ಹೈಕೋರ್ಟ್ ತಡೆ
ಇಂದೋರ್ (ಪಿಟಿಐ): ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ‘ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿರುವ’ ಸಂಘಟನೆಯನ್ನು ಸರ್ಕಾರಿ ನೌಕರರಿಗೆ ನಿಷೇಧಿಸಲಾದ ಸಂಸ್ಥೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಎಂಬ ತಪ್ಪನ್ನು ಅರಿತುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಐದು ದಶಕಗಳು ಬೇಕಾದವು ಎಂದು ಮಧ್ಯಪ್ರದೇಶ ಹೈಕೋರ್ಟ್ ಗುರುವಾರ ಹೇಳಿದೆ.
ಕೇಂದ್ರ ಸರ್ಕಾರದ ನಿವೃತ್ತ ನೌಕರ ಪುರುಷೋತ್ತಮ್ ಗುಪ್ತಾ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವ ಸಮಯದಲ್ಲಿ ನ್ಯಾಯಮೂರ್ತಿಗಳಾದ ಸುಶ್ರುತಾ ಅರವಿಂದ್ ಧರ್ಮಾಧಿಕಾರಿ ಮತ್ತು ಗಜೇಂದ್ರ ಸಿಂಗ್ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.
ಸರ್ಕಾರಿ ನೌಕರರು ಆರ್‌ಎಸ್‌ಎಸ್ ಸದಸ್ಯತ್ವ ಪಡೆಯುವುದು ಮತ್ತು ಅವುಗಳ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದನ್ನು ನಿಷೇಧಿಸಿರುವ ನಿಯಮವನ್ನು ಪ್ರಶ್ನಿಸಿ ಗುಪ್ತಾ ಅವರು ಕಳೆದ ವರ್ಷ ಸೆಪ್ಟೆಂಬರ್ 19 ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
‘ಕೇಂದ್ರ ಸರ್ಕಾರದ ಅನೇಕ ನೌಕರರು ಹಲವು ವಿಧಗಳಲ್ಲಿ ದೇಶ ಸೇವೆ ಸಲ್ಲಿಸುವ ಆಕಾಂಕ್ಷೆ ಹೊಂದಿರುತ್ತಾರೆ. ಆದರೆ ಈ ನಿಷೇಧದಿಂದಾಗಿ ಐದು ದಶಕಗಳವರೆಗೆ ಅವರ ಆಕಾಂಕ್ಷೆಗೆ ಅಡ್ಡಿಯಾಗಿತ್ತು. ಇದೀಗ ನ್ಯಾಯಾಲಯದ ಗಮನಕ್ಕೆ ಬಂದಾಗ ಆ ನಿಷೇಧವನ್ನು ತೆಗೆದು ಹಾಕಲಾಗಿದೆ’ ಎಂದು ಪೀಠವು ಹೇಳಿತು.
ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸುವುದು ಮತ್ತು ಸದಸ್ಯತ್ವ ಪಡೆಯುವುದಕ್ಕೆ ವಿಧಿಸಲಾಗಿದ್ದ ನಿಷೇಧವನ್ನು ಕೇಂದ್ರ ಸರ್ಕಾರ ಈಚೆಗೆ ವಾಪಸ್ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.