ADVERTISEMENT

ಓಮೈಕ್ರಾನ್‌ನ ಬಿಎ.2.38 ವೈರಾಣುವಿನಿಂದ ಗಂಭೀರ ಪರಿಣಾಮ ಇಲ್ಲ: ಇನ್ಸಾಕಾಗ್

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 12:37 IST
Last Updated 10 ಜುಲೈ 2022, 12:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೊರೊನಾ ರೂಪಾಂತರಿ ಓಮೈಕ್ರಾನ್‌ನ ಉಪತಳಿ ಬಿಎ.2ರ ಮತ್ತೊಂದು ತಳಿ ಬಿಎ.2.38 ವೈರಾಣು ಅಷ್ಟೇನು ಗಂಭೀರ ಪರಿಣಾಮ ಉಂಟು ಮಾಡುವುದಿಲ್ಲ. ಇದರಿಂದಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆಯೂ ಏರಿಕೆಯಾಗಿಲ್ಲ. ಆದರೆ, ಇದರ ಸಹವರ್ತಿ ರೋಗಗಳ ಕಾರಣದಿಂದಾಗಿ ಕೆಲವು ಸಾವುಗಳು ಸಂಭವಿಸಿವೆ’ ಎಂದು ‘ಇನ್ಸಾಕಾಗ್’ ತನ್ನ ಬುಲೆಟಿನ್‌ನಲ್ಲಿ ಹೇಳಿದೆ.

ಭಾನುವಾರ ಜೂನ್‌ 20ರ ಬುಲೆಟಿನ್‌ ಬಿಡುಗಡೆ ಮಾಡಿರುವ ಇನ್ಸಾಕಾಗ್ (ಐಎನ್‌ಎಸ್‌ಎಸಿಇಜಿ– ದಿ ಇಂಡಿಯನ್‌ ಸಾರ್ಸ್‌–ಕೋವ್‌–2 ಜಿನೊಮಿಕ್ಸ್‌ ಕನ್ಸೊರ್ಟಿಯಂ) ಹಲವು ಬಿಎ.2 ಪ್ರಕರಣಗಳನ್ನು ಬಿಎ.2.38 ಎಂದು ಮರು ವರ್ಗೀಕರಿಸಲಾಗಿದೆ. ಬಿಎ.2.38 ತಳಿಯು ಇತ್ತೀಚಿನ ಅನುಕ್ರಮದ ವಿಂಗಡಣೆಯಲ್ಲಿ ಪ್ರಚಲಿತದಲ್ಲಿರುವ ಉಪ ತಳಿಯಾಗಿದೆ.ಇದರ ವರ್ತನೆ ಗಮನಿಸಿದರೆ ಕೋವಿಡ್‌ ಹರಡುವಿಕೆ ಕಡಿಮೆಯಾಗುವ ಸಾಧ್ಯತೆ ಇದೆ. ಆದಾಗ್ಯೂ ಕೋವಿಡ್‌ ತಡೆಗೆ ವಹಿಸಬೇಕಾದಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರಿಸಲು ಶಿಫಾರಸು ಮಾಡಿದೆ ಎಂದು ಅದು ಹೇಳಿದೆ.

ಇನ್ಸಾಕಾಗ್ ತನ್ನ ಜೂನ್‌ 13ರ ಬುಲೆಟಿನ್‌ ಅನ್ನೂ ಇದೇ ವೇಳೆ ಬಿಡುಗಡೆ ಮಾಡಿದೆ. ಬಿಎ.2 ತಳಿಯು ಪ್ರಬಲ ವೈರಾಣು ತಳಿಯಾಗಿ ಮುಂದುವರಿದಿದೆ. ಇದರಿಂದ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಏರಿಕೆಯಾಗಿಲ್ಲ. ಆದರೂ, ಇದನ್ನು ತುಂಬಾ ಹತ್ತಿರದಿಂದ ಗಮನಿಸಲಾಗುತ್ತಿದೆ ಎಂದು ಬುಲೆಟಿನ್‌ನಲ್ಲಿ ಹೇಳಿದೆ.

ADVERTISEMENT

ಮೇ 30ರ ಮತ್ತೊಂದು ಬುಲೆಟಿನ್‌ನಲ್ಲಿ ಬಿಎ.4ರ ಐದು ಪ್ರಕರಣಗಳು ಮತ್ತು ಬಿಎ.5ರ ಮೂರು ಪ್ರಕರಣಗಳು ದೇಶದಲ್ಲಿ ಇಲ್ಲಿಯವರೆಗೆ ವರದಿಯಾಗಿವೆ ಎಂದು ಇನ್ಸಾಕಾಗ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.