ADVERTISEMENT

ಅಯೋಧ್ಯೆ ಭೂ ವಿವಾದ: ಸುಪ್ರೀಂಕೋರ್ಟ್‌ನಲ್ಲಿ ಇಂದು ವಿಚಾರಣೆ ಸಾಧ್ಯತೆ

ಏಜೆನ್ಸೀಸ್
Published 29 ಅಕ್ಟೋಬರ್ 2018, 2:38 IST
Last Updated 29 ಅಕ್ಟೋಬರ್ 2018, 2:38 IST
   

ನವದೆಹಲಿ: ಅಯೋಧ್ಯೆಯ ವಿವಾದಿತ ಭೂಪ್ರದೇಶವನ್ನುನಿರ್ಮೋಹಿ ಅಖಾಡ, ರಾಮ ಲಲ್ಲಾ ಮತ್ತು ಸುನ್ನಿ ವಕ್ಫ್‌ ಮಂಡಳಿಗೆ ಸಮನಾಗಿ ಹಂಚಿಕೆ ಮಾಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಇಂದು ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ, ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌, ಕೆ.ಎಂ. ಜೋಸೆಫ್‌ ಅವರನ್ನೊಳಗೊಂಡ ನ್ಯಾಯಪೀಠ ವಿಚಾರಣೆ ಕೈಗೆತ್ತಿಕೊಳ್ಳಲಿದೆ ಎನ್ನಲಾಗಿದೆ.

ವಿವಾದಿತ ಭೂಪ್ರದೇಶವನ್ನು ಹಂಚಿಕೆ ಮಾಡಿ 2010ರಲ್ಲಿ ಅಲಹಾಬಾದ್‌ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಹಿಂದೂ ಮತ್ತು ಮುಸ್ಲಿಂ ಧಾರ್ಮಿಕ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿವೆ.

ADVERTISEMENT

ಅಯೋಧ್ಯೆಯ ರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದವನ್ನು ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠಕ್ಕೆ ಶಿಫಾರಸು ಮಾಡಬೇಕು ಎಂಬ ಮನವಿಯನ್ನು ಸುಪ್ರೀಂ ಕೋರ್ಟ್ ಸೆಪ್ಟೆಂಬರ್ 27ರಂದು ತಿರಸ್ಕರಿಸಿತ್ತು. ಇದರಿಂದ ವಿವಾದಿತ ಭೂಪ್ರದೇಶಕ್ಕೆ ಸಂಬಂಧಿಸಿದ ವಿಚಾರಣೆ ಹಾದಿ ಸುಗಮವಾಗಿತ್ತು. ಈ ಹಿಂದೆ 1994ರಲ್ಲಿ ಇಸ್ಮಾಯಿಲ್‌ ಫಾರೂಕಿ ಪ್ರಕರಣದಲ್ಲಿ ನೀಡಿದ್ದ ‘ಮಸೀದಿಯು ಇಸ್ಲಾಂ‌ ಧರ್ಮದ ಅಂತರ್ಗತ ಅಂಶವಲ್ಲ’ ಎಂಬ ತೀರ್ಪನ್ನು ಮರು ಪರಿಶೀಲಿಸುವ ಬೇಡಿಕೆಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ (ಈಗ ನಿವೃತ್ತರಾಗಿದ್ದಾರೆ) ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಸೆಪ್ಟೆಂಬರ್ 27ರಂದು 2:1 ಬಹುಮತದಲ್ಲಿ ತಳ್ಳಿ ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.