ADVERTISEMENT

ಜಮ್ಮು–ಕಾಶ್ಮೀರ: ಬ್ಯಾಂಕ್‌ ಮ್ಯಾನೇಜರ್‌ ಮೇಲೆ ಉಗ್ರರ ದಾಳಿ, ಹತ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜೂನ್ 2022, 7:03 IST
Last Updated 2 ಜೂನ್ 2022, 7:03 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ರಾಜಸ್ಥಾನದ ಹನುಮಾನ್‌ಗಡ ಮೂಲದ ಬ್ಯಾಂಕ್‌ ಮ್ಯಾನೇಜರ್‌ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಗುರುವಾರ ಈ ಘಟನೆ ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಅರೇಹ್‌ ಮೋಹನ್‌ಪೊರಾದ ಇಲಾಖಿ ದೆಹಾತಿ ಬ್ಯಾಂಕ್‌ನ (Ellaqui Dehati Bank) ವ್ಯವಸ್ಥಾಪಕ ವಿಜಯ್‌ ಕುಮಾರ್‌ ಅವರನ್ನು ಬ್ಯಾಂಕ್‌ ಆವರಣದೊಳಗೆ ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಸ್ಥಳವನ್ನು ಪೊಲೀಸರು ಸುತ್ತುವರಿದಿದ್ದು, ತನಿಖೆ ಕೈಗೊಂಡಿದ್ದಾರೆ.

ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತೀವ್ರವಾಗಿ ಗಾಯಗೊಂಡಿದ್ದ ಅವರು ಸಾವಿಗೀಡಾದರು.

ADVERTISEMENT

ಕಾಶ್ಮೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದೂ ಸಮುದಾಯದವರು ಮತ್ತು ಅವರ ಕುಟುಂಬದವರಿಗೆ ಸೂಕ್ತ ಭದ್ರತೆ ಒದಗಿಸುವಂತೆ ಒತ್ತಾಯಿಸಿ ಜಮ್ಮುವಿನಲ್ಲಿ ಪ್ರತಿಭಟನೆ ನಡೆಸಲಾಗುತ್ತಿದೆ.

ಸ್ಥಳಿಯೇತರರನ್ನು ಗುರಿಯಾಗಿಸಿಕೊಂಡು ಉಗ್ರರು ದಾಳಿ ಮುಂದುವರಿಸಿದ್ದು, ವಾರದ ಅಂತರದಲ್ಲಿ ನಾಗರಿಕರ ಮೇಲೆ ನಡೆದಿರುವ ಎರಡನೇ ದಾಳಿ ಇದಾಗಿದೆ. ಇತ್ತೀಚೆಗೆ ಶಾಲಾ ಶಿಕ್ಷಕಿಯೊಬ್ಬರ ಮೇಲೆ ಉಗ್ರರು ದಾಳಿ ನಡೆಸಿ ಹತ್ಯೆ ಮಾಡಿದ್ದರು.

'ಉಗ್ರರು ಈಗ ಸಾರ್ವಜನಿಕ ಸೇವೆಯಲ್ಲಿರುವವರನ್ನೂ ಗುರಿಯಾಗಿಸಿಕೊಂಡಿದ್ದಾರೆ. ಇದು ತೀವ್ರ ಕಳವಳ ಸಂಗತಿಯಾಗಿದೆ. ಈ ಹಿಂಸಾಚಾರವನ್ನು ತಡೆಯುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಸೂಕ್ತ ಯೋಜನೆ ರೂಪಿಸಲು ಸಕಾಲವಾಗಿದೆ' ಎಂದು ಜಮ್ಮು–ಕಾಶ್ಮೀರದ ಬಿಜೆಪಿ ವಕ್ತಾರ ಅಲ್ತಾಫ್‌ ಠಾಕೂರ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.