ADVERTISEMENT

ರಾಮಮಂದಿರ ನಿರ್ಮಾಣ: ಪರ್ಯಾಯ ಮಾರ್ಗಗಳ ಬಗ್ಗೆ ಚಿಂತನೆ

ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭರವಸೆ

ಪಿಟಿಐ
Published 30 ಅಕ್ಟೋಬರ್ 2018, 14:41 IST
Last Updated 30 ಅಕ್ಟೋಬರ್ 2018, 14:41 IST
ಯೋಗಿ ಆದಿತ್ಯನಾಥ್‌
ಯೋಗಿ ಆದಿತ್ಯನಾಥ್‌   

ಲಖನೌ: ‘ಸರಿಯಾದ ಸಮಯದಲ್ಲಿ ನ್ಯಾಯ ನೀಡದಿದ್ದರೆ, ಅದು ಅನ್ಯಾಯ ಮಾಡಿದಂತಾಗಿದೆ’ ಎಂದು ಹೇಳುವ ಮೂಲಕ ಅಯೋಧ್ಯೆ ವಿಚಾರ ಸಂಬಂಧ ಸುಪ್ರೀಂ ಕೋರ್ಟ್‌ ವಿಳಂಬ ನಡೆಯ ಬಗ್ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ರಾಮಮಂದಿರ ವಿಷಯದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗಾಗಿ ಸಾಧು–ಸಂತರು ತಾಳ್ಮೆಯಿಂದ ಕಾದಿದ್ದಾರೆ. ಮಾತುಕತೆ ಮೂಲಕ ವಿವಾದ ಬಗೆಹರಿಸುವುದು ಅತ್ಯುತ್ತಮ ಆಯ್ಕೆ.ಈ ಇದು ಸಾಧ್ಯವಾಗದಿದ್ದರೆ, ಬೇರೆ ಮಾರ್ಗಗಳಿವೆ.ಪರ್ಯಾಯ ಆಯ್ಕೆಗಳ ಬಗ್ಗೆ ಚಿಂತಿಸಿದ್ದು, ಈ ಬಗ್ಗೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಶೀಘ್ರ ಇತ್ಯರ್ಥವಾಗಲಿ:‘ ಬಹುಸಂಖ್ಯಾತರ ಭಾವನೆಗಳಿಗೆ ಬೆಲೆನೀಡಿ, ಶಾಂತಿ ಹಾಗೂ ಭ್ರಾತೃತ್ವದ ದೃಷ್ಟಿಯಿಂದ ರಾಮಜನ್ಮಭೂಮಿ– ಬಾಬ್ರಿ ಮಸೀದಿ ಭೂಮಿ ವಿವಾದವನ್ನು ಆದಷ್ಟು ಬೇಗ ಇತ್ಯರ್ಥಪಡಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

ADVERTISEMENT

‘ಈಗಿನ ಸ್ಥಿತಿಯಲ್ಲಿ ಅಂತಹ ಯಾವುದೇ ಸಾಧ್ಯತೆಗಳಯು ಕಾಣುತ್ತಿಲ್ಲ, ಈ ಪ್ರಕರಣದ ವಿಚಾರಣೆ ಶೀಘ್ರ ನಡೆಸುವಂತೆ ಉತ್ತರಪ್ರದೇಶ ಸರ್ಕಾರದ ವಕೀಲರು ಸುಪ್ರೀಂಕೋರ್ಟ್‌ಗೆ ಮನವಿ ಮಾಡಲಿದ್ದಾರೆ ಎಂದು ತಿಳಿಸಿದರು.

‘ಸುಪ್ರೀಂ ಕೋರ್ಟ್‌ ಗ್ರೇಟ್‌’: ‘1993ರ ಮುಂಬೈ ಸ್ಫೋಟದ ಅಪರಾಧಿ ಯಾಕೂಬ್‌ ಮೆಮನ್‌ಗೆ ವಿಧಿಸಲಾದ ಗಲ್ಲುಶಿಕ್ಷೆ ಮುಂದೂಡುವಂತೆ ಕೋರಿ ಮೇಲ್ಮನವಿ ವಿಚಾರಣೆಗೆ 2014ರ ಜುಲೈ 29ರ ಮಧ್ಯರಾತ್ರಿ ಸುಪ್ರೀಂ ಕೋರ್ಟ್‌ ತೆರೆಯುತ್ತದೆ. ಆದರೆ ಕೋಟ್ಯಂತರ ಭಾರತೀಯರು ಕಾತರದಿಂದ ನಿರೀಕ್ಷಿಸುತ್ತಿರುವ ರಾಮಮಂದಿರ ವಿಚಾರದಲ್ಲಿ ತನಗೆ ಬೇಕಾದಂತೆ ದಿನ ನಿಗದಿಗೊಳಿಸುತ್ತದೆ. ಸುಪ್ರೀಂ ಕೋರ್ಟ್‌ ನಿಜಕ್ಕೂ ಗ್ರೇಟ್‌’ ಎಂದು ಹರಿಯಾಣದ ಸಚಿವ ಅನಿಲ್‌ ವಿಜ್‌ ಲೇವಡಿ ಮಾಡಿದ್ದಾರೆ.

‘ಅಯೋಧ್ಯೆಯ ರಾಮಮಂದಿರ– ಬಾಬರಿ ಮಸೀದಿ ನಿವೇಶನವೂ ತನ್ನ ಆದ್ಯತೆ ಅಲ್ಲ, 2019ರ ಜನವರಿ ಮೊದಲ ವಾರದಲ್ಲಿ ಸೂಕ್ತ ಪೀಠವು ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲಿದೆ’ ಎಂದು ರಂಜನ್‌ ಗೊಗೊಯಿ ನೇತೃತ್ವದ ನ್ಯಾಯಪೀಠ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.