ಶಿಲ್ಲಾಂಗ್: ಅಕ್ರಮವಾಗಿ ದೇಶದೊಳಗೆ ನುಸುಳಿ, ಮೇಘಾಲಯದ ನೈರುತ್ಯ ಖಾಸಿ ಪರ್ವತ ಜಿಲ್ಲೆಯಲ್ಲಿ ಅಪಹರಣ ಯತ್ನ ನಡೆಸುತ್ತಿದ್ದ ಆರೋಪದ ಮೇಲೆ ಬಾಂಗ್ಲಾದೇಶದ ಪ್ರಜೆಗೆ ಸ್ಥಳೀಯರು ಥಳಿಸಿದ್ದು, ತೀವ್ರ ಗಾಯಗೊಂಡಿದ್ದ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಮೃತ ವ್ಯಕ್ತಿಯನ್ನು ಆಕ್ರಂ ಎಂದು ಗುರುತಿಸಲಾಗಿದೆ. ಈತ ಸೋಮವಾರ ಸಂಜೆ 4.30ರ ವೇಳೆಗೆ ಕೈಥಾ ಕೋನಾ ಗ್ರಾಮದ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ. ಮನಸೋ ಇಚ್ಛೆ ಥಳಿಸಿದ ನಂತರ ಗ್ರಾಮಸ್ಥರು ಆತನನ್ನು ಪೊಲೀಸರಿಗೆ ಒಪ್ಪಿಸಿದ್ದರು. ಆಸ್ಪತ್ರೆ ಕೊಂಡೊಯ್ದ ನಂತರ ಆತ ಮೃತಪಟ್ಟಿದ್ದಾನೆ ಎಂದು ಅವರು ಹೇಳಿದರು.
ಅಪಹರಣ ಯತ್ನದ ಆರೋಪದ ಮೇಲೆ ಸ್ಥಳೀಯರು ಹಿಡಿದುಕೊಟ್ಟ ಆರನೇ ವ್ಯಕ್ತಿ ಆಕ್ರಂ. ಈ ಮುಂಚೆ ಗ್ರಾಮಸ್ಥರು ಸೆರೆಹಿಡಿದಿದ್ದ ಬಾಂಗ್ಲಾ ವ್ಯಕ್ತಿಯ ಬಳಿ ಇದ್ದ ಬಂದೂಕು, ಬಾಂಗ್ಲಾ ಗುರುತಿನ ಚೀಟಿ ಮತ್ತಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿತ್ತು ಎಂದು ಪೊಲೀಸ್ ವರಿಷ್ಠಾಧಿಕಾರಿ ಬನ್ರಾಪ್ ಜೈರ್ವಾ ಅವರು ತಿಳಿಸಿದರು.
ಅಪಹರಣ ಯತ್ನದ ಹಿಂದಿನ ಉದ್ದೇಶ ಏನು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.