ADVERTISEMENT

ಅಯೋಧ್ಯೆ ಪ್ರಕರಣ: ಇಡೀ ಪ್ರದೇಶ ನೀಡಲು ಹಿಂದೂ ಕಕ್ಷಿದಾರರ ಪಟ್ಟು

ಪರಿಹಾರ ಸೂತ್ರ ಕೇಳಿದ್ದ ಸುಪ್ರೀಂ ಕೋರ್ಟ್‌ಗೆ ಕಕ್ಷಿದಾರರ ಉತ್ತರ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2019, 20:00 IST
Last Updated 19 ಅಕ್ಟೋಬರ್ 2019, 20:00 IST
   

ನವದೆಹಲಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸುವ ಸಲುವಾಗಿ ವಿವಾದಿತ 2.77 ಎಕರೆ ಭೂಮಿ ಹಾಗೂ ಸ್ವಾಧೀನಪಡಿಸಿಕೊಂಡಿರುವ ಇತರೆ ಜಾಗವನ್ನು ತಮಗೆ ನೀಡುವಂತೆ ಹಿಂದೂ ಕಕ್ಷಿದಾರರು ಸುಪ್ರೀಂ ಕೋರ್ಟ್‌ಗೆ ಸೋಮವಾರ ಮನವಿ ಮಾಡಿದ್ದಾರೆ.

‘ಪುರಾತತ್ವ ಸಾಕ್ಷ್ಯಗಳ ಪ್ರಕಾರ, ವಿವಾದಿತ ಜಾಗದಲ್ಲಿ ರಾಮಮಂದಿರ ಇತ್ತು’ ಎಂದು ಪ್ರತಿಪಾದಿಸಿರುವ ರಾಮ್‌ಲಲ್ಲಾ ವಿರಾಜಮಾನ್, ‘ಮಸೀದಿಯನ್ನು ಮರು ನಿರ್ಮಿಸುವ ಮುಸ್ಲಿಂ ಕಕ್ಷಿದಾರರ ವಾದವು ನ್ಯಾಯ ಸಮ್ಮತವಲ್ಲ. ಅವರ ಕೋರಿಕೆಯು ಹಿಂದೂ ಧರ್ಮ, ಮುಸ್ಲಿಂ ಕಾನೂನು ಹಾಗೂ ನ್ಯಾಯ, ಸಮಾನತೆ, ಆತ್ಮಸಾಕ್ಷಿಗೆ ವಿರುದ್ಧವಾದುದು’ ಎಂದು ಪ್ರತಿಪಾದಿಸಿದೆ.

2010ರ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯನ್ನು ಅಕ್ಟೋಬರ್ 16ರಂದು ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ತೀರ್ಪನ್ನು ಕಾಯ್ದಿರಿಸಿದೆ. ಒಂದು ವೇಳೆ ತಮ್ಮ ಪರವಾಗಿ ತೀರ್ಪು ಬರದಿದ್ದಲ್ಲಿ, ಏನು ಪರಿಹಾರ ಬಯಸುತ್ತೀರಿ ಎಂದು ತಿಳಿಸುವ ಟಿಪ್ಪಣಿಯನ್ನು ಸಲ್ಲಿಸುವಂತೆ ಕೋರ್ಟ್ ಎಲ್ಲಾ ಕಕ್ಷಿದಾರರಿಗೆ ಸೂಚಿಸಿತ್ತು.

ADVERTISEMENT

ಆದರೆ, ಯಾವುದೇ ಪರಿಹಾರ ಸೂಚಿಸಲು ರಾಮ್‌ಲಲ್ಲಾ ವಿರಾಜಮಾನ್‌ ಹಾಗೂ ನಿರ್ಮೋಹಿ ಅಖಾಡ ಪರ ವಕೀಲರು ನಿರಾಕರಿಸಿದ್ದಾರೆ. ‘ರಾಮನ ಜನ್ಮಸ್ಥಾನದಲ್ಲಿ ರಾಮಮಂದಿರ ಬಿಟ್ಟು ಬೇರೆ ಆಯ್ಕೆ ಇಲ್ಲ. ಹಾಗೇನಾದರೂ ಸೂಚಿಸಿದರೆ, ಅದು ದೇವರಿಗೆ ವಿರುದ್ಧವಾಗಿ ನಡೆದುಕೊಂಡಂತಾಗುತ್ತದೆ’ ಎಂದು ವಕೀಲರಾದ ಕೆ. ಪರಾಶರನ್ ಹಾಗೂ ಸಿ.ಎಸ್. ವೈದ್ಯನಾಥನ್ ಅಭಿಪ್ರಾಯಪಟ್ಟಿದ್ದಾರೆ.

‘ಖಾಲಿ ಜಾಗದಲ್ಲಿ ಮಸೀದಿ ನಿರ್ಮಿಸಲಾಗಿದೆ ಎಂದು ಹೇಳಿಕೊಂಡಿರುವ ಮುಸ್ಲಿಂ ಕಕ್ಷಿದಾರರು ಯಾವುದೇ ಪರಿಹಾರ ಕೇಳಲು ಅರ್ಹರಲ್ಲ. ವಿವಾದಿತ ಜಾಗದಲ್ಲಿ ಮಂದಿರದ ಕುರುಹುಗಳು ಪತ್ತೆಯಾಗಿವೆ’ ಎಂದು ಹಿಂದೂ ಕಕ್ಷಿದಾರರ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

