ADVERTISEMENT

ಮಕ್ಕಳ ಕಳ್ಳಸಾಗಣೆ ಜಾಲ ಭೇದಿಸಿದ ಪೊಲೀಸರು: 10 ಮಂದಿ ಬಂಧನ

ಪಿಟಿಐ
Published 18 ನವೆಂಬರ್ 2018, 20:00 IST
Last Updated 18 ನವೆಂಬರ್ 2018, 20:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಮಕ್ಕಳ ಕಳ್ಳಸಾಗಣೆ ಜಾಲ ನಿರ್ವಹಿಸುತ್ತಿದ್ದ 10 ಮಂದಿಯನ್ನು ಬಂಧಿಸಿ, ಐದು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.10 ಮಂದಿಯ ವಿರುದ್ಧ ನವೆಂಬರ್ 14ರಂದು ಸಿಟಿ ಕೋರ್ಟ್‌ಗೆ 24 ಪುಟಗಳ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದ್ದು, ಇಡೀ ಜಾಲದ ವೃತ್ತಾಂತವನ್ನು ಬಿಚ್ಚಿಟ್ಟಿದ್ದಾರೆ.

ಬೇಟೆ ಹೇಗೆ?:ಮಕ್ಕಳ ಕಳ್ಳಸಾಗಣೆ ಬಗ್ಗೆ ಸುಳಿವು ಅರಿತ ಪೊಲೀಸರು ಆರೋಪಿಗಳ ಸೆರೆಗೆ ಆಗಸ್ಟ್ 14ರಂದು ತಂತ್ರ ಹೆಣೆದಿದ್ದರು. ಸಬ್ ಇನ್ಸ್‌ಪೆಕ್ಟರ್ ಪ್ರೀತಿ ಹಾಗೂ ಹೆಡ್‌ಕಾನ್‌ಸ್ಟೆಬಲ್ ರಾಜೇಶ್ ಅವರು ಮಕ್ಕಳಿಲ್ಲದ ದಂಪತಿ ಎಂಬ ನೆಪದಲ್ಲಿ, ಆರೋಪಿ ಮೊಹಮ್ಮದ್ ಜಹಾಂಗೀರ್ ಎಂಬಾತನನ್ನು ಭೇಟಿ ಮಾಡಿದ್ದರು.

ಆರೋಪಿಯು ಮಗುವಿಗೆ ₹4.30 ಲಕ್ಷ ನಿಗದಿಪಡಿಸಿದ್ದ. ಕೊನೆಗೆ ₹3.30 ಲಕ್ಷಕ್ಕೆಮಾತುಕತೆ ಮುಗಿದಿತ್ತು. ಒಂದು ಗಂಟೆಯೊಳಗೆ ಹಣ ತರುವಂತೆ ಸೂಚಿಸಿದ್ದ ಆರೋಪಿ, ಜ್ಯೋತಿ ಹಾಗೂ ರಾಹುಲ್ ಎಂಬುವರು ಮಗು ಹಸ್ತಾಂತರಿಸಲಿದ್ದಾರೆ ಎಂದು ಹೇಳಿದ್ದ.

ADVERTISEMENT

ನವಜಾತ ಶಿಶುವನ್ನು ಹಸ್ತಾಂತರಿಸಿದ ತಕ್ಷಣ ಜಹಾಂಗೀರ್‌ನನ್ನು ಬಂಧಿಸಲಾಯಿತು.ಮಗುವನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಮಗು ಆಗಸ್ಟ್ 26ರಂದು ಮೃತಪಟ್ಟಿತು.

ಜ್ಯೋತಿ ಹಾಗೂ ರಾಹುಲ್ ಎಂಬುವರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು. ಈ ವೇಳೆ ನ್ಯೂ ಫ್ರೆಂಡ್ಸ್ ಕಾಲೋನಿಯ ಮಿಥಿಲಾ ಎಂಬ ಮಹಿಳೆ ಕಡೆಯಿಂದ ಮಗುವನ್ನು ತಂದಿರುವುದಾಗಿ ಅವರು ಒಪ್ಪಿಕೊಂಡರು.

ಮಿಥಿಲಾ ಅವರನ್ನು ಬಂಧಿಸಿದಾಗ, ಜಿತೇಂದ್ರ ಕುಮಾರ್ ಎಂಬಾತನೂ ಇದರಲ್ಲಿ ಭಾಗಿಯಾಗಿದ್ದಾನೆ ಎಂಬ ಅಂಶ ತಿಳಿಯಿತು.ಜಿತೇಂದ್ರ ಕುಮಾರ್ ಪೊಲೀಸರಿಗೆ ಇನ್ನಷ್ಟು ಮಾಹಿತಿ ನೀಡಿದ್ದ.ಮಹಿಳಾ ಏಜೆಂಟ್ ಪರ್ವೀನ್ ಎಂಬುವರಿಂದ ಕವಿತಾ ಎಂಬುವರು ಐದು ದಿನದ ಮಗುವನ್ನು ₹4 ಲಕ್ಷಕ್ಕೆ ಖರೀದಿಸಿದ್ದರು. ಬಳಿಕ ಬಲ್ಬೀರ್ ಸಿಂಗ್ ಎಂಬುವರಿಗೆ ₹5 ಲಕ್ಷಕ್ಕೆ ಮಾರಾಟ ಮಾಡಿದ್ದರು ಎಂದು ತಿಳಿಸಿದ್ದ.

ಲುಕ್‌ಔಟ್ ನೋಟಿಸ್ ಹೊರಡಿಸಿದ ಬಳಿಕ ಸೆಪ್ಟೆಂಬರ್ 20ರಂದು ಕವಿತಾ ಪೊಲೀಸರಿಗೆ ಶರಣಾಗಿದ್ದರು.ಅಪಹರಣ, ಮಕ್ಕಳ ಕಳ್ಳಸಾಗಣೆ, ವಂಚನೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.