
ಬಂಧನ (ಸಾಂದರ್ಭಿಕ ಚಿತ್ರ)
ಕೋಲ್ಕತ್ತ: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಶೀರ್‌ಹಾಟ್ ಗಡಿ ಭಾಗದಲ್ಲಿ ಅಕ್ರಮವಾಗಿ ಹೊರ ಹೋಗುತ್ತಿದ್ದ 48 ಮಂದಿ ಬಾಂಗ್ಲಾದೇಶಿ ನುಸುಳುಕೋರರನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಬಿಎಸ್‌ಎಫ್ ಅಧಿಕಾರಿಯೊಬ್ಬರ ಪ್ರಕಾರ, ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಘೋಷಿಸಿದ ಬೆನ್ನಲ್ಲೇ ಇವರೆಲ್ಲಾ ಭಾರತವನ್ನು ತೊರೆಯುತ್ತಿದ್ದರು ಎನ್ನಲಾಗಿದೆ. ಶನಿವಾರ ರಾತ್ರಿ 15 ಮಂದಿ, ಭಾನುವಾರ 33 ಮಂದಿಯನ್ನು ವಶಕ್ಕೆ ಪಡೆದ ಬಿಎಸ್‌ಎಫ್ ಅಧಿಕಾರಿಗಳು ಸ್ವರೂಪ್ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
‘ಪಶ್ಚಿಮ ಬಂಗಾಳ ಮತ್ತು ಇತರೆ ರಾಜ್ಯಗಳಲ್ಲಿ ಕಾರ್ಮಿಕರು ಮತ್ತು ಸೇವಕರಾಗಿ ಇವರು ಕೆಲಸ ಮಾಡುತ್ತಿದ್ದರು. ಮತಗಟ್ಟೆ ಅಧಿಕಾರಿಗಳು ಮನೆ–ಮನೆಗೆ ಭೇಟಿ ನೀಡಿ ದಾಖಲೆ ಪರಿಶೀಲಿಸಿದರೆ ಸಿಕ್ಕಿ ಬೀಳಬಹುದು. ಬಂಧನ ಅಥವಾ ಗಡಿಪಾರು ಆಗುವ ಭೀತಿಯಿಂದ ಗಡಿದಾಟಿ ಹೋಗುತ್ತಿದ್ದರು’ ಎಂದು ಹೇಳಿದ್ದಾರೆ.
‘ಕಳೆದ ಮೂರು ದಿನಗಳಲ್ಲಿ ಇದೇ ಮಾರ್ಗವಾಗಿ ಹೊರ ಹೋಗುತ್ತಿದ್ದ 89 ಮಂದಿ ಬಾಂಗ್ಲಾದೇಶಿ ಅಕ್ರಮ ವಲಸಿಗರನ್ನು ಬಂಧಿಸಿ ಪೊಲೀಸ್ ವಶಕ್ಕೆ ನೀಡಲಾಗಿದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.