ADVERTISEMENT

ಕನ್ನಡದಲ್ಲೂ ಬ್ಯಾಂಕಿಂಗ್‌ ಪರೀಕ್ಷೆ

‍ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳಿಗೆ ನೇಮಕಾತಿ

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:47 IST
Last Updated 4 ಜುಲೈ 2019, 19:47 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ನೇಮಕಾತಿಗೆ ನಡೆಯುವ ಪರೀಕ್ಷೆಗಳನ್ನು ಕನ್ನಡ ಮತ್ತು ಕೊಂಕಣಿ ಸೇರಿದಂತೆ ಒಟ್ಟು 13 ಭಾಷೆಗಳಲ್ಲಿ ಬರೆಯಲು ಇನ್ನು ಮುಂದೆ ಅವಕಾಶ ದೊರೆಯಲಿದೆ.

ಇದೇ ವರ್ಷದಿಂದ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸಲಾಗುವುದು. ಅಸ್ಸಾಮಿ, ಬೆಂಗಾಲಿ, ಗುಜರಾತಿ, ಕನ್ನಡ, ಕೊಂಕಣಿ, ಮಲಯಾಳ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ಸಿಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಲೋಕಸಭೆಯಲ್ಲಿ ಗುರುವಾರ ತಿಳಿಸಿದ್ದಾರೆ.

ಇದುವರೆಗೆ ಇದ್ದ ಇಂಗ್ಲಿಷ್‌ ಮತ್ತು ಹಿಂದಿ ಆಯ್ಕೆ ಜೊತೆಗೆ ಅಭ್ಯರ್ಥಿಗಳು ತಾವು ಆಯ್ಕೆ ಮಾಡುವ ರಾಜ್ಯ ಭಾಷೆಯಲ್ಲಿಯೂ ಉತ್ತರಿಸುವ ಅವಕಾಶ ಕಲ್ಪಿಸಲಾಗುವುದು ಎಂದು ಅವರು ಪ್ರಕಟಿಸಿದರು.

ADVERTISEMENT

ಈ ಪರೀಕ್ಷೆಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ನಡೆಸುವಂತೆ ಕರ್ನಾಟಕ ಸರ್ಕಾರ ಸೇರಿದಂತೆ ದೇಶದ ಅನೇಕ ಕಡೆಗಳಿಂದ ಆಗ್ರಹ ವ್ಯಕ್ತವಾಗಿತ್ತು.

2014ಕ್ಕೂ ಮುನ್ನ ಬ್ಯಾಂಕಿಂಗ್‌ ಸಿಬ್ಬಂದಿ ಆಯ್ಕೆ ಸಂಸ್ಥೆ (ಐಬಿಪಿಎಸ್‌) 13 ಭಾಷೆಗಳಲ್ಲಿ ನೇಮಕಾತಿ ಪರೀಕ್ಷೆಗಳನ್ನು ನಡೆಸುತ್ತಿತ್ತು. ಆದರೆ 2014ರಲ್ಲಿ ನೇಮಕಾತಿ ನಿಯಮಗಳನ್ನು ಬದಲಾಯಿಸಿ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಪರೀಕ್ಷೆ ನಡೆಸಲು ನಿರ್ಧರಿಸಿತ್ತು.

ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ಪಡೆದ ಅಭ್ಯರ್ಥಿಗಳು ಪ್ರಸ್ತುತ ಇರುವ ಪದ್ಧತಿಯಲ್ಲಿ ಪರೀಕ್ಷೆ ಬರೆಯುವುದು ಕಷ್ಟವಾಗುತ್ತಿದೆ. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು ಆಯಾ ರಾಜ್ಯಗಳಲ್ಲಿ ಗ್ರಾಮೀಣ ಜನರೊಡನೆ ಕೆಲಸ ಮಾಡುತ್ತವೆ. ಆದ್ದರಿಂದ ಅಭ್ಯರ್ಥಿಗಳು ಸ್ಥಳೀಯ ಭಾಷೆ
ಯನ್ನು ಅರಿಯುವುದು ಬಹುಮುಖ್ಯ. ಇದರಿಂದ ಉದ್ಯೋಗಿಗಳು ಸಮರ್ಥವಾಗಿ ಕೆಲಸ ನಿರ್ವಹಿಸುವುದು ಸಾಧ್ಯವಾಗುತ್ತದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.