‘ಯಾವುದೇ ಕಾರಣಕ್ಕೂ ಪರಿಹಾರ ಸೂತ್ರ ಸೂಚಿಸುವುದಿಲ್ಲ. ವಿವಾದಿತ ಜಾಗ ಸೇರಿದಂತೆ ಸ್ವಾಧೀನದಲ್ಲಿರುವ ಇಡೀ ಪ್ರದೇಶವನ್ನು ಹಿಂದೂಗಳ ಆಶಯಕ್ಕೆ ತಕ್ಕಂತೆ ಬಳಸಿಕೊಳ್ಳಲಾಗುವುದು’ ಎಂದಿರುವ ಹಿಂದೂ ಕಕ್ಷಿದಾರರು, ಸಂಪೂರ್ಣ ನ್ಯಾಯ ಒದಗಿಸುವ ತೀರ್ಪು ನೀಡುವಂತೆ ಕೇಳಿಕೊಂಡಿದ್ದಾರೆ.

ಮತ್ತೊಬ್ಬ ಕಕ್ಷಿದಾರರಾದ ‘ಅಖಿಲ ಭಾರತೀಯ ಶ್ರೀರಾಮ ಜನ್ಮಭೂಮಿ ಪುನರುದ್ಧಾರ ಸಮಿತಿ’ ಕೂಡಾ ಹಿಂದೂ ಕಕ್ಷಿದಾರರ ಪರ ತೀರ್ಪು ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದೆ.

ಸುನ್ನಿ ವಕ್ಫ್ ಮಂಡಳಿ ಸೇರಿದಂತೆ ಮುಸ್ಲಿಂ ಕಕ್ಷಿದಾರರು ತಮ್ಮ ಪರಿಹಾರ ಸೂತ್ರವನ್ನು ಸಲ್ಲಿಸಿದ್ದರೂ, ಅದು ಮುಚ್ಚಿದ ಲಕೋಟೆಯಲ್ಲಿದೆ.

ತಕ್ಷಣ ಮಸೀದಿ ನಿರ್ಮಾಣ ಇಲ್ಲ?
ಅಯೋಧ್ಯೆ: ಒಂದು ವೇಳೆ ಮುಸ್ಲಿಮರ ಪರವಾಗಿ ತೀರ್ಪು ಪ್ರಕಟವಾದಲ್ಲಿ, ಸಾಮರಸ್ಯ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣ ಕೆಲಸವನ್ನು ಮುಂದೂಡಬೇಕು ಎಂದು ಕೆಲವು ಮುಸ್ಲಿಂ ಅರ್ಜಿದಾರರು ಅಭಿಪ್ರಾಯಪಟ್ಟಿದ್ದಾರೆ.

‘ಶಾಂತಿ ಮತ್ತು ಕೋಮು ಸಾಮರಸ್ಯಕ್ಕೆ ಒತ್ತು ನೀಡುವುದು ನಮ್ಮ ಆದ್ಯತೆ. ತಕ್ಷಣ ಮಸೀದಿ ನಿರ್ಮಿಸುವ ಬದಲು ಸುತ್ತಲೂ ಕಾಂಪೌಂಡ್ ನಿರ್ಮಿಸುವುದು ಸೂಕ್ತ’ ಎಂದು ಅರ್ಜಿದಾರರಾದ ಹಾಜಿ ಮಹಬೂಬ್ ಹೇಳಿದ್ದಾರೆ.

‘ದೇಶದ ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹೇಳಿರುವ ನನ್ನ ಈ ಅಭಿಪ್ರಾಯ ವೈಯಕ್ತಿಕವಾದುದು. ಈ ಪ್ರಸ್ತಾಪವನ್ನು ಇತರ ಕಕ್ಷಿದಾರರ ಜೊತೆ ಚರ್ಚಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಇವರ ಮಾತಿಗೆ ಸ್ಥಳೀಯ ಜಾಮಿಯತ್ ಉಲೇಮಾ ಹಿಂದ್‌ನ ಅಧ್ಯಕ್ಷದ ಮುಫ್ತಿ ಹಸಬುಲ್ಲಾ ಬಾದ್‌ಶಾ ಖಾನ್ ದನಿಗೂಡಿಸಿದ್ದಾರೆ. ಮಸೀದಿ ನಿರ್ಮಾಣ ಮುಂದೂಡಿಕೆಯನ್ನು ಬೆಂಬಲಿಸುವುದಾಗಿ ಮತ್ತೊಬ್ಬ ಕಕ್ಷಿದಾರ ಮೊಹಮ್ಮದ್ ಉಮರ್ ಹೇಳಿದ್ದಾರೆ.

**

‘ಪೂಜೆಗೆ ಸಂಪೂರ್ಣ ಅಧಿಕಾರ ನೀಡಬೇಕು. ಬೇರೆ ಕಟ್ಟಡ ನಿರ್ಮಿಸಲು ಅವಕಾಶ ನೀಡಿದರೆ ಅದು ನಮ್ಮ ಆಶಯಕ್ಕೆ ವಿರುದ್ಧ.
-ಗೋಪಾಲ ಸಿಂಗ್ ವಿಶಾರದ, ಹಿಂದೂ ಅರ್ಜಿದಾರರು

**

ತೀರ್ಪು ಬರಲಿ. ಕೋಮು ಸಾಮರಸ್ಯ ಕೆಡಿಸುವ ಯಾವುದೇ ಯತ್ನಕ್ಕೆ ಅವಕಾಶ ನೀಡುವುದಿಲ್ಲ.
-ಇಕ್ಬಾಲ್ ಅನ್ಸಾರಿ, ಮುಸ್ಲಿಂ ಕಕ್ಷಿದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.