ADVERTISEMENT

‘ಐ ಲವ್ ಮಹಮ್ಮದ್’ ಜಾಥಾಗೆ ಸಿಗದ ಅನುಮತಿ |ಬರೇಲಿಯಲ್ಲಿ ಹಿಂಸಾಚಾರ: ಹಲವರ ಬಂಧನ

ಪಿಟಿಐ
Published 26 ಸೆಪ್ಟೆಂಬರ್ 2025, 16:24 IST
Last Updated 26 ಸೆಪ್ಟೆಂಬರ್ 2025, 16:24 IST
ಬರೇಲಿಯಲ್ಲಿ ಉದ್ರಿಕ್ತರನ್ನು ಚೆದುರಿಸಿದ ಪೊಲೀಸರು   ಪಿಟಿಐ ಚಿತ್ರ
ಬರೇಲಿಯಲ್ಲಿ ಉದ್ರಿಕ್ತರನ್ನು ಚೆದುರಿಸಿದ ಪೊಲೀಸರು   ಪಿಟಿಐ ಚಿತ್ರ   

ಬರೇಲಿ: ‘ಐ ಲವ್ ಮಹಮದ್‌’ ಪ್ರದರ್ಶನ ಜಾಥಾವನ್ನು ಕೊನೆ ಕ್ಷಣದಲ್ಲಿ ಮುಂದೂಡಿದ್ದರಿಂದ ಬರೇಲಿಯಲ್ಲಿ ಶುಕ್ರವಾರ ಹಿಂಸಾಚಾರ ಭುಗಿಲೆದ್ದಿತು.

ನಗರದ ಹೃದಯ ಭಾಗದಲ್ಲಿರುವ ಮಸೀದಿಯ ಬಳಿ ಜಾಥಾಗಾಗಿ ಜಮಾಯಿಸಿದ್ದ ಅಸಂಖ್ಯಾತ ಜನರು ಆಕ್ರೋಶಿತರಾಗಿ ಪೊಲೀಸರ ಮೇಲೆ ಕಲ್ಲು ತೂರಿದರು. ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಿದರು. ಕಾಲ್ತುಳಿತದಂತಹ ಪರಿಸ್ಥಿತಿಯೂ ನಿರ್ಮಾಣಗೊಂಡಿತ್ತು.

ಉದ್ರಿಕ್ತ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು. ಹಿಂಸಾಚಾರದಲ್ಲಿ ಗಾಯಗೊಂಡವರ ಸಂಖ್ಯೆ ಗೊತ್ತಾಗಿಲ್ಲ. ಗಲಭೆಯ ನಂತರ ನಗರದ ಬಹುತೇಕ ಕಡೆ ಅಂಗಡಿಗಳನ್ನು ವರ್ತಕರು ಸ್ವಯಂಪ್ರೇರಿತರಾಗಿ ಮುಚ್ಚಿದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

‘ಏಕಾಏಕಿ ಬ್ಯಾನರ್‌ಗಳೊಂದಿಗೆ ಜನಸಮೂಹ ರಸ್ತೆಯಲ್ಲಿ ಮುನ್ನುಗಿ ಬಂದಿತು. ತಡೆಯಲು ಮುಂದಾದ ಪೊಲೀಸರ ಮೇಲೆ ಉದ್ರಿಕ್ತರು ಕಲ್ಲು ತೂರಿದರು. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಪೂರ್ವಯೋಜಿತ ಕೃತ್ಯ ಎಂಬುದು ಗೊತ್ತಾಗುತ್ತಿದೆ. ಘಟನೆಯ ವಿಡಿಯೊ, ಚಿತ್ರ ಬಳಸಿ ದುಷ್ಕೃತ್ಯದಲ್ಲಿ ಭಾಗಿಯಾದವರನ್ನು ಗುರುತಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿಐಜಿ ಅಜಯ್‌ ಕುಮಾರ್‌ ಸಾಹ್ನಿ ತಿಳಿಸಿದರು.

ಪ್ರದರ್ಶನಕ್ಕೆ ಕರೆ ನೀಡಿದ್ದ ತೌಕೀರ್‌:

ಸ್ಥಳೀಯ ಧರ್ಮಗುರು ಹಾಗೂ ಇತ್ತೇಹಾದ್‌–ಎ–ಮಿಲತ್‌ ಕೌನ್ಸಿಲ್‌ನ ಮುಖ್ಯಸ್ಥ ಮೌಲಾನಾ ತೌಕೀರ್‌ ರಜಾ ಖಾನ್ ಅವರು ‘ಐ ಲವ್ ಮಹಮ್ಮದ್‌’ ಅಭಿಯಾನ ಬೆಂಬಲಿಸುವ ಪ್ರದರ್ಶನ ಮೆರವಣಿಗೆ ಆಯೋಜಿಸಿದ್ದರು.

ಜಾಥಾ ಆರಂಭಕ್ಕೂ ಕೆಲ ಕ್ಷಣಗಳಿಗೆ ಮುನ್ನ ಮುಂದೂಡಿದ್ದರಿಂದ ಬೃಹತ್ ಜನಸಮೂಹ ಮತ್ತು ಪೊಲೀಸರ ನಡುವೆ ಮಸೀದಿ ಮುಂಭಾಗ ಘರ್ಷಣೆಗೆ ಕಾರಣವಾಯಿತು ಎನ್ನಲಾಗಿದೆ.

ಕೋತವಾಲಿ ಪ್ರದೇಶದಲ್ಲಿರುವ ಮೌಲ್ವಿಯ ನಿವಾಸ ಹಾಗೂ ಮಸೀದಿಯಿಂದ ಅನತಿ ದೂರದಲ್ಲಿ ‘ಐ ಲವ್ ಮಹಮ್ಮದ್‌’ ಪೋಸ್ಟರ್‌ಗಳನ್ನು ಹಿಡಿದಿದ್ದ ಜನಸಮೂಹವು ಜಮಾಯಿಸಿತ್ತು. ಶುಕ್ರವಾರದ ಮಧ್ಯಾಹ್ನದ ನಮಾಜಿನ ನಂತರ ಪ್ರದರ್ಶನ ಜಾಥಾವನ್ನು ಮುಂದೂಡಿದ್ದಕ್ಕೆ ಆಕ್ರೋಶಗೊಂಡ ಜನರು ಗಲಾಟೆ ನಡೆಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

‘ಅಧಿಕಾರಿಗಳು ಜಾಥಾಗೆ ಅನುಮತಿ ನೀಡಿಲ್ಲ’ ಎಂದು ಹೇಳುವ ಮೂಲಕ ಪ್ರದರ್ಶನವನ್ನು ಮುಂದೂಡಲಾಗುತ್ತಿದೆ ಎಂದು ರಜಾ ಅವರು ಕೊನೆ ಕ್ಷಣದಲ್ಲಿ ಘೋಷಿಸಿದರು ಎಂದು ಮೂಲಗಳು ತಿಳಿಸಿವೆ.

‘ಎಂತಹ ಪರಿಸ್ಥಿತಿ ಎದುರಾದರೂ ಶುಕ್ರವಾರ ಐ ಲವ್ ಮಹಮ್ಮದ್‌ ಜಾಥಾ ನಡೆಸುವುದಾಗಿ’ ತೌಕೀರ್‌ ಗುರುವಾರ ಘೋಷಿಸಿದ್ದರಿಂದ, ಅಪಾರ ಸಂಖ್ಯೆಯ ಜನರು ಜಮಾಯಿಸಿದ್ದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.