ADVERTISEMENT

UP Elections 2022: ಬಿಜೆಪಿಯ ನಾಲ್ಕನೇ ಒಂದರಷ್ಟು ಹಾಲಿ ಶಾಸಕರಿಗಿಲ್ಲ ಟಿಕೆಟ್?

ಸಂಜಯ ಪಾಂಡೆ
Published 11 ಜನವರಿ 2022, 10:36 IST
Last Updated 11 ಜನವರಿ 2022, 10:36 IST
ಯೋಗಿ ಆದಿತ್ಯನಾಥ್
ಯೋಗಿ ಆದಿತ್ಯನಾಥ್   

ಲಖನೌ: ಮುಂಬರುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕನೇ ಒಂದರಷ್ಟು ಹಾಲಿ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡದೇ ಇರುವ ಸಾಧ್ಯತೆ ಇದೆ. ಆಡಳಿತ ವಿರೋಧಿ ಅಲೆ, ತಳಮಟ್ಟದ ಕಾರ್ಯಕರ್ತರಿಂದ ನಕಾರಾತ್ಮಕ ಅಭಿಪ್ರಾಯಗಳು ವ್ಯಕ್ತವಾಗಿರುವುದು ಇದಕ್ಕೆ ಕಾರಣ ಎಂದು ಮೂಲಗಳು ಹೇಳಿವೆ.

ಉತ್ತರ ಪ್ರದೇಶದಲ್ಲಿ ಒಟ್ಟು 7 ಹಂತಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಈ ಪೈಕಿ ಮೊದಲ ಎರಡು ಹಂತಗಳಿಗೆ ಕೆಲವೇ ದಿನಗಳಲ್ಲಿ ಬಿಜೆಪಿಯು ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ನಿರೀಕ್ಷೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಲಖನೌನಲ್ಲಿ ಸೋಮವಾರ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಮೊದಲ ಎರಡು ಹಂತಗಳ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆದಿದೆ.

ADVERTISEMENT

‘ರಾಜ್ಯ ಆಯ್ಕೆ ಸಮಿತಿ ಶಿಫಾರಸು ಮಾಡಿರುವ ಹೆಸರುಗಳ ಪಟ್ಟಿಯನ್ನು ಕೇಂದ್ರ ನಾಯಕರಿಗೆ ಕಳುಹಿಸಿಕೊಡಲಾಗಿದೆ. ಅಂತಿಮ ನಿರ್ಧಾರವನ್ನು ಅವರೇ ಕೈಗೊಳ್ಳಲಿದ್ದಾರೆ’ ಎಂದು ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರ ನಾಯಕರು ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವಾರದ ಕೊನೆಯಲ್ಲಿ ಮೊದಲ ಎರಡು ಹಂತಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.

‘ಶಾಸಕರ ಬಗ್ಗೆ ಅಭಿಪ್ರಾಯ ತಿಳಿಯಲು ವಿವಿಧ ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರ ಸಮೀಕ್ಷೆ ನಡೆಸಲಾಗಿದೆ. ನೂರಕ್ಕೂ ಹೆಚ್ಚು ಶಾಸಕರ ಬಗ್ಗೆ ನಕಾರಾತ್ಮಕ ಅಭಿಪ್ರಾಯಗಳು ಬಂದಿವೆ. ಅವರಿಗೆ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ. ಅವರ ಬದಲಿಗೆ ಹೊಸಬರಿಗೆ ಮಣೆ ಹಾಕುವ ನಿರೀಕ್ಷೆ ಇದೆ’ ಎಂದು ಬಿಜೆಪಿ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಟಿಕೆಟ್ ನಿರಾಕರಿಸಿದರೆ ಅನೇಕ ಹಾಲಿ ಶಾಸಕರು ಪ್ರತಿಸ್ಪರ್ಧಿ ಪಕ್ಷಗಳನ್ನು ಸೇರಬಹುದು ಎಂಬ ವರದಿಗಳ ಕುರಿತಾಗಿಯೂ ಬಿಜೆಪಿಯು ಎಚ್ಚರ ವಹಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಮಧ್ಯೆ, ಹತ್ತಕ್ಕೂ ಹೆಚ್ಚು ಬಿಜೆಪಿ ಶಾಸಕರು ನಮ್ಮೊಂದಿಗೆ ಸಂಪರ್ಕದಲ್ಲಿ ಇದ್ದಾರೆ ಎಂದು ಸಮಾಜವಾದಿ ಪಕ್ಷವು (ಎಸ್‌ಪಿ) ಹೇಳಿಕೊಂಡಿದೆ.

‘ಅನೇಕ ಬಿಜೆಪಿ ಶಾಸಕರು ನಮ್ಮನ್ನು ಸಂಪರ್ಕಿಸಿದ್ದಾರೆ. ಈ ಪೈಕಿ ಹೆಚ್ಚಿನವರು ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ’ ಎಂದು ಸಮಾಜವಾದಿ ಪಕ್ಷದ ನಾಯಕರೊಬ್ಬರು ಹೇಳಿದ್ದಾರೆ.

ಬಿಜೆಪಿ ಶಾಸಕರಾಗಿದ್ದ ರಾಧಾಕೃಷ್ಣ ಶರ್ಮಾ, ರಾಕೇಶ್ ರಾಥೋಡ್ ಹಾಗೂ ಭಾರತಿ ವರ್ಮಾ ಈಗಾಗಲೇ ಸಮಾಜವಾದಿ ಪಕ್ಷ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.