ADVERTISEMENT

ಅರ್ಧರಾತ್ರಿ ಶಬರಿಗಿರಿ ಏರಿದ ನಾರಿ

ಅಯ್ಯಪ್ಪ ಸನ್ನಿಧಿ ಪ್ರವೇಶಿಸಿದ ಇಬ್ಬರು ಮಹಿಳೆಯರು

ಪಿಟಿಐ
Published 2 ಜನವರಿ 2019, 20:24 IST
Last Updated 2 ಜನವರಿ 2019, 20:24 IST
ದೇವಾಲಯ ಪ್ರವೇಶಿಸಿದ ಮಹಿಳೆಯರು (ಎಡಚಿತ್ರ) ಅರ್ಚಕರು ಶುದ್ಧೀಕರಣ ವಿಧಿಗಳನ್ನು ನೆರವೇರಿಸಿದರು
ದೇವಾಲಯ ಪ್ರವೇಶಿಸಿದ ಮಹಿಳೆಯರು (ಎಡಚಿತ್ರ) ಅರ್ಚಕರು ಶುದ್ಧೀಕರಣ ವಿಧಿಗಳನ್ನು ನೆರವೇರಿಸಿದರು    

ಶಬರಿಮಲೆ/ತಿರುವನಂತಪುರ: ಕೇರಳದ ಪ್ರಸಿದ್ಧ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಇತಿಹಾಸ ಸೃಷ್ಟಿಯಾಗಿದೆ. ಋತುಸ್ರಾವದ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧದ ಶತಮಾನಗಳ ಪರಂಪರೆಯನ್ನು ಕನಕದುರ್ಗಾ (44) ಮತ್ತು ಬಿಂದು (42) ಎಂಬ ಇಬ್ಬರು ಮಹಿಳೆಯರು ಮುರಿದಿದ್ದಾರೆ.

ಕಪ್ಪು ದಿರಿಸು ತೊಟ್ಟ ಇವರಿಬ್ಬರು ಪ್ರವೇಶ ನಿಷೇಧದ ಪರವಾಗಿರುವ ಪ್ರತಿಭಟನಕಾರರ ಬೆದರಿಕೆಯನ್ನೂ ಲೆಕ್ಕಿಸದೆ ಬುಧವಾರ ಬೆಳಿಗ್ಗಿನ ಜಾವ 3.38ಕ್ಕೆ ದೇವಾಲಯ ಪ್ರವೇಶಿಸಿದ್ದಾರೆ. ಋತುಸ್ರಾವದ ವಯಸ್ಸಿನ ಮಹಿಳೆಯರಿಗೆ ಪ್ರವೇಶ ನಿಷೇಧವನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ ಕಳೆದ ಸೆಪ್ಟೆಂಬರ್‌ 28ರಂದು ತೀರ್ಪು ನೀಡಿತ್ತು. ಆ ಬಳಿಕ ಇದೇ ಮೊದಲಿಗೆ ಇಬ್ಬರು ಮಹಿಳೆಯರಿಗೆ ದೇವಾಲಯ ಪ್ರವೇಶ ಸಾಧ್ಯವಾಗಿದೆ.

ಈ ಸುದ್ದಿ ಹರಡುತ್ತಿದ್ದಂತೆಯೇ ಕೇರಳದಾ ದ್ಯಂತ ಪ್ರತಿಭಟನೆ ಭುಗಿಲೆದ್ದಿದೆ. ಪ್ರವೇಶ ನಿಷೇಧದ ಪರವಾಗಿರುವವರು ವಿವಿಧ ಸ್ಥಳಗಳಲ್ಲಿ ಹೆದ್ದಾರಿ ತಡೆ ನಡೆಸಿದ್ದಾರೆ ಮತ್ತು ಅಂಗಡಿ, ಮಾರುಕಟ್ಟೆಗಳನ್ನು ಮುಚ್ಚಿಸಿದ್ದಾರೆ.

