ADVERTISEMENT

ರಾಜಧಾನಿಯಲ್ಲಿ ಮಂದಿರ ನಿರ್ಮಾಣ ಬೇಡಿಕೆ ಪ್ರತಿಧ್ವನಿ;ಅಧಿಕಾರಸ್ಥರ ವಿರುದ್ಧ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2018, 20:45 IST
Last Updated 9 ಡಿಸೆಂಬರ್ 2018, 20:45 IST
   

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಅಭಿಯಾನ ರಾಜಧಾನಿ ದೆಹಲಿ ತಲುಪಿದೆ. ಕೊಟ್ಟ ಭರವಸೆಯನ್ನು ಈಡೇರಿಸಿಲ್ಲ ಎಂದು ಆರೋಪಿಸಿ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತು ಬಿಜೆಪಿಯ ವಿರುದ್ಧವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಮುಖಂಡರು ಹರಿಹಾಯ್ದರು. ಜನರ ಭಾವನೆಗಳನ್ನು ಆಲಿಸುವಂತೆ ಸುಪ್ರೀಂ ಕೋರ್ಟ್‌ಗೆ ಕರೆಕೊಟ್ಟರು.

ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಎರಡು ದಿನ ಮೊದಲು ರಾಮಲೀಲಾ ಮೈದಾನದಲ್ಲಿ ಈ ಕಾರ್ಯಕ್ರಮ ನಡೆಯಿತು. ನ್ಯಾಯಾಲಯ ಅಲ್ಲ, ಜನರೇ ಸರ್ವೋನ್ನತ. ಹಾಗಾಗಿ ಮಂದಿರ ನಿರ್ಮಿಸುವುದಕ್ಕಾಗಿ ಕಾನೂನು ಪ್ರಕ್ರಿಯೆಯನ್ನು ಕಡೆಗಣಿಸಿ ಶಾಸನ ರೂಪಿಸಬೇಕು ಎಂದು ವಿಎಚ್‌ಪಿ ಮುಖಂಡರು ಒತ್ತಾಯಿಸಿದರು.

‘ಈಗ ಅಧಿಕಾರದಲ್ಲಿ ಇರುವವರು ರಾಮ ಮಂದಿರ ನಿರ್ಮಿಸುವ ಭರವಸೆ ಕೊಟ್ಟಿದ್ದರು. ಅವರು ಈಗ ಜನರ ಭಾವನೆಗಳಿಗೆ ಬೆಲೆ ಕೊಡಬೇಕು. ಮಂದಿರ ನಿರ್ಮಾಣದ ಭರವಸೆಯನ್ನು ಈಡೇರಿಸಬೇಕು. ಅವರಿಗೆ ಜನರ ಭಾವನೆಗಳ ಅರಿವಿದೆ. ನಾವು ಭಿಕ್ಷೆ ಬೇಡುತ್ತಿಲ್ಲ, ನಮ್ಮ ಭಾವನೆಗಳನ್ನು ಅಭಿವ್ಯಕ್ತಿಸುತ್ತಿದ್ದೇವೆ. ದೇಶಕ್ಕೆ ರಾಮರಾಜ್ಯ ಬೇಕು’ ಎಂದು ವಿಎಚ್‌ಪಿ ಮುಖಂಡ ಭಯ್ಯಾಜಿ ಜೋಷಿ ಹೇಳಿದರು.

ADVERTISEMENT

‘ಯಾವುದೇ ಸಮುದಾಯದ ಜತೆಗೆ ನಾವು ಸಂಘರ್ಷಕ್ಕೆ ಇಳಿದಿಲ್ಲ. ನಮ್ಮ ಭಾವನೆಗಳು ಏನು ಎಂಬುದನ್ನಷ್ಟೇ ಹೇಳುತ್ತಿದ್ದೇವೆ. ರಾಮ ಮಂದಿರ ನಿರ್ಮಾಣಕ್ಕೆ ಇರುವ ಏಕೈಕ ದಾರಿ ಶಾಸನ ರಚನೆ ಮಾತ್ರ. ಮಂದಿರ ನಿರ್ಮಾಣದ ಭರವಸೆ ಈಡೇರುವ ತನಕ ಅಭಿಯಾನ ನಿಲ್ಲದು’ ಎಂದು ಭಯ್ಯಾಜಿ ಎಚ್ಚರಿಕೆ ಕೊಟ್ಟರು.

ವಿಎಚ್‌ಪಿ ಅಧ್ಯಕ್ಷ ವಿಷ್ಣು ಸದಾಶಿವ ಕೊಕಜೆ ಅವರೂ ಭಯ್ಯಾಜಿ ಅವರ ಅಭಿಪ್ರಾಯವನ್ನೇ ಧ್ವನಿಸಿದರು. ಪ್ರಜಾಪ್ರಭುತ್ವದಲ್ಲಿ ಜನರ ಭಾವನೆಗಳು ಶ್ರೇಷ್ಠವೇ ಹೊರತು ಸುಪ್ರೀಂ ಕೋರ್ಟ್‌ ಅಥವಾ ಇನ್ನಾವುದೇ ಕೋರ್ಟ್‌ ಅಲ್ಲ ಎಂದರು.

ಅತೃಪ್ತಿಯ ಮೂಲ

ಅಯೋಧ್ಯೆಯ ವಿವಾದಾತ್ಮಕ ಬಾಬರಿ ಮಸೀದಿ–ರಾಮಮಂದಿರ ನಿವೇಶನ ವಿವಾದದ ವಿಚಾರಣೆಯನ್ನು ಯಾವಾಗ ಆರಂಭಿಸಬೇಕು ಎಂಬುದನ್ನು ಮುಂದಿನ ಜನವರಿಯಲ್ಲಿ ನಿರ್ಧರಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿತ್ತು. ಅದಾದ ಬಳಿಕ ಸಂಘ ಪರಿವಾರದ ಸಂಘಟನೆಗಳು ಸುಪ್ರೀಂ ಕೋರ್ಟ್‌ ನಿರ್ಧಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿವೆ.

ನ್ಯಾಯಾಂಗವನ್ನು ನಿರ್ಲಕ್ಷಿಸಿ ಶಾಸನ ರೂಪಿಸಿ ರಾಮ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸುತ್ತಿವೆ.

* ನ್ಯಾಯಾಂಗದ ಬಗ್ಗೆ ದೇಶದಲ್ಲಿ ಅಪನಂಬಿಕೆ ಬೆಳೆದರೆ ಆ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗಲಾಗದು. ಈ ಅಂಶವನ್ನು ಸುಪ್ರೀಂ ಕೋರ್ಟ್‌ ಗಣನೆಗೆ ತೆಗೆದುಕೊಳ್ಳಬೇಕು

-ಭಯ್ಯಾಜಿ ಜೋಷಿ, ವಿಎಚ್‌ಪಿ ಮುಖಂಡ

* ರಾಮ ಮಂದಿರ ನಿರ್ಮಾಣದ ಭರವಸೆಯನ್ನು ಈಡೇರಿಸದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಕುಳಿತಲ್ಲಿಂದ ಏಳಲು ನಾವು ಬಿಡುವುದಿಲ್ಲ

-ಸ್ವಾಮಿ ಹಂಸದೇವಾಚಾರ್ಯ, ಹರಿದ್ವಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.