
ಕೋಲ್ಕತ್ತ (ಪಿಟಿಐ): ಬಾಂಗ್ಲಾದೇಶದ ಕೆಲವು ಪ್ರದೇಶಗಳಲ್ಲಿ 5.5ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಪರಿಣಾಮವಾಗಿ ಕೋಲ್ಕತ್ತ ಮತ್ತು ಪಶ್ಚಿಮ ಬಂಗಾಳದ ಕೆಲ ಜಿಲ್ಲೆಗಳಲ್ಲಿ ಶುಕ್ರವಾರ ಮಧ್ಯಾಹ್ನ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಮಧ್ಯಾಹ್ನ 1.22ರ ಸುಮಾರಿಗೆ ಭೂಮಿ ಕಂಪಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದರು.
ಬಾಂಗ್ಲಾದೇಶದ ನಯಾಬಜಾರ್‌ನಲ್ಲಿ ಭೂಕಂಪನ ಕೇಂದ್ರ ಬಿಂದು ಪತ್ತೆಯಾಗಿದೆ. ಕೋಲ್ಕತ್ತ ಮತ್ತು ಪಶ್ಚಿಮ ಬಂಗಾಳದಲ್ಲಿ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿಗೆ ಹಾನಿಯಾದ ಬಗ್ಗೆ ವರದಿಯಾಗಿಲ್ಲ ಎಂದು ಹೇಳಿದರು.
ಭೂಮಿ ಕಂಪಿಸಿಸುತ್ತಿದ್ದಂತೆಯೇ ಜನರು ಆತಂಕದಿಂದ ಸುರಕ್ಷಿತ ಸ್ಥಳಕ್ಕೆ ದೌಡಾಯಿಸಿದ್ದರು.
ಸಿಬ್ಬಂದಿ ಸಚಿವಾಲಯ, ಮುಖ್ಯ ಚುನಾವಣಾ ಆಯುಕ್ತರ ಕಚೇರಿ ಮತ್ತು ವಿಧಾನಸಭೆಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಆತಂಕದಿಂದ ಕಟ್ಟಡದಿಂದ ಹೊರಬಂದಿದ್ದರು.
ಸಾಲ್ಟ್ ಲೇಕ್ ಮತ್ತು ಬಹುಮಹಡಿ ಕಟ್ಟಡಗಳಿರುವ ಹಲವು ಪ್ರದೇಶಗಳಲ್ಲಿಯೂ ಇಂಥದ್ದೇ ವಾತಾವರಣ ಕಂಡುಬಂದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.