ಬೆಂಗಳೂರು: ‘ಬಾಲಾಕೋಟ್ ವಾಯುದಾಳಿಯಿಂದ ಉಂಟಾದ ಹಾನಿಯ ಚಿತ್ರಗಳು ನಮ್ಮ ಬಳಿ ಲಭ್ಯವಿರಲಿಲ್ಲ. ಹೀಗಾಗಿ ಆಗ ನಾವು ಏನು ಸಾಧಿಸಿದೆವು ಎಂಬುದನ್ನು ಜನರಿಗೆ ಮನವರಿಕೆ ಮಾಡಲು ಕಷ್ಟವಾಗಿತ್ತು’ ಎಂದು ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಶನಿವಾರ ಹೇಳಿದರು.
ಆದರೆ, ಆಪರೇಷನ್ ಸಿಂಧೂರದಲ್ಲಿ ‘ಬಾಲಾಕೋಟ್‌ನ ಭೂತ’ವನ್ನು ನಿವಾರಿಸಿದ್ದೇವೆ ಎಂದು ಅವರು ಪ್ರತಿಪಾದಿಸಿದರು.
ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಪರೇಷನ್ ಸಿಂಧೂರ ವೇಳೆ ಪಾಕಿಸ್ತಾನದ ಒಂದು ದೊಡ್ಡ ಗಾತ್ರದ ವಿಮಾನ ಮತ್ತು ಐದು ಯುದ್ಧ ವಿಮಾನಗಳನ್ನು ಭಾರತೀಯ ವಾಯುಸೇನೆ (ಐಎಎಫ್) ಹೊಡೆದುರುಳಿಸಿದೆ. ಇದು ಆಕಾಶದಲ್ಲಿ ಭಾರತ ನಡೆಸಿದ ಈವರೆಗಿನ ದಾಖಲೆಯ ದಾಳಿ ಎಂದು ಅವರು ಹೇಳಿದರು.
ಆಪರೇಷನ್ ಸಿಂಧೂರದ ವಿವರವಾದ ವಿವರಣೆ ದೃಶ್ಯಗಳು ಮತ್ತು ಸ್ಲೈಡ್‌ಗಳೊಂದಿಗೆ ಮಾಹಿತಿ ನೀಡಿದ ಅವರು, ‘ಇದೇ ರೀತಿಯ ಕಾರ್ಯಾಚರಣೆಯನ್ನು ಬಾಲಾಕೋಟ್‌ನಲ್ಲೂ ಮಾಡಿದ್ದೆವು. ಆದರೆ ಅಲ್ಲಿ ಸಂಭವಿಸಿದ ಹಾನಿಯ ಕುರಿತ ಚಿತ್ರಗಳು ಲಭ್ಯವಿಲ್ಲದ ಕಾರಣ, ನಾವು ಏನನ್ನು ಸಾಧಿಸಿದ್ದೇವೆ ಎಂದು ದೇಶದ ಜನರಿಗೆ ಹೇಳಲು ಸಾಧ್ಯವಾಗಲಿಲ್ಲ. ಆದರೆ ಅಲ್ಲಿ ಭಾರಿ ಹಾನಿಯಾಗಿತ್ತು ಮತ್ತು ಹಲವು ಭಯೋತ್ಪಾದಕರು ಹತರಾಗಿದ್ದರು ಎಂಬುದು ನಮಗೆ ಗುಪ್ತಚರ ಮಾಹಿತಿಯಿಂದು ಗೊತ್ತಾಗಿತ್ತು’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.