ನವದೆಹಲಿ: ‘ಪಂಜಾಬ್ ಮಾಜಿ ಮುಖ್ಯಮಂತ್ರಿ ಬಿಯಾಂತ್ ಸಿಂಗ್ ಅವರ ಹತ್ಯೆ ಪ್ರಕರಣದಲ್ಲಿ ಮರಣ ದಂಡನೆಗೆ ಗುರಿಯಾಗಿರುವ ಬಲ್ವಂತ್ ಸಿಂಗ್ ರಾಜೋನಾನನ್ನು ಇನ್ನೂ ಯಾಕೆ ಗಲ್ಲಿಗೇರಿಸಿಲ್ಲ’ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಬುಧವಾರ ಪ್ರಶ್ನಿಸಿದೆ.
ಕ್ಷಮಾದಾನ ಕೋರಿ ತಾನು ಸಲ್ಲಿಸಿದ್ದ ಅರ್ಜಿ ಕುರಿತು ನಿರ್ಧಾರ ಕೈಗೊಳ್ಳುವಲ್ಲಿ ವಿಳಂಬವಾಗಿದೆ. ಹೀಗಾಗಿ, ತನಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವಂತೆ ಕೋರಿ ರಾಜೋನಾ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ವೇಳೆ, ಸುಪ್ರೀಂ ಕೋರ್ಟ್ ಈ ಪ್ರಶ್ನೆ ಕೇಳಿದೆ.
ನ್ಯಾಯಮೂರ್ತಿಗಳಾದ ವಿಕ್ರಮನಾಥ್, ಸಂದೀಪ್ ಮೆಹ್ತಾ ಹಾಗೂ ಎನ್.ವಿ.ಅಂಜಾರಿಯಾ ಅವರು ಇದ್ದ ಪೀಠವು ಅರ್ಜಿ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ, ‘ಬಿಯಾಂತ್ ಸಿಂಗ್ ಹತ್ಯೆ ಗಂಭೀರ ಅಪರಾಧ’ ಎಂದು ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಪೀಠಕ್ಕೆ ತಿಳಿಸಿದರು.
ಆಗ, ‘ಹಾಗಾದರೆ, ಈವರೆಗೆ ಆತನನ್ನು ಯಾಕೆ ಗಲ್ಲಿಗೇರಿಸಿಲ್ಲ? ಈ ಲೋಪಕ್ಕೆ ಯಾರನ್ನು ದೂರಬೇಕು’ ಎಂದು ಪ್ರಶ್ನಿಸಿದ ಪೀಠ, ‘ಆತನಿಗೆ ವಿಧಿಸಿರುವ ಗಲ್ಲು ಶಿಕ್ಷೆಗೆ ನ್ಯಾಯಾಲಯವಂತೂ ತಡೆ ನೀಡಿಲ್ಲ’ ಎಂದು ಹೇಳಿತು.
‘ನನ್ನ ಕಕ್ಷಿದಾರ ಸಲ್ಲಿಸಿರುವ ಕ್ಷಮಾದಾನ ಅರ್ಜಿ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ರಾಜೋನಾ ಭಾರತದ ಪ್ರಜೆ. ಈ ವಿಚಾರ ಭಾರತ ಮತ್ತು ಪಾಕಿಸ್ತಾನ ನಡುವಿನ ವ್ಯಾಜ್ಯವಲ್ಲ’ ಎಂದು ರಾಜೋನಾ ಪರ ಹಾಜರಿದ್ದ ಹಿರಿಯ ವಕೀಲ ಮುಕುಲ್ ರೋಹಟಗಿ ಹೇಳಿದರು.
ಆಗ, ಸಂಬಂಧಪಟ್ಟವರಿಂದ ಮಾಹಿತಿ ಪಡೆದು, ಪೀಠಕ್ಕೆ ತಿಳಿಸುವುದಾಗಿ ನಟರಾಜ್ ಹೇಳಿದರು. ವಾದ, ಪ್ರತಿವಾದಗಳನ್ನು ಅಲಿಸಿದ ಪೀಠವು, ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.