ADVERTISEMENT

ಅಯೋಧ್ಯೆ: ಜೂನ್‌ 5ಕ್ಕೆ ಏಳು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 15:42 IST
Last Updated 28 ಮೇ 2025, 15:42 IST
ಅಯೋಧ್ಯೆಯ ರಾಮಮಂದಿರ
ಅಯೋಧ್ಯೆಯ ರಾಮಮಂದಿರ   

ಲಖನೌ: ಅಯೋಧ್ಯೆಯ ರಾಮಮಂದಿರ ಸಂಕೀರ್ಣದೊಳಗೆ ಏಳು ವಿಗ್ರಹಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಜೂನ್‌ 5ರಿಂದ ನಡೆಯಲಿದೆ. ಈ ಮೂಲಕ ಅಯೋಧ್ಯೆ ಮತ್ತೊಂದು ಐತಿಹಾಸಿಕ ಕ್ಷಣಕ್ಕೆ ಸಜ್ಜಾಗುತ್ತಿದೆ.

‘ಈ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿವೆ. ಜೂನ್‌ 3ರಿಂದ ವಿಧಿ–ವಿಧಾನಗಳಿಗೆ ಚಾಲನೆ ದೊರೆಯಲಿದೆ. ಜೂನ್‌ 5 ಮತ್ತು 7ರಂದು ವಿಗ್ರಹಗಳ ಪ್ರತಿಷ್ಠಾಪನಾ ಕಾರ್ಯ ನಡೆಯಲಿವೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್‌ ರಾಯ್‌ ಬುಧವಾರ ತಿಳಿಸಿದರು.

ಜೂನ್‌ ಐದರಂದು ನಡೆಯುವ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಪಾಲ್ಗೊಳ್ಳಲಿದ್ದಾರೆ. ದೇಶದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದಾರ್ಶನಿಕರು ಮತ್ತು ಸಂತರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿದರು.

ADVERTISEMENT

‘ಜೂನ್‌ 5 ಶುಭದಿನವಾಗಿದ್ದು, ಅಂದು ಗಂಗಾ ದಸರಾ ಉತ್ಸವವನ್ನು ಆಚರಿಸಲಾಗುತ್ತದೆ. ಹಿಂದೂ ಪುರಾಣದ ಪ್ರಕಾರ, ಇದು ಗಂಗೆಯು ಭೂಮಿಗೆ ಬಂದ ಸುದಿನ’ ಎಂದು ಅವರು ವಿವರಿಸಿದರು. 

ರಾಮ ಮಂದಿರದ ಮೊದಲ ಮಹಡಿಯಲ್ಲಿರುವ ಶೇಷಾವತಾರ ಮಂದಿರದಲ್ಲಿ ಲಕ್ಷ್ಮಣನ (ರಾಮನ ಕಿರಿಯ ಸಹೋದರ) ವಿಗ್ರಹ ಪ್ರತಿಷ್ಠಾಪಿಸಲಾಗುವುದು. ಬಳಿಕ ಏಳು ದೇಗುಲಗಳಲ್ಲಿ ಏಳು ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗುವುದು ಎಂದು ಅವರು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.