ಲಖನೌ: ಉತ್ತರಪ್ರದೇಶದ ಮಥುರಾ ಜಿಲ್ಲೆಯ ವೃಂದಾವನದಲ್ಲಿರುವ ಹೆಸರಾಂತ ಬಂಕೆ ಬಿಹಾರಿ ದೇವಾಲಯದ ಖಜಾನೆಯನ್ನು 54 ವರ್ಷದ ಬಳಿಕ ಶನಿವಾರ ತೆರೆಯಲಾಗಿದೆ.
‘ಸೇವಾಯತ್’ಗಳ (ದೇವಾಲಯದ ಆನುವಂಶಿಕ ಪಾಲಕರಾದ ಗೋಸ್ವಾಮಿ ಪುರೋಹಿತರು) ಒಂದು ಗುಂಪಿನ ಪ್ರತಿಭಟನೆ ಹೊರತಾಗಿಯೂ ದೇವಾಲಯ ಆಡಳಿತ ಮಂಡಳಿಯ ಪದಾಧಿಕಾರಿಗಳ ಸಮ್ಮುಖದಲ್ಲಿ ಖಜಾನೆಯನ್ನು ತೆರೆಯಲಾಗಿದೆ.
ದೇವಾಲಯ ನಿರ್ವಹಣಾ ಸಮಿತಿಯ ಆದೇಶದ ಮೇರೆಗೆ ಖಜಾನೆಯನ್ನು ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
‘ಒಂದು ಮರದ ಪೆಟ್ಟಿಗೆ, ಮೂರು ಪಾತ್ರೆ, ಮೂರು ಬಟ್ಟಲು, ಒಂದು ‘ಪರಾತ್’ (ಅಗಲವಾದ ತಟ್ಟೆ), ಒಂದು ಸಣ್ಣ ಬೆಳ್ಳಿ ಛತ್ರಿ ಮತ್ತು 1970ರ ಫೆಬ್ರುವರಿ 2 ದಿನಾಂಕದ ಪತ್ರವೊಂದು ಕಂಡುಬಂದಿದೆ ಎಂದು ವರದಿಗಳು ತಿಳಿಸಿವೆ. ವಸ್ತುಗಳನ್ನು ಹೊರತೆಗೆಯುವ ಕೆಲಸ ಇನ್ನೂ ಮುಂದುವರೆದಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸೇವಾಯತ್’ಗಳ ಒಂದು ಗುಂಪು ದೇವಾಲಯದ ಖಜಾನೆ ತೆರೆಯುವಿಕೆಯನ್ನು ವಿರೋಧಿಸಿತ್ತು. ವಸ್ತುಗಳನ್ನು ಹೊರತೆಗೆಯುವ ಪ್ರಕ್ರಿಯೆಯನ್ನು ಪರದೆಯ ಮೂಲಕ ನೇರಪ್ರಸಾರ ಮಾಡಬೇಕೆಂದು ಒತ್ತಾಯಿಸಿತ್ತು ಎಂದು ವರದಿಗಳು ತಿಳಿಸಿವೆ.
ಈ ಹಿಂದೆ 1971ರಲ್ಲಿ ದೇವಾಲಯದ ಖಜಾನೆಯನ್ನು ತೆರೆಯಲಾಗಿತ್ತು. ನಂತರ ಅದನ್ನು ತೆರೆಯಲು ಪ್ರಯತ್ನಿಸಿದ್ದಾದರೂ ಸಾಧ್ಯವಾಗಿರಲಿಲ್ಲ. 1926 ಮತ್ತು 1936ರಲ್ಲಿ ಖಜಾನೆಯ ಎರಡು ಕಳ್ಳತನ ಪ್ರಕರಣಗಳು ವರದಿಯಾಗಿದ್ದವು. ಬಳಿಕ ನ್ಯಾಯಾಲಯದ ನಿರ್ದೇಶನದ ಮೇರೆಗೆ ಬಾಗಿಲನ್ನು ಮುಚ್ಚಲಾಯಿತು ಎಂದು ಇತಿಹಾಸಕಾರರೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.