ಸುಪ್ರೀಂ ಕೋರ್ಟ್
ನವದೆಹಲಿ: ‘ಜಾಮೀನು ಎಂಬುದು ಹಕ್ಕು, ಜೈಲು ಶಿಕ್ಷೆ ವಿನಾಯಿತಿ’ ಎಂಬ ನ್ಯಾಯವ್ಯವಸ್ಥೆಯ ತತ್ವವು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ) ವ್ಯಾಪ್ತಿಯಲ್ಲಿ ಬರುವ ಅಪರಾಧಗಳಿಗೂ ಅನ್ವಯವಾಗುತ್ತದೆ ಎಂದಿರುವ ಸುಪ್ರೀಂ ಕೋರ್ಟ್, ಈ ಕಾಯ್ದೆಯಡಿ ದಾಖಲಾದ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಗೆ ಮಂಗಳವಾರ ಜಾಮೀನು ನೀಡಿದೆ.
‘ಜಾಮೀನು ನೀಡಲು ಅರ್ಹವಾದ ಪ್ರಕರಣಗಳಲ್ಲಿಯೂ, ನ್ಯಾಯಾಲಯಗಳು ಆರೋಪಿಗಳಿಗೆ ಜಾಮೀನು ನೀಡುವುದನ್ನು ನಿರಾಕರಿಸಲು ಆರಂಭಿಸಿದರೆ ಅದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುವುದು’ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ಜಲಾಲುದ್ದೀನ್ ಖಾನ್ ಎಂಬುವವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್.ಓಕಾ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರು ಇದ್ದ ನ್ಯಾಯಪೀಠ ನಡೆಸಿತು.
‘ಆರೋಪಿಯ ವಿರುದ್ಧ ಪ್ರಾಸಿಕ್ಯೂಷನ್ ಹೊರಿಸಿರುವ ಅಪಾದನೆಗಳು ಗಂಭೀರ ಸ್ವರೂಪದ್ದಾಗಿರಬಹುದು. ಆದರೆ, ನ್ಯಾಯಾಲಯಗಳು ಕಾನೂನಿನ ಪ್ರಕಾರವೇ ಪ್ರಕರಣವನ್ನು ಪರಿಗಣಿಸಬೇಕು. ಅರ್ಹ ಪ್ರಕರಣಗಳಲ್ಲಿಯೂ ಜಾಮೀನು ನಿರಾಕರಿಸುವುದು ಸಂವಿಧಾನದ 21ನೇ ವಿಧಿ ಅಡಿ ಖಾತ್ರಿಪಡಿಸಲಾಗಿರುವ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣ ಏನು: 2022ರಲ್ಲಿ ಬಿಹಾರದ ಪಟ್ನಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಚುನಾವಣಾ ಪ್ರಚಾರ ಸಭೆ ಇತ್ತು. ಕಾರ್ಯಕ್ರಮದ ವೇಳೆ, ಭಯೋತ್ಪದನಾ ಕೃತ್ಯ ಎಸಗಲು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆ (ಈಗ ನಿಷೇಧಿತ) ಸಂಚು ರೂಪಿಸಿದೆ ಎಂಬ ಕುರಿತು ಫುಲ್ವಾರಿಶರೀಫ್ ಠಾಣೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.