
ಇ.ಯು ನಾಯಕರಾದ ಉರ್ಸುಲಾ ಫಾಂಡರ್ ಲೇಯನ್ ಮತ್ತು ಆ್ಯಂಟೊನಿಯೊ ಕೋಸ್ಟಾ ಅವರ ಜತೆ ಪ್ರಧಾನಿ ನರೇಂದ್ರ ಮೋದಿ
ಪಿಟಿಐ ಚಿತ್ರ
ನವದೆಹಲಿ: ‘ಐತಿಹಾಸಿಕ ಭಾರತ–ಐರೋಪ್ಯ ಒಕ್ಕೂಟದ ನಡುವಿನ ವ್ಯಾಪಾರ ಒಪ್ಪಂದದಿಂದಾಗಿ ಭಾರತೀಯ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳನ್ನು ಅಭ್ಯಾಸ ಮಾಡಿರುವ ವೈದ್ಯರು ಇನ್ನು ಮುಂದೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲೂ ತಮ್ಮ ಸೇವೆ ಒದಗಿಸಲು ಸಾಧ್ಯವಾಗಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಹೇಳಿದ್ದಾರೆ.
‘ಆಯುಷ್ ವೈದ್ಯರು ಭಾರತದಲ್ಲಿ ಪಡೆದ ವೃತ್ತಿಪರ ಶಿಕ್ಷಣದ ಆಧಾರದ ಮೇಲೆ ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ತಮ್ಮ ಸೇವೆಗಳನ್ನು ಒದಗಿಸಬಹುದು. ಇದು ಆಯುರ್ವೇದ ಮತ್ತು ಯೋಗ ಕ್ಷೇತ್ರಗಳಲ್ಲಿ ತೊಡಗಿರುವ ಯುವಜನರಿಗೆ ಹೆಚ್ಚು ಪ್ರಯೋಜನವಾಗುತ್ತದೆ’ ಎಂದು ಕೇರಳದ ಆರ್ಯ ವೈದ್ಯಶಾಲಾ ಚಾರಿಟಬಲ್ ಆಸ್ಪತ್ರೆಯ ಶತಮಾನೋತ್ಸವ ಸಮಾರಂಭದಲ್ಲಿ ವಿಡಿಯೊ ಸಂದೇಶದ ಮೂಲಕ ಅವರು ತಿಳಿಸಿದರು.
‘ಭಾರತದಲ್ಲಿ ಶತಮಾನಗಳಿಂದ ಆಯುರ್ವೇದದ ಮೂಲಕ ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಹೆಚ್ಚಾಗಿ ವಿದೇಶಗಳಲ್ಲಿ, ಇದರ ಮಹತ್ವವನ್ನು ತಿಳಿಸಲು ಪ್ರಯತ್ನಗಳು ಆಗದಿರುವುದು ದುರದೃಷ್ಟಕರ. ಈ ಐತಿಹಾಸಿಕ ವ್ಯಾಪಾರ ಒಪ್ಪಂದವು ಯೂರೋಪ್‌ನಲ್ಲಿ ಆಯುಷ್ ಕ್ಷೇಮ ಕೇಂದ್ರಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.