ಹಿಂದುತ್ವವಾದಿ ಗುಂಪುಗಳ ಒಕ್ಕೂಟವಾಗಿರುವ ಶಬರಿಮಲೆ ಕರ್ಮ ಸಮಿತಿಯ ನೇತೃತ್ವದಲ್ಲಿ ಕಳೆದ ಮೂರು ತಿಂಗಳಿನಿಂದ ಪ್ರತಿಭಟನೆ ನಡೆಯುತ್ತಿದೆ. ಸಮಿತಿ ಮತ್ತು ಅಂತರರಾಷ್ಟ್ರೀಯ ಹಿಂದೂ ಪರಿಷತ್‌ (ಎಎಚ್‌ಪಿ) ಗುರುವಾರ ಕೇರಳ ಬಂದ್‌ಗೆ ಕರೆ ನೀಡಿವೆ.

ಅಯ್ಯಪ್ಪ ಭಕ್ತರು ಮತ್ತು ಇತರ ಸಂಪ್ರದಾಯವಾದಿಗಳ ಪ್ರತಿರೋಧದ ನಡುವೆಯೂ ಸುಪ್ರೀಂ ಕೋರ್ಟ್‌ ತೀರ್ಪನ್ನು ಜಾರಿಗೊಳಿಸಲು ಬದ್ಧ ಎಂದು ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ಆರಂಭದಲ್ಲಿಯೇ ಹೇಳಿತ್ತು.

‘ಶಬರಿಮಲೆಗೆ ಮಹಿಳೆಯರು ಪ್ರವೇಶಿಸಿದ್ದಾರೆ ಎಂಬುದು ವಾಸ್ತವ. ಅವರಿಗೆ ಬೇಕಾಗಿದ್ದ ಭದ್ರತೆಯನ್ನು ಪೊಲೀಸರು ಒದಗಿಸಿದ್ದರು’ ಎಂದು ವಿಜಯನ್‌ ತಿಳಿಸಿದ್ದಾರೆ.

ಸುಮಾರು 35 ಲಕ್ಷ ಮಹಿಳೆಯರು ಕಾಸರಗೋಡಿನಿಂದ ತಿರುವನಂತಪುರದವರೆಗೆ 620 ಕಿ.ಮೀ. ಉದ್ದದ ‘ಮಹಿಳಾ ಗೋಡೆ’ಯನ್ನು ಮಂಗಳವಾರ ರಚಿಸುವ ಮೂಲಕ ಮಹಿಳೆಯ ಪ್ರವೇಶಕ್ಕೆ ಇರುವ ಪ್ರತಿರೋಧದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅದರ ಮರು ದಿನವೇ ಇಬ್ಬರು ಮಹಿಳೆಯರು ದೇಗುಲದ ಒಳ ಹೊಕ್ಕರು.

ಯಾರಿವರು?

ಬಿಂದು ಅವರು ಕೋಯಿಕ್ಕೋಡ್ ಜಿಲ್ಲೆಯ ಕೊಯ್ಲಾಂಡಿಯ ಕಾಲೇಜೊಂದರಲ್ಲಿ ಪ್ರಾಧ್ಯಾಪಕಿ. ಜತೆಗೆ ಅವರು ಸಿಪಿಐ (ಎಂಎಲ್‌)ನ ಕಾರ್ಯಕರ್ತೆ. ಕನಕದುರ್ಗಾ ಅವರು ಮಲಪ್ಪುರದ ಅಂಗಡಿಪುರದವರು. ಅಲ್ಲಿ ಅವರು ನಾಗರಿಕ ಪೂರೈಕೆ ಇಲಾಖೆಯ ಉದ್ಯೋಗಿ.

ಮಹಿಳೆಯರನ್ನು ದರ್ಶನದ ಬಳಿಕ ಪೊಲೀಸರು ಬಿಗಿ ಭದ್ರತೆಯಲ್ಲಿ ಕರೆದೊಯ್ದರು. ನಂತರ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು. ಇಬ್ಬರ ಮನೆಗಳಿಗೂ ಬಿಗಿ ಭದ್ರತೆ ಒದಗಿಸಲಾಗಿದೆ.

ಎರಡನೇ ಯತ್ನ

ಕನಕದುರ್ಗಾ ಮತ್ತು ಬಿಂದು ಅವರು 2018ರ ಡಿಸೆಂಬರ್‌ 24ರಂದು ಕೆಲವು ಮಹಿಳೆಯರ ಜತೆಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಯತ್ನಿಸಿದ್ದರು. ಪೊಲೀಸರು ಭದ್ರತೆಯನ್ನೂ ಕೊಟ್ಟಿದ್ದರು. ಆದರೆ, ಭಾರಿ ಪ್ರತಿರೋಧದಿಂದಾಗಿ ಅವರು ಅರ್ಧದಿಂದಲೇ ಹಿಂದಿರುಗಿದ್ದರು.

ವ್ಯಗ್ರ ಅರ್ಚಕರಿಂದ ಶುದ್ಧೀಕರಣ

ದೇವಾಲಯದೊಳಕ್ಕೆ ಮಹಿಳೆಯರು ಪ್ರವೇಶಿಸಿದ್ದು ಪ್ರಧಾನ ಅರ್ಚಕರಲ್ಲಿ ಭಾರಿ ಆಕ್ರೋಶ ಉಂಟು ಮಾಡಿದೆ. ಸುದ್ದಿ ತಿಳಿಯುತ್ತಿದ್ದಂತೆಯೇ ಅವರು ದೇಗುಲದಲ್ಲಿದ್ದ ಭಕ್ತರನ್ನು ಹೊರಗೆ ಹೋಗುವಂತೆ ನಿರ್ದೇಶಿಸಿದರು. ಗರ್ಭಗುಡಿಯ ಬಾಗಿಲು ಮುಚ್ಚಿ ಸುಮಾರು ಒಂದು ತಾಸು ಶುದ್ಧೀಕರಣ ವಿಧಿಗಳನ್ನು ನಡೆಸಿದರು. ಬಳಿಕ ಭಕ್ತರಿಗೆ ದೇಗುಲದ ಬಾಗಿಲು ತೆರೆಯಲಾಯಿತು.

ನಿಷೇಧದ ಇತಿಹಾಸ

ಎಲ್ಲ ವಯಸ್ಸಿನ ಮಹಿಳೆ ಯರಿಗೆ ದೇಗುಲ ಪ್ರವೇಶ ನಿಷೇಧ ಯಾವಾಗಿ ನಿಂದ ಜಾರಿಯಲ್ಲಿದೆ ಎಂಬ ಬಗ್ಗೆ ನಿಖರವಾದ ದಾಖಲೆಗಳು ಇಲ್ಲ. 200 ವರ್ಷಗಳ ಹಿಂದೆಯೇ ಈ ನಿಷೇಧ ಇತ್ತು ಎಂದು 19ನೇ ಶತಮಾನದಲ್ಲಿ ಬ್ರಿಟಿಷ್‌ ಸರ್ಕಾರದ ಸಮೀಕ್ಷೆಯಲ್ಲಿ ಹೇಳಲಾಗಿತ್ತು. 1991ರಲ್ಲಿ ಕೇರಳ ಹೈಕೋರ್ಟ್‌ ನೀಡಿದ ತೀರ್ಪಿನಿಂದಾಗಿ ಈ ನಿಷೇಧಕ್ಕೆ ಕಾನೂನು ಮಾನ್ಯತೆ ಸಿಕ್ಕಿತು. ಈಗ, ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ನಿಷೇಧ ತೆರವಾಗಿದೆ.

ಭುಗಿಲೆದ್ದ ಪ್ರತಿಭಟನೆ

*ಕಾಸರಗೋಡು–ಮಂಗಳೂರು ಹೆದ್ದಾರಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ರಸ್ತೆ ತಡೆ

*ತಿರುವನಂತಪುರದಲ್ಲಿ ವಿಧಾನಸಭಾ ಕಾರ್ಯಾಲಯದ ಎದುರು ಹಿಂಸೆಗೆ ತಿರುಗಿದ ಪ್ರತಿಭಟನೆ, ತಿರುವನಂತಪುರ ಮತ್ತು ಕೊಲ್ಲಂನಲ್ಲಿ ಪೊಲೀಸರು ಹಾಗೂ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ

*ಮುಜರಾಯಿ ಸಚಿವ ಕಡಕಂಪಲ್ಲಿ ಸುರೇಂದ್ರನ್‌ಗೆ ಗುರುವಾಯೂರಿನಲ್ಲಿ ಮತ್ತು ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾಗೆ ಕಣ್ಣೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಂದ ಕಪ್ಪು ಬಾವುಟ

*ತಿರುವನಂತಪುರದಲ್ಲಿ ಕೆಲವು ಮಹಿಳೆಯರನ್ನು ಬಂಧಿಸಿದ ಪೊಲೀಸರು

*ಕೊಚ್ಚಿ, ಪಟ್ಟನಂತಿಟ್ಟ, ತಿರುವನಂತಪುರ ಮತ್ತು ಕೊಲ್ಲಂನಲ್ಲಿ ಅಯ್ಯಪ್ಪನ ಚಿತ್ರ ಹಿಡಿದು, ನಾಮ ಜಪಿಸುತ್ತಾ ಮೆರವಣಿಗೆ

*ಮುಖ್ಯಮಂತ್ರಿ ಕಚೇರಿಗೆ ನುಗ್ಗಲು ಮಹಿಳಾ ಮೋರ್ಚಾ ಕಾರ್ಯಕರ್ತೆಯರ ಯತ್ನ

* ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ‌ ಮೆಟ್ಟಿಲು ಹತ್ತುವುದು ಮೂರ್ಖತನದ ವಿಚಾರ. ನಂಬಿಕೆಗಳ ಆಧಾರದ ಮೇಲೆ ದೇವಸ್ಥಾನಗಳಲ್ಲಿ ಹಲವು ಆಚರಣೆಗಳಿರುತ್ತವೆ. ಅವನ್ನು ಪ್ರಶ್ನಿಸುವುದರಲ್ಲಿ ಅರ್ಥವಿಲ್ಲ

–ಪ್ರೊ.ಎಸ್.ಎಲ್‌.ಭೈರಪ್ಪ, ಸಾಹಿತಿ

* ಎಲ್ಲ ವಯೋಮಾನದ ಮಹಿಳೆ ಯರ ಪ್ರವೇಶದಿಂದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಾಲಯದ ಸಂಪ್ರದಾಯಕ್ಕೆ ಭಾರಿ ಹೊಡೆತ ಆಗು ತ್ತದೆ. ಶಬರಿಮಲೆ ಸಂಪ್ರದಾಯ ಬೇರೆ ಯಾಗಿರುವುದರಿಂದ ಈ ವಿಷಯ ದಲ್ಲಿ ನಾನು ಪರ ಅಥವಾ ವಿರೋಧ ಇಲ್ಲ.

–ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ

* ಮಹಿಳೆಯರು ದೇವಾಲಯ ಪ್ರವೇಶಿಸಿದರೆ ತಪ್ಪೇನಿಲ್ಲ. ಸಂಪ್ರ ದಾಯ, ಸಂಯಮ, ಬ್ರಹ್ಮಚರ್ಯ ಹಾಗೂ ಕೆಲವು ಕಟ್ಟುನಿಟ್ಟಾದ ವ್ರತ-ನಿಯಮ ಪಾಲನೆ ಮಾಡಬೇಕಾದುದು ಮುಖ್ಯ. ಮಹಿಳೆಯರು ದೇವಾಲಯ ಪ್ರವೇಶಿಸಿದರೆ ಏನೂ ತೊಂದರೆಯಾಗದು

–ಡಿ.ವೀರೇಂದ್ರ ಹೆಗ್ಗಡೆ, ಧರ್ಮಸ್ಥಳದ ಧರ್ಮಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.