ADVERTISEMENT

ವಿಕ್ರಮಾದಿತ್ಯನ ಮೇಲೆ ಇಳಿದು, ಹಾರಲಿವೆ ತೇಜಸ್‌ ಯುದ್ಧ ವಿಮಾನಗಳು

ಏಜೆನ್ಸೀಸ್
Published 2 ಆಗಸ್ಟ್ 2018, 13:16 IST
Last Updated 2 ಆಗಸ್ಟ್ 2018, 13:16 IST
ಚಿತ್ರಕೃಪೆ: ಎಡಿಎ
ಚಿತ್ರಕೃಪೆ: ಎಡಿಎ   

ನವದೆಹಲಿ: ರಕ್ಷಣಾ ಇಲಾಖೆಯ ಲೆಕ್ಕಚಾರಗಳು ಎಲ್ಲ ಸರಿಯಾದರೆ, ವಿಮಾನ ವಾಹಕ ಯುದ್ಧನೌಕೆ ವಿಕ್ರಮಾದಿತ್ಯನ ಮೇಲೆ ಇನ್ನೂ ಕೆಲವೇ ತಿಂಗಳುಗಳಲ್ಲಿ ದೇಶಿಯ ನಿರ್ಮಿತ ಯುದ್ಧವಿಮಾನ ತೇಜಸ್‌ ತನ್ನ ತೇಜಸ್ಸನ್ನು ತೋರಿಸಲಿದೆ.

2019ರ ಅಂತ್ಯದೊಳಗೆ ಎರಡು ತೇಜಸ್‌ಗಳನ್ನು ಯುದ್ಧನೌಕೆಯ ಮೇಲೆ ಮೊದಲ ಬಾರಿಗೆ ಕಾರ್ಯಾಚರಣೆ ನಡೆಸಲು ಸೇನೆ ಯೋಜಿಸಿದೆ. ಈ ಕಾರ್ಯಾಚರಣೆ ಲ್ಯಾಂಡಿಂಗ್‌, ಇಂಧನ ತುಂಬಿಸುವಿಕೆ ಮತ್ತು ಟೇಕ್‌ ಆಫ್‌ಅನ್ನು ಒಳಗೊಂಡಿರಲಿದೆ.

ಈ ಕಾರ್ಯಾಚರಣೆಯಲ್ಲಿ ಯುದ್ಧವಿಮಾನ ಲ್ಯಾಂಡಿಂಗ್‌ ಆಗುವಾಗ, ಅದರ ವೇಗವನ್ನು ಗಣನೀಯವಾಗಿ ತಗ್ಗಿಸಲು ಮೊದಲ ಬಾರಿಗೆ ‘ಬಲವಾದ ಬೆಲ್ಟ್‌ ಬಳಕೆ ವಿಧಾನ’ ಪರಿಚಯಿಸಲಾಗುತ್ತಿದೆ. ವಿಮಾನವು ನೌಕೆಯ ಅಂಗಳ ಮುಟ್ಟಿ, ಮುಂದೆ ವೇಗವಾಗಿ ಸಾಗುವಾಗ ಅದರಲ್ಲಿನ ಕೊಂಡಿಯಂತಹ ರಚನೆ, ಕೆಳಗೆ ಹಾಸಿರುವ ಬೆಲ್ಟ್‌ಗೆ ಕಚ್ಚಿಕೊಳ್ಳುತ್ತದೆ. ಇದರಿಂದ ಕೇವಲ ನಾಲ್ಕು ಸೆಕೆಂಡುಗಳಲ್ಲಿ ವಿಮಾನದ ವೇಗ 230 ಕಿ.ಮೀ.(ಪ್ರತಿ ಗಂಟೆಗೆ)ನಿಂದ ಶೂನ್ಯಕ್ಕೆ ಇಳಿಯಲಿದೆ.

ADVERTISEMENT

ಗೋವಾದಲ್ಲಿ ಪರಿಕ್ಷಾರ್ಥ ಪ್ರಯೋಗ:ಬೆಲ್ಟ್‌ನಿಂದ ವೇಗ ನಿಯಂತ್ರಿಸುವ ವಿಧಾನವನ್ನು ಟೆಸ್ಟ್‌ ಪೈಲಟ್‌ ಆಗಿರುವ ಶಿವನಾಥ್‌ ದಹಿಯಾ ಅವರು ಗೋವಾ ನೌಕಾನೆಲೆಯಲ್ಲಿ ಗುರುವಾರ ಪರೀಕ್ಷಿಸಿದ್ದಾರೆ. ಈ ವೇಳೆ ತೇಜಸ್‌ನ ವೇಗ ಪ್ರತಿ ಗಂಟೆಗೆ 60 ಕಿ.ಮೀ. ಇತ್ತು. ಇಂತಹ ಲ್ಯಾಂಡಿಂಗ್‌ ರೀತಿಯನ್ನುಸೇನಾ ವಲಯದಲ್ಲಿ ‘ಅರೆಸ್ಟೆಡ್‌ ಲ್ಯಾಂಡಿಂಗ್‌’ ಎಂತಲೂ ಕರೆಯುತ್ತಾರೆ.

ಮುಂದಿನ ಮುಖ್ಯ ಕಾರ್ಯಾಚರಣೆಯಲ್ಲಿ ಎರಡು ತೇಜಸ್‌ ಯುದ್ಧವಿಮಾನಗಳನ್ನು ಬಳಸಲು ವಾಯುಸೇನೆ ಯೋಜಿಸಿದೆ. ಆ ತೇಜಸ್‌ಗಳನ್ನು ಬೆಂಗಳೂರಿನ ರಕ್ಷಣಾ ಅಭಿವೃದ್ಧಿ ಸಂಸ್ಥೆಯಲ್ಲಿ ಸಿದ್ಧಗೊಳಿಸಲಾಗುತ್ತಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.