ನವದೆಹಲಿ: ‘ಕೋವಿಡ್–19 ಕಾರಣದಿಂದ ಮರುಪಾವತಿ ಮುಂದೂಡಿಕೆಯಾದ ಅವಧಿಯ ಸಾಲದ ಬಡ್ಡಿಯನ್ನು ಪೂರ್ತಿಯಾಗಿ ಮನ್ನಾ ಮಾಡಿದರೆ ಅರ್ಥವ್ಯವಸ್ಥೆಯ ಪ್ರಮುಖ ಭಾಗವಾಗಿರುವ ಬ್ಯಾಂಕ್‌ಗಳು ದುರ್ಬಲಗೊಳ್ಳುತ್ತವೆ’ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ.
‘ಬೇರೆಬೇರೆ ಬ್ಯಾಂಕ್ ಹಾಗೂ ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಮೇಲೆ ಕೋವಿಡ್–19ರ ಪರಿಣಾಮವು ಬೇರೆಬೇರೆ ಪ್ರಮಾಣದಲ್ಲಿ ಆಗಿದೆ. ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಬ್ಯಾಂಕ್‌ಗಳು ಬಲಿಷ್ಠಗೊಳ್ಳಬೇಕಾಗಿರುವುದು ಅಗತ್ಯವಾಗಿದೆ. ಸಾಲದ ಮೇಲಿನ ಬಡ್ಡಿಯನ್ನು ಪೂರ್ಣ ಪ್ರಮಾಣದಲ್ಲಿ ಮನ್ನಾ ಮಾಡಿದರೆ ಬ್ಯಾಂಕ್‌ಗಳಿಗೆ ಹಾನಿಯಾಗುತ್ತದೆ’ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಬುಧವಾರ ತಿಳಿಸಿದರು.
ಮಾರ್ಚ್ ತಿಂಗಳ ನಂತರ ಆದಾಯದಲ್ಲಿ ಭಾರಿ ಕುಸಿತ ಆಗಿರುವುದರಿಂದ ಮರುಪಾವತಿ ಮುಂದೂಡಿದ ಅವಧಿಗೆ ಬಡ್ಡಿ ಮತ್ತು ಚಕ್ರಬಡ್ಡಿಯನ್ನು ವಿಧಿಸದಂತೆ ಕೇಂದ್ರ ಸರ್ಕಾರ ಹಾಗೂ ಆರ್‌ಬಿಐಗೆ ಸೂಚನೆ ನೀಡಬೇಕು ಎಂದು ಗಜೇಂದ್ರ ಶರ್ಮಾ ಹಾಗೂ ಇತರರು ಮನವಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಗುರುವಾರರಿಂದ ಈ ಅರ್ಜಿಯ ವಿಚಾರಣೆ ಆರಂಭಿಸುವ ನಿರೀಕ್ಷೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.