ADVERTISEMENT

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಎಲಿವೇಟೆಡ್ ಕಾರಿಡಾರ್‌ಗೆ ಒತ್ತಾಯ

ಹೆದ್ದಾರಿಯಲ್ಲಿ ಸಂಚಾರ ನಿಷೇಧದಿಂದ ತಾರತಮ್ಯ

​ಪ್ರಜಾವಾಣಿ ವಾರ್ತೆ
Published 23 ಜನವರಿ 2020, 23:31 IST
Last Updated 23 ಜನವರಿ 2020, 23:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರ ನಿಷೇಧಿಸಿರುವ ಕ್ರಮ ತಾರತಮ್ಯದಿಂದ ಕೂಡಿದೆ ಎಂದು ಕೇರಳ ಅಭಿಪ್ರಾಯಪಟ್ಟಿದೆ.

ಹೆದ್ದಾರಿಗೆ ಪರ್ಯಾಯ ಮಾರ್ಗ ಅಭಿವೃದ್ಧಿಪಡಿಸುವ ಬಗ್ಗೆ ಕೇಂದ್ರ ಸರ್ಕಾರ ನೀಡಿರುವ ಸಲಹೆ ಕುರಿತು ಸುಪ್ರೀಂ ಕೋರ್ಟ್‌ಗೆ ಬುಧವಾರ ಸಲ್ಲಿಸಿರುವ ಹೇಳಿಕೆಯಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಕೇರಳ ಸರ್ಕಾರ, ಯಾವುದೇ ವೈಜ್ಞಾನಿಕ ಅಧ್ಯಯನ ಅಥವಾ ಆಧಾರವಿಲ್ಲದೆ ನಿಷೇಧ ಹೇರಿದ್ದರಿಂದ ಸಾರ್ವಜನಿಕರನ್ನು ಸಂಕಷ್ಟಕ್ಕೆ ಈಡುಮಾಡಿದೆ ಎಂದು ಹೇಳಿದೆ.

ಅಸ್ಸಾಂನಲ್ಲಿರುವ ಕಾಜಿರಂಗ ರಾಷ್ಟ್ರೀಯ ಉದ್ಯಾನ, ಮಧ್ಯಪ್ರದೇಶದ ಕನ್ಹಾ ಹಾಗೂ ಪೆಂಚ್‌ ಹುಲಿ ಸಂರಕ್ಷಿತ ಪ್ರದೇಶಗಳ ಬಳಿಯ ಹೆದ್ದಾರಿಗಳಲ್ಲಿ ಸಂಚಾರಕ್ಕೆ ನಿರ್ಬಂಧ ಹೇರದೆ, 2.2 ಕಿಲೋಮೀಟರ್‌ವರೆಗೆ ಎಲಿವೇಟೆಡ್ ಕಾರಿಡಾರ್‌ ನಿರ್ಮಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ– 212ರಲ್ಲಿ 5 ಎಲಿವೇಟೆಡ್‌ ಕಾರಿಡಾರ್‌ ನಿರ್ಮಿಸುವಂತೆ ಕೇಂದ್ರದ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ ನೇತೃತ್ವದ ಸಮಿತಿ ಈ ಮುಂಚೆ ನೀಡಿರುವ ಸಲಹೆಯನ್ನು ಪಾಲಿಸಬೇಕು. ಇದಕ್ಕೆ ಅಗತ್ಯವಿರುವ ₹250 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಮೀಸಲಿರಿಸಿದೆ ಎಂದು ಹೇಳಿಕೆಯಲ್ಲಿ ವಿವರಿಸಲಾಗಿದೆ.

ADVERTISEMENT

ಕೇಂದ್ರ ಸರ್ಕಾರ ಬಂಡೀಪುರ ಬಳಿಯ ಹೆದ್ದಾರಿಗೆ ಪರ್ಯಾಯವಾಗಿ ಸೂಚಿಸಿರುವ ಮಾರ್ಗದಲ್ಲೂ ವನ್ಯಜೀವಿಗಳ ಮುಕ್ತ ಸಂಚಾರ ಇದೆ. ಅಂದಾಜು 40 ಕಿಲೋ ಮೀಟರ್‌ನಷ್ಟು ಅಂತರ ಹಚ್ಚಿಸುವ ಈ ಮಾರ್ಗದ ಅಭಿವೃದ್ಧಿಗಾಗಿ ಅಗತ್ಯ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ಮತ್ತಷ್ಟು ಸಮಯ ವ್ಯಯವಾಗಲಿದೆ ಎಂದು ತಿಳಿಸಲಾಗಿದೆ.

ದೇಶದ ಪ್ರಮುಖ 50 ಹುಲಿ ಸಂರಕ್ಷಿತ ಪ್ರದೇಶಗಳ ನಿರ್ವಹಣೆಯ ಹೊಣೆ ಹೊತ್ತಿರುವ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರವು ಆಯಾ ಪ್ರದೇಶದಲ್ಲಿನ ವಾಹನ ಸಂಚಾರ ಕುರಿತು ವೈಜ್ಞಾನಿಕ ಅಧ್ಯಯನ ನಡೆಸಿಲ್ಲ. ರಾತ್ರಿ ಸಂಚಾರ ನಿಷೇಧಿಸುವಂತೆಯೂ ಶಿಫಾರಸು ಮಾಡಿಲ್ಲ. ಆದರೂ, ಸಂಚಾರ ನಿಷೇಧಿಸಿರುವ ಸ್ಥಳೀಯ ಪ್ರಾಧಿಕಾರದ ಕ್ರಮವು ಮೋಟಾರು ವಾಹನ ಕಾಯ್ದೆ– 1988ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಮುಕ್ತ ಸಂಚಾರದ ಮೂಲಭೂತ ಹಕ್ಕನ್ನು ಕಿತ್ತುಕೊಂಡಿದೆ ಎಂದು ಕೇರಳ ಆರೋಪಿಸಿದೆ.

ಸಂಚಾರ ನಿಷೇಧದಿಂದಾಗಿ ಬೆಂಗಳೂರು ಹಾಗೂ ಮೈಸೂರಿಗೆ ತೆರಳಲು ಕೇರಳದ ಕೋಯಿಕ್ಕೋಡ್‌ ಮತ್ತು ವಯನಾಡು ನಿವಾಸಿಗಳಿಗೆ ತೀವ್ರ ಸಮಸ್ಯೆ ಎದುರಾಗಿದೆ. ದಿನಬಳಕೆಯ ಅಗತ್ಯ ವಸ್ತುಗಳ ಸಾಗಣೆಗೂ ಅನನುಕೂಲವಾಗುತ್ತಿದೆ. ಮೇಲಾಗಿ ವನ್ಯಜೀವಿಗಳು ರಾತ್ರಿ ಸಂಚಾರ ನಿರ್ಬಂಧಕ್ಕೆ ತಕ್ಕುದಾಗಿ ಹೊಂದಿಕೊಂಡಿವೆ ಎಂಬ ಕರ್ನಾಟಕದ ವಾದವೂ ಸ್ವೀಕಾರಾರ್ಹವಲ್ಲ ಎಂದು ದೂರಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.