂಚನೆ

ಪಿಟಿಐ
Published 11 ನವೆಂಬರ್ 2023, 14:16 IST
Last Updated 11 ನವೆಂಬರ್ 2023, 14:16 IST
ದೆಹಲಿಯ ಸರ್ದಾರ್‌ ಬಜಾರ್‌ನಲ್ಲಿ ದೀಪಾವಳಿ ಹಬ್ಬದ ಖರೀದಿಯಲ್ಲಿ ಮಗ್ನರಾಗಿರುವ ಜನ (ಪಿಟಿಐ)
ದೆಹಲಿಯ ಸರ್ದಾರ್‌ ಬಜಾರ್‌ನಲ್ಲಿ ದೀಪಾವಳಿ ಹಬ್ಬದ ಖರೀದಿಯಲ್ಲಿ ಮಗ್ನರಾಗಿರುವ ಜನ (ಪಿಟಿಐ)   

ನವದೆಹಲಿ (ಪಿಟಿಐ): ಕಳೆದೆರಡು ವಾರಗಳಿಂದ ವಾಯುಮಾಲಿನ್ಯದ ಆಗರವಾಗಿದ್ದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಬೆಳಗ್ಗೆ ವಾತಾವರಣ ತಿಳಿಯಾಗಿತ್ತು. ಶುಕ್ರವಾರ ಸುರಿದ ಅಕಾಲಿಕ ಮಳೆಯಿಂದಾಗಿ ಪರಿಸ್ಥಿತಿ ಗಣನೀಯ ಪ್ರಮಾಣದಲ್ಲಿ ಸುಧಾರಣೆ ಕಂಡಿದೆ. ಹಲವು ದಿನಗಳಿಂದ ಅವರಿಸಿಕೊಂಡಿದ್ದ ವಿಷಪೂರಿತ ದಟ್ಟ ಮಂಜು ನಿವಾರಣೆಯಾಗಿ, ಸೂರ್ಯನ ಪ್ರಖರ ಬಿಸಿಲು ಕೂಡ ಆವರಿಸಿತ್ತು.  

ಗುರುವಾರ ಸರಾಸರಿ 437 ಇದ್ದ ದೆಹಲಿಯ ಎಕ್ಯುಐ (ವಾಯು ಗುಣಮಟ್ಟ ಸೂಚ್ಯಂಕ) ಶನಿವಾರದ ಹೊತ್ತಿಗೆ ಸುಧಾರಣೆ ಕಂಡು 219ಕ್ಕೆ ಇಳಿದಿತ್ತು.  ಕಳೆದ 30–32ರ ಗಂಟೆಗಳಲ್ಲಿ ರಾಜಧಾನಿ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಸುರಿದ ಅಕಾಲಿಕ ಮಳೆ ಮತ್ತು ವೇಗವಾದ ಗಾಳಿಯು ದೆಹಲಿಯ ವಾಯುಮಾಲಿನ್ಯ ನಿವಾರಣೆಗೆ ಗಣನೀಯ ಕೊಡುಗೆ ನೀಡಿದೆ. 

ದೆಹಲಿಯ ಜತೆಗೆ, ಗುರುಗ್ರಾಮ (181), ಗಜಿಯಾಬಾದ್‌ (157), ಗ್ರೇಟರ್‌ ನೋಯ್ಡಾ (131), ನೋಯ್ಡಾ (148) ಮತ್ತು ಫರೀದಾಬಾದ್‌ನ (174) ವಾಯುಗುಣಮಟ್ಟವೂ ವೃದ್ಧಿಯಾಗಿದೆ.

ADVERTISEMENT

ಸೂಚನೆ ನೀಡಿದ ಇಲಾಖೆ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ವಾಯುಗುಣಮಟ್ಟ ಕುಸಿಯುವ ಭೀತಿ ಇರುವ ಕಾರಣಕ್ಕೆ ಆರೋಗ್ಯ ಇಲಾಖೆಯು ನಾಗರಿಕರಿಗೆ ಕೆಲ ಸಲಹೆ ಸೂಚನೆಗಳನ್ನು ನೀಡಿದೆ.  

ಪಟಾಕಿಗಳನ್ನು ಸಿಡಿಸಬಾರದು ಮತ್ತು ಅನಗತ್ಯವಾಗಿ ಹೊರಗೆ ಸಂಚರಿಸಬಾರದು ಎಂದು ಸಲಹೆ ನೀಡಿದೆ. ಗರ್ಭಿಣಿಯರು, ಆರೋಗ್ಯ ಸಮಸ್ಯೆಯುಳ್ಳವರು, ಮಕ್ಕಳು, ಹಿರಿಯರು ಹೆಚ್ಚು ಜಾಗರೂಕರಾಗಿರಬೇಕು. ಗಾಳಿಗೆ ಹೆಚ್ಚು ಒಡ್ಡಿಕೊಳ್ಳಬಾರದು ಎಂದು ಹೇಳಿದೆ.

ಮಾಲಿನ್ಯ ಹೆಚ್ಚಾದ ದಿನಗಳಲ್ಲಿ ಬೆಳಗ್ಗೆ ಮತ್ತು ಸಂಜೆ ವಾಯುವಿಹಾರಕ್ಕೆ ತೆರಳಬಾರದು. ಜಾಗಿಂಗ್‌, ಓಟ, ವ್ಯಾಯಾಮ ಮಾಡಬಾರದು. ಸಿಗರೇಟು ಸೇದಬಾರದು. ಸೊಳ್ಳೆ ಕಾಯಿಲ್‌, ಅಗರಬತ್ತಿ, ಧೂಪ, ಕಟ್ಟಿಗೆ, ಎಲೆ, ಕೂಳೆ, ತ್ಯಾಜ್ಯ ಸುಡಬಾರದು ಎಂದು ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.