
ಬಂಧನ (ಸಾಂದರ್ಭಿಕ ಚಿತ್ರ)
ಡೆಹ್ರಾಡೂನ್(ಉತ್ತರಾಖಂಡ): ನಕಲಿ ದಾಖಲೆ ಹಾಗೂ ಹಿಂದೂ ಹೆಸರನ್ನು ಬಳಸಿಕೊಂಡು ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಬಾಂಗ್ಲಾದೇಶದ ಮಹಿಳೆಯನ್ನು ಡೆಹ್ರಾಡೂನ್ ಪೊಲೀಸರು ಬಂಧಿಸಿದ್ದಾರೆ.
ನಕಲಿ ಗುರುತಿನ ಬಳಸಿಕೊಂಡು ರಾಜ್ಯದಲ್ಲಿ ವಾಸಿಸುವ ಜನರ ವಿರುದ್ಧ ಉತ್ತರಾಖಂಡ ಸರ್ಕಾರ ಆರಂಭಿಸಿರುವ ‘ಆಪರೇಷನ್ ಕಾಲನೇಮಿ‘ ಕಾರ್ಯಾಚರಣೆಯ ವೇಳೆ ಬಾಂಗ್ಲಾ ಮಹಿಳೆಯನ್ನು ಬಂಧಿಸಲಾಗಿದೆ.
ಬಬ್ಲಿ ಬೇಗಂ (28) ಬಂಧಿತ ಮಹಿಳೆ. ಭೂಮಿ ಶರ್ಮಾ ಎಂಬ ಹೆಸರಿನಲ್ಲಿ ನಕಲಿ ಗುರುತಿನ ಚೀಟಿ ಹೊಂದಿದ್ದ ಈ ಮಹಿಳೆ ಡೆಹ್ರಾಡೂನ್‌ನ ಪಟೇಲ್ ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದ ಗೈಬಂದ್ ಜಿಲ್ಲೆಯ ನಿವಾಸಿಯಾದ ಬೇಗಂ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ತಾನು ಅಕ್ರಮವಾಗಿ ಗಡಿ ದಾಟಿ ಭಾರತಕ್ಕೆ ಬಂದಿದ್ದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ. ದೇಶದ ವಿವಿಧ ಸ್ಥಳಗಳಲ್ಲಿ ವಾಸಿಸುತ್ತಿದ್ದ ಮಹಿಳೆ ನಂತರ 2021ರಲ್ಲಿ ಡೆಹ್ರಾಡೂನ್‌ಗೆ ಬಂದಿದ್ದಾಗಿ ಹೇಳಿದ್ದಾರೆ. 2022ರಲ್ಲಿ ಡೆಹ್ರಾಡೂನ್‌ನ ವ್ಯಕ್ತಿಯನ್ನು ಮದುವೆಯಾಗಿ ಭೂಮಿ ಶರ್ಮಾ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಪಡೆದಿದ್ದೇನೆ ಎಂದು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭೂಮಿ ಶರ್ಮಾ ಹೆಸರಿನಲ್ಲಿರುವ ಆಧಾರ್ ಕಾರ್ಡ್ , ಆಯುಷ್ಮಾನ್ ಕಾರ್ಡ್, ಪಡಿತರ ಚೀಟಿ , ಮತದಾರರ ಗುರುತಿನ ಚೀಟಿ, ಇತರ ನಕಲಿ ಭಾರತೀಯ ದಾಖಲೆಗಳು ಹಾಗೂ ಬಬ್ಲಿ ಬೇಗಂ ಹೆಸರಿನಲ್ಲಿರುವ ಬಾಂಗ್ಲಾದೇಶದ ಗುರುತಿನ ಚೀಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದ ಈ ಮಹಿಳೆಯ ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ನಕಲಿ ದಾಖಲೆಗಳನ್ನು ಸೃಷ್ಟಿಸಲು ಇವರಿಗೆ ಸಹಾಯ ಮಾಡಿದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.