ADVERTISEMENT

ಎಸ್‌ಬಿಐಗೆ ₹95 ಕೋಟಿ ವಂಚನೆ: ಉದ್ಯಮಿ ಕೌಶಿಕ್‌ ಕುಮಾರ್‌ ಬಂಧಿಸಿದ ಇ.ಡಿ

ಪಿಟಿಐ
Published 1 ಏಪ್ರಿಲ್ 2023, 11:37 IST
Last Updated 1 ಏಪ್ರಿಲ್ 2023, 11:37 IST
ಜಾರಿ ನಿರ್ದೇಶನಾಲಯ
ಜಾರಿ ನಿರ್ದೇಶನಾಲಯ   

ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ₹95 ಕೋಟಿ ವಂಚಿಸಿದ ಆರೋಪದ ಮೇಲೆ ಕೋಲ್ಕತ್ತ ಮೂಲದ ಉದ್ಯಮಿಯೊಬ್ಬರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾನೂನಿನ ಅಡಿಯಲ್ಲಿ ಬಂಧಿಸಿರುವುದಾಗಿ ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ತಿಳಿಸಿದೆ.

ಮಾರ್ಚ್‌ 30ರಂದು ಉದ್ಯಮಿ ಕೌಶಿಕ್‌ ಕುಮಾರ್‌ ನಾಥ್‌ ಅವರನ್ನು ಬಂಧಿಸಲಾಗಿದ್ದು, ಕೋಲ್ಕತ್ತದ ವಿಶೇಷ ನ್ಯಾಯಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಆರೋಪಿಯನ್ನು ಏಪ್ರಿಲ್‌ 10ರ ವರೆಗೆ ಇ.ಡಿ ಕಸ್ಟಡಿಗೆ ನೀಡಿದೆ.

ಕೌಶಿಕ್‌ ಕುಮಾರ್‌, ನಕಲಿ ದಾಖಲೆಗಳನ್ನು ಸೃಷ್ಟಿಸಿ ಎಸ್‌ಬಿಐಗೆ ಸಲ್ಲಿಸಿ ಸಾಲ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ ಎಂದು ಇ.ಡಿ ಹೇಳಿದೆ.

ADVERTISEMENT

ಕ್ರೆಡಿಟ್‌ ಸೌಲಭ್ಯದ ಮೂಲಕ ಹಣವನ್ನು ಸ್ವೀಕರಿಸಿ ನಗದು ರೂಪದಲ್ಲಿ ಹಣವನ್ನು ಜಮಾ ಮಾಡಲಾಗಿದ್ದು, ಮಂಜೂರು ಮಾಡಲಾದ ಉದ್ದೇಶಕ್ಕಾಗಿ ಹಣ ಬಳಸದೆ ಇತರ ಉದ್ದೇಶಗಳಿಗೆ ಬಳಸಲಾಗಿದೆ. ಈ ಮೂಲಕ ಎಸ್‌ಬಿಐಗೆ ₹95 ಕೋಟಿ ವಂಚಿಸಲಾಗಿದೆ ಎಂದು ಇ.ಡಿ ಹೇಳಿದೆ.

ಕೌಶಿಕ್‌ ವಿರುದ್ಧ ಮುಂಬೈ ಪೊಲೀಸ್‌ ಕ್ರೈಂ ಬ್ರಾಂಚ್‌ನಲ್ಲಿ ದಾಖಲಾಗಿರುವ ಪ್ರಕರಣವನ್ನು ಹೊರತುಪಡಿಸಿ, ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕೇಂದ್ರಿಯ ತನಿಖಾ ದಳ (ಸಿಬಿಐ) ನಾಲ್ಕು ಎಫ್‌ಐಆರ್‌ ದಾಖಲಿಸಿದೆ.

’ಆರೋಪಿಯು ಆಗಾಗ್ಗೆ ತಮ್ಮ ಗುರುತನ್ನು ಬದಲಾಯಿಸಿ ಬ್ಯಾಂಕ್‌ಗಳಿಗೆ ವಂಚಿಸುತ್ತಿದ್ದರು. ಇತ್ತೀಚೆಗೆ, ಅವರು ತಮ್ಮ ನೆಲೆಯನ್ನು ಮುಂಬೈಗೆ ಬದಲಾಯಿಸಿದ್ದು, ಅಲ್ಲಿಯೂ ಸಹ ಇದೇ ರೀತಿಯ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ್ದರು’ ಎಂದು ಇ.ಡಿ ತಿಳಿಸಿದೆ.

ಈ ಪ್ರಕರಣದಲ್ಲಿ ₹3.68 